ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕದಿಂದ ಬಿಜೆಪಿಯ 19 ಸಂಸದರು ಆಯ್ಕೆಯಾಗಿದ್ದರೂ ಕೇಂದ್ರ ಸರ್ಕಾರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಕರ್ನಾಟಕಕ್ಕೆ ಕೊಟ್ಟಿರುವುದು ಬರೀ ನಾಮ, ಚೊಂಬು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡಿಸಿರುವ ಬಜೆಟ್ ತನ್ನ ಕುರ್ಚಿ ಬಚಾವೊ ಬಜೆಟ್ ಆಗಿದೆ. ಮೋದಿ ಪ್ರಧಾನಿ ಸ್ಥಾನ ಭದ್ರಪಡಿಸಿಕೊಳ್ಳಲು ಆಂಧ್ರ, ಬಿಹಾರ ಮುಖ್ಯಮಂತ್ರಿಗಳನ್ನು ಓಲೈಸಿಕೊಳ್ಳಲು ಅವರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಅವರ ಮೂಗಿಗೆ ತುಪ್ಪ ಸವರಿರುವುದು ಬಿಟ್ಟರೆ ಅವರಿಗೆ ಯಾವ ಹಣವೂ ಕಾರ್ಯರೂಪಕ್ಕೆ ಬರುವುದಿಲ್ಲ. ಇದು ಆ ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ವರ್ಷ ನಂತರ ಗೊತ್ತಾಗಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಿಂದ 17 ಬಿಜೆಪಿ ಸಂಸದರು, ಇಬ್ಬರು ಜೆಡಿಎಸ್ ಸಂಸದರು ಸೇರಿ 19 ಸಂಸದರನ್ನು ಮೋದಿ ಸರ್ಕಾರಕ್ಕೆ ರಾಜ್ಯದ ಜನತೆ ಕೊಟ್ಟಿದ್ದಾರೆ. ಪ್ರತಿವರ್ಷ ರಾಜ್ಯದಿಂದ 4.5 ಲಕ್ಷ ಕೋಟಿ ಕೇಂದ್ರಕ್ಕೆ ತೆರಿಗೆ ಸಂಗ್ರಹ ಆಗ್ತುತ್ತಿದೆ. ಆದರೆ ಅವರು ರಾಜ್ಯಕ್ಕೆ ಕೊಟ್ಟಿರುವುದು ಚೊಂಬು ಮತ್ತು ನಾಮ ಮಾತ್ರ ಎಂದು ವ್ಯಂಗ್ಯವಾಡಿದರು.ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಇಡಿ, ಐಟಿ, ಸಿಬಿಐ ಮೂಲಕ ಸರ್ಕಾರವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರಿಗೆ ಬಾರೀ ಕೈಗಾರಿಕೆ, ಉಕ್ಕು ಖಾತೆ ನೀಡಲಾಗಿದೆ. ಅವರು ರಾಜ್ಯಕ್ಕೆ ಯಾವ ಹೊಸ ಯೋಜನೆಯನ್ನೂ ತರಲು ಆಗಿಲ್ಲ. ರಾಜ್ಯಕ್ಕೆ ಬಂದರೆ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಬೈಯ್ಯುವುದೇ ಆಗಿದೆ. ಒಂದೇ ಒಂದು ಕೈಗಾರಿಕಾ ಕಾರಿಡಾರ್ ತರಲು ಆಗಲಿಲ್ಲ. ಹಾಗಿದ್ದ ಮೇಲೆ ಮಂತ್ರಿಯಾಗಿ ನೀವು ಮುಂದುವರಿಯಬಾರದು ಎಂದು ಅವರು ಹೇಳಿದರು.ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮನೆಕಟ್ಟಿಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರದಿಂದ 72 ಸಾವಿರ ಮಾತ್ರ ಹಣ ಬಿಡುಗಡೆ ಮಾಡುವುದು. ರಾಜ್ಯ ಸರ್ಕಾರ 1.30 ಲಕ್ಷ ಹಣ ನೀಡುತ್ತದೆ. ಶೇ. 32 ಜಿ.ಎಸ್.ಟಿ ಕಟ್ಟಬೇಕು ಇದರಲ್ಲಿ 38 ಸಾವಿರ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಹಾಗಿದ್ದ ಮೇಲೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಉದ್ದೇಶವಾದರು ಏನು ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ನಾಯಕರಾದ ಆರ್. ಅಶೋಕ್, ಸಿ.ಟಿ. ರವಿ, ಯತ್ನಾಳ್ ಎಸ್ಸಿ, ಎಸ್ಟಿಗಳ ಬಗ್ಗೆ ಬಹಳ ಪ್ರೀತಿ ಇರುವಂತೆ ಮಾತನಾಡುತ್ತಾರೆ. ಎಸ್ಸಿ, ಎಸ್ಟಿಗಳಿಗೆ ನಿಮ್ಮ ಸರ್ಕಾರ ಏನು ಮಾಡಿದೆ ಎಂಬುದನ್ನು ಹೇಳಿ. ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ದೇಶದಲ್ಲೇ ಕೇವಲ 56 ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದೆ. ಇದು ಎಸ್ಸಿ, ಎಸ್ಟಿ ಗಳ ಅಭಿವೃದ್ಧಿನಾ? ನಮ್ಮ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯ ಒಂದರಲ್ಲೇ 43 ಸಾವಿರ ಕೋಟಿ ಮೀಸಲಿಟ್ಟಿದೆ. ದೇಶದಲ್ಲಿ 67 ಕೋಟಿಯಷ್ಟಿರುವ ಎಸ್ಸಿ, ಎಸ್ಟಿಗಳಿಗೆ ನೀವು ಇಟ್ಟಿರುವ ಅನುದಾನ ಸಾಕಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಮೇಯರ್ ಗಳಾದ ಮೋದಾಮಣಿ, ಪುಷ್ಪಲತಾ ಟಿ.ಬಿ. ಚಿಕ್ಕಣ್ಣ, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ಧಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಚ್. ವಾಸು, ಬಿ.ಎಂ. ರಾಮು, ಸೋಮಶೇಖರ್, ಕೆ.ವಿ. ಮಲ್ಲೇಶ್, ಮಾಧ್ಯಮ ವಕ್ತಾರ ಮಹೇಶ್ ಇದ್ದರು.