ರಾಜ್ಯ ಸಾಗುತ್ತಿರುವ ಹಾದಿ ಆತಂಕ ತಂದಿದೆ:

KannadaprabhaNewsNetwork |  
Published : Sep 24, 2025, 01:00 AM IST
ಜನಸ್ತೋಮವೇದಿಕೆಯ ಮೇಲಿನ ಗಣ್ಯರು | Kannada Prabha

ಸಾರಾಂಶ

ಶ್ರದ್ಧಾಂಜಲಿ ಸಮಾರಂಭದ 2ನೇ ದಿನದ ವೇದಿಕೆಯ ಮೇಲೆ ಆಸೀನರಾಗಿದ್ದ ಗಣ್ಯರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ರಾಜ್ಯ ಸರ್ಕಾರ ಸಾಗುತ್ತಿರುವ ದಿಕ್ಕಿನಿಂದ ಆತಂಕ ಸೃಷ್ಟಿಯಾಗಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಸಿರಿಗೆರೆಯಲ್ಲಿ ನಡೆಯುತ್ತಿರುವ ಶಿವಕುಮಾರ್‌ ಶ್ರೀಗಳ ಶ್ರದ್ಧಾಂಜಲಿ 2ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು, ರಾಜ್ಯದಲ್ಲಿ ಇತ್ತೀಚೆಗೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದರು.

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ನೀಡಿರುವ ಸ್ಪಷ್ಟ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಲಿಂಗಾಯತ ಸಮಾಜದ ಗೊಂದಲಗಳನ್ನೆಲ್ಲಾ ಅಧ್ಯಯನ ಮಾಡಿ ಅವರು ತಮ್ಮ ಆಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಸಿರಿಗೆರೆಯ ಬೃಹನ್ಮಠವು ತ್ರಿವಿಧ ದಾಸೋಹದ ಚರಿತ್ರೆಯಲ್ಲಿ ಮೈಲಿಗಲ್ಲಾಗಿದೆ. ಶಿವಮೂರ್ತಿ ಶ್ರೀಗಳು ತ್ರಿವಿಧ ದಾಸೋಹದ ಜೊತೆಗೆ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜಲಋಷಿ, ಆಧುನಿಕ ಭಗೀರಥ, ತಂತ್ರಜ್ಞಾನ ಅರಿತ ಮೇಧಾವಿಯಾಗಿ ಅವರು ನಮ್ಮ ಮುಂದೆ ಇದ್ದಾರೆ ಎಂದರು.

ರಾಜ್ಯದ ವೀರಶೈವ ಲಿಂಗಾಯತ ಮಠಗಳು ಸರ್ಕಾರ ಮಾಡದೇ ಇರುವ ಕೆಲಸವನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾಡಿವೆ. ಮಠ ಮಾನ್ಯಗಳು ಈ ಸೇವೆಯನ್ನು ಮಾಡದೇ ಇದ್ದಿದ್ದರೆ ರಾಜ್ಯದ ಶಿಕ್ಷಣ ಕ್ಷೇತ್ರದ ಭವಿಷ್ಯ ಈಗಿನಂತೆ ಇರುತ್ತಿರಲಿಲ್ಲ ಎಂದರು.

ನಾವು ಆಧುನಿಕ ಯುಗದಲ್ಲಿದ್ದೇವೆ. ಮನುಷ್ಯ ಮನುಷ್ಯನ ಸಂಬಂಧ ವೃದ್ಧಿಯಾಗಬೇಕು. ಆದರೆ ಮನುಷ್ಯರ ಮಧ್ಯೆ ಇರುವ ಸಂಬಂಧಗಳ ಕೊಂಡಿ ಕಳಚುತ್ತಿದೆ. ಮಕ್ಕಳ ಭವಿಷ್ಯದ ಹಿತ ಚಿಂತನೆಯನ್ನೇ ಮಾಡುವ ತಂದೆ ತಾಯಿಯರನ್ನು ಮಕ್ಕಳು ದೂರ ಮಾಡುತ್ತಿದ್ದಾರೆ. ಇಂತಹ ಕೆಲಸಗಳು ನಿಲ್ಲಬೇಕು ಎಂದರು.

ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ, ನೊಂದವರಿಗೆ, ಕಾಯಕ ಜೀವಿಗಳಿಗೆ, ಬಡವಬಲ್ಲಿದನೆಂಬ ತಾರತಮ್ಯ ಭಾವವಿಲ್ಲದೆ ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟುಹಾಕಿದ 12ನೇ ಶತಮಾನದ ಬಸವಣ್ಣನ ವಾರಸುದಾರರಾಗಿದ್ದವರು ಶಿವಕುಮಾರ ಶ್ರೀಗಳು ಎಂದು ನುಡಿದರು.

ಗ್ರಾಮೀಣ ಭಾಗದಲ್ಲಿನ ಅಕ್ಷರವಂಚಿತ ಜನಾಂಗಕ್ಕೆ ಶಾಲೆಗಳನ್ನು ತೆರೆದು ಅವರಿಗೆ ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ನೀಡಿದವರಲ್ಲಿ ಅವರು ಅಗ್ರಗಣ್ಯರು. ಆ ಪರಂಪರೆಯನ್ನು ಶಿವಮೂರ್ತಿ ಸ್ವಾಮೀಜಿ ಮುಂದುವರೆಸಿದ್ದಾರೆ ಎಂದರು.

ಮಠದ ಕೀರ್ತಿ ದೇಶವಲ್ಲದೆ, ವಿದೇಶಗಳಲ್ಲಿಯೂ ಬೆಳೆದಿದೆ. ಆ ಶ್ರಮಕ್ಕೆ ಕಾರಣರಾದವರು ಈಗಿನ ಶಿವಮೂರ್ತಿ ಶ್ರೀಗಳು ಎಂದರು. ತರಳಬಾಳು ಶ್ರೀಗಳು ಕೈಗೆತ್ತಿಕೊಂಡಿರುವ ರೈತರ ಹಿತಚಿಂತನೆಯ ಕೆಲಸಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆ ನಗರದ ವೃತ್ತವೊಂದಕ್ಕೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಹೆಸರನ್ನು ಇಡಲಾಗುವುದು. ಇದನ್ನು ಅವರ ಶ್ರದ್ಧಾಂಜಲಿ ನೆನಪಿನಲ್ಲಿ ಸೆ.24ರಂದು ಅನಾವರಣಗೊಳಿಸಲಾಗುವುದು ಎಂದರು.

ಗದಗಿನ ಅಭಿನವ ಶಿವಾನಂದ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಎಂಎಲ್‌ಸಿ ಧನಂಜಯ ಸರ್ಜಿ, ತುಮ್‌ಕೋಸ್‌ ಅಧ್ಯಕ್ಷ ಎಚ್.‌ಎಸ್.‌ ಶಿವಕುಮಾರ್‌, ಶಿವಮೊಗ್ಗದ ಶುಭಾ ಮರವಂತೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.|

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ