SSLC ರಿಸಲ್ಟ್‌ ಬಂತು! ಆದ್ರೆ, ವ್ಯಾಲುವೇಷನ್‌ ಮಾಡಿದವ್ರ ಸಂಭಾವನೆ ಬಂದಿಲ್ಲ!

KannadaprabhaNewsNetwork |  
Published : May 14, 2024, 01:02 AM ISTUpdated : May 14, 2024, 12:27 PM IST
Gratuity money

ಸಾರಾಂಶ

ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ಆದರೆ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಮಾಡಿದ ಸರ್ಕಾರಿ ಹಾಗೂ ಖಾಸಗಿ ಶಿಕ್ಷಕರ ಸಂಭಾವನೆ ಮಾತ್ರ ಇಂದಿನ ತನಕ ಬಂದಿಲ್ಲ!

 ಗುಂಡ್ಲುಪೇಟೆ :  ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ಆದರೆ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಮಾಡಿದ ಸರ್ಕಾರಿ ಹಾಗೂ ಖಾಸಗಿ ಶಿಕ್ಷಕರ ಸಂಭಾವನೆ ಮಾತ್ರ ಇಂದಿನ ತನಕ ಬಂದಿಲ್ಲ!

ಮೌಲ್ಯಮಾಪಕರ ಸಂಭಾವನೆ ನೀಡಲು ಕೆಎಸ್‌ಇಎಬಿ ಏಕೆ ಮೀನಾ ಮೇಷ ಎಣಿಸುತ್ತಿದೆ. ಈ ಹಿಂದೆ ಮೌಲ್ಯಮಾಪಕರ ಸಂಭಾವನೆ ಬಿಲ್‌ ನೀಡಲು ವಿಳಂಬವಾಗುತ್ತಿದ್ದ ಕಾರಣ ಸಂಭಾವನೆ ಕೂಡ ವಿಳಂಬವಾಗುತ್ತಿತ್ತು. ಆದರೀಗ ಆನ್‌ ಲೈನ್‌ ಮೂಲಕ ಮೌಲ್ಯಮಾಪಕರ ಮಾಡಿದ ಬಿಲ್‌ ಆಗಿದೆ, ಜೊತೆಗೆ ಬಿಲ್‌ ಕೂಡ ಅಪ್ರೂವಲ್‌ ಆಗಿರುವ ಬಗ್ಗೆ ಮೌಲ್ಯಮಾಪಕರಿಗೆ ಏ.೨೪ ರಂದು ಮೊಬೈಲ್‌ ಗೆ ಸಂದೇಶ ಕೂಡ ಬಂದಿದೆ. ಆದರೆ ಸಂಭಾವನೆ ಮಾತ್ರ ಬಂದಿಲ್ಲ ಎಂದು ಶಿಕ್ಷಕರು ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಇತ್ತೀಚಿಗೆ ಬಂದಿದೆ, ಫಲಿತಾಂಶ ಬಂದ ನಂತರ ಮರು ಮೌಲ್ಯಮಾಪನ ಹಾಗೂ ರೀ ಕೌಂಟಿಂಗ್‌ ಕೂಡ ನಡಿಯುತ್ತಿದೆ. ಅಲ್ಲದೆ, ೨ ನೇ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಮುಂದಿನ ತಿಂಗಳು ನಿಗದಿಗೊಂಡಿದೆ. ಆದರೂ ಮೌಲ್ಯ ಮಾಪಕರ ಸಂಭಾವನೆ ಬಂದಿಲ್ಲ.

ಎಸ್ಸೆಸ್ಸೆಲ್ಸಿ ಮೌಲ್ಯ ಮಾಪನ ರಾಜ್ಯಾದಂತ್ಯ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆದಿದೆ. ಒಂದು ಕೇಂದ್ರದಲ್ಲಿ ೧೦೦ಕ್ಕೂ ಹೆಚ್ಚು ಮೌಲ್ಯಮಾಪಕರು, ಸಹ ಮೌಲ್ಯಮಾಪಕರು ಸೇರಿ ಮೌಲ್ಯ ಮಾಪನ ಮಾಡಿದ್ದಾರೆಂದರೆ ರಾಜ್ಯದ ಎಲ್ಲಾ ಮೌಲ್ಯಮಾಪನ ಸೆಂಟರ್‌ನ ಮೌಲ್ಯಮಾಪಕರು ಸೇರಿದರೆ ಸುಮಾರು ೪೦ ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಶಿಕ್ಷಕರು ಮೌಲ್ಯ ಮಾಪನ ಮಾಡಿದ್ದಾರೆ ಎನ್ನಲಾಗಿದೆ. 

ಖಾಸಗಿ ಶಿಕ್ಷಕರು ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಮಾಡಿದ್ದಾರೆ. ಖಾಸಗಿ ಶಾಲಾ ಶಿಕ್ಷಕರಿಗೆ ಬಹುತೇಕ ಶಾಲೆಗಳಲ್ಲಿ ರಜಾ ದಿನಗಳಲ್ಲಿ ಸಂಬಳ ನೀಡುವುದಿಲ್ಲ. ಇಂತ ಸಮಯದಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಮಾಡಿದ ಸಂಭಾವನೆ ಬಂದರೆ ಅನುಕೂಲವಾಗುತ್ತದೆ ಎಂದು ಹೆಸರೇಳಲಿಚ್ಚಿಸದ ಖಾಸಗಿ ಶಿಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

PREV