ಅಭಿವೃದ್ಧಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾದದ್ದು

KannadaprabhaNewsNetwork |  
Published : May 25, 2026, 01:15 AM IST
್ಿ | Kannada Prabha

ಸಾರಾಂಶ

ಭಾರತದಲ್ಲಿ ದೊಡ್ಡ ಕೈಗಾರಿಕೆಗಳ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾಗಿದೆ ಎಂದು ಮೆ. ಏಸ್ ಮೈಕ್ರೋಮ್ಯಾಟಿಕ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ. ರಮೇಶ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುಭಾರತದಲ್ಲಿ ದೊಡ್ಡ ಕೈಗಾರಿಕೆಗಳ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾಗಿದೆ ಎಂದು ಮೆ. ಏಸ್ ಮೈಕ್ರೋಮ್ಯಾಟಿಕ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ. ರಮೇಶ್ ಅಭಿಪ್ರಾಯಪಟ್ಟರು. ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ದಕ್ಷಿಣ ಭಾರತ ಎಂಎಸ್‌ಎಂಇ ಸಮಾವೇಶ ಹಾಗೂ ಕೈಗಾರಿಕಾ ವಸ್ತುಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರದರ್ಶಕರ ಕೈಪಿಡಿ ಬಿಡುಗಡೆ ಮಾಡಿ ಹಾಗೂ ಮಳಿಗೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು.ದೊಡ್ಡ ಕೈಗಾರಿಕೆಗಳು ತಮ್ಮ ಉತ್ಪಾದಿತ ವಸ್ತುಗಳನ್ನು ದೇಶದಿಂದ ಹೊರಗಡೆ ಪರಿಚಯಿಸುತ್ತವೆ. ಆದರೆ ಅವುಗಳ ಬೆಳವಣಿಗೆಗೆ ಸಣ್ಣ ಕೈಗಾರಿಕೆಗಳು ಸಹಕಾರಿಯಾಗಿವೆ. ಭಾರತ ದೇಶದಿಂದ ಸಣ್ಣ ಕೈಗಾರಿಕೆಗಳಿಂದ ಉತ್ಪಾದನೆಯಾಗುವ ವಸ್ತುಗಳು ಶೇ. ೪೦ ರಷ್ಟು ರಫ್ತು ಆಗುತ್ತಿವೆ. ಒಳ್ಳೆಯ ಆಲೋಚನೆಗಳು ಒಳ್ಳೆಯ ಸಮಯದಲ್ಲಿ ಹೊರ ಬಂದರೆ ಅವುಗಳಿಗೆ ಉತ್ತಮ ಭವಿಷ್ಯವಿದೆ. ಇದನ್ನು ಯುವ ಉದ್ಯಮಿಗಳು ಹಾಗೂ ಮುಂದಿನ ದಿನಗಳಲ್ಲಿ ಉದ್ಯಮ ಸ್ಥಾಪನೆ ಮಾಡಲು ಬಯಸುವವರು ಅರಿತುಕೊಳ್ಳಬೇಕು. ಸಣ್ಣ ಕೈಗಾರಿಕೆಗಳಲ್ಲಿ ಉದ್ಯಮಿಗಳು ಗುಣಮಟ್ಟ ಮತ್ತು ಪ್ರಮಾಣವನ್ನು ಕಾಪಾಡಬೇಕು. ಆಗ ಮಾತ್ರ ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಸಣ್ಣ ಕೈಗಾರಿಕೆಗಳಲ್ಲಿ ಕೈ ಕೊಳೆಯಾಗುತ್ತದೆ ಎನ್ನುವುದಕ್ಕಿಂತ ಒಬ್ಬರಿಗೊಬ್ಬರು ಕೈ ಜೋಡಿಸುವ ಕೆಲಸ ಮಾಡಬೇಕು. ಇದರಿಂದ ಸಣ್ಣ ಕೈಗಾರಿಕೆಗಳು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ ಎಂದರು.

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕರಾದ ವಿಷ್ಣುವರ್ಧನ್ ರೆಡ್ಡಿ ಮಾತನಾಡಿ, ಕಾಸಿಯಾ ಒಂದು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದೆ. ಉತ್ತಮ ಯೋಚನೆ, ಯೋಜನೆ ಇದಾಗಿದೆ. ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ. ದಕ್ಷಿಣ ಭಾರತ ಭಾಗದ ಈ ಸಮಾವೇಶ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂದರು.

ಎಂಎಸ್‌ಎಂಇ ಸಮಾವೇಶದ ಉಪಸಮಿತಿ ಅಧ್ಯಕ್ಷ ಹಾಗೂ ಕೈಗಾರಿಕೋದ್ಯಮಿ ಸದಾಶಿವ ಅಮಿನ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಣ್ಣ ಕೈಗಾರಿಕೆಗಳ ಸಮಾವೇಶವನ್ನು ಬೆಂಗಳೂರಿನಲ್ಲಿ ಮಾಡದೆ ಹೊರ ಜಿಲ್ಲೆಗಳಲ್ಲಿ ಆಯೋಜಿಸುವಂತೆ ಮುಂದಿನ ಕಾಸಿಯಾ ಅಧ್ಯಕ್ಷರಾಗುವ ನಿಂಗಣ್ಣ ಎಸ್. ಬಿರಾದರ್ ರವರಿಗೆ ಮನವಿ ಮಾಡಿರುವುದಾಗಿ ಹೇಳಿದರು.

ಭವಿಷ್ಯದಲ್ಲಿ ತುಮಕೂರು ಕೈಗಾರಿಕಾ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ಹಾಗಾಗಿ ತುಮಕೂರಿನಲ್ಲಿ ದಕ್ಷಿಣ ಭಾರತ ಮಟ್ಟದ ಎಂಎಸ್‌ಎಂಇ ಸಮಾವೇಶವನ್ನು ನಡೆಸಿದ್ದೇವೆ. ಈ ಸಮಾವೇಶದ ಅಂಗವಾಗಿ ಸುಮಾರು ೧೫೦ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗಿದ್ದು, ಇದರಿಂದ ಮುಂದೆ ಉದ್ಯಮಿಗಳಾಗುವವರಿಗೆ ಮತ್ತು ಸಣ್ಣ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಬಹಳ ಉಪಯೋಗವಾಗಿದೆ ಎಂದರು. ಮೂರು ದಿನಗಳ ಕಾಲ ನಡೆದ ಈ ಸಮಾವೇಶದಲ್ಲಿ ಕೇವಲ ವೇದಿಕೆ ಕಾರ್ಯಕ್ರಮ ಮಾಡದೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಯುವ ಉದ್ಯಮಿಗಳು ಹಾಗೂ ಮುಂದೆ ಉದ್ಯಮಗಳನ್ನು ಸ್ಥಾಪಿಸುವವರಿಗೆ ಅನುಕೂಲವಾಗುವಂತೆ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೈಗಾರಿಕೆ ಸ್ಥಾಪನೆಗೆ ದೊರೆಯುವ ಸವಲತ್ತು, ಇರುವ ನಿಯಗಳ ಬಗ್ಗೆಯೂ ತಿಳಿಸಲಾಗಿದೆ ಎಂದು ಹೇಳಿದರು. ನಗರದಲ್ಲಿ ಮೂರು ದಿನಗಳ ಕಾಲ ನಡೆದ ಈ ಸಮಾವೇಶ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಮೂರು ದಿನಗಳ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ ನಡೆದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ 9 ಉತ್ತಮ ಮಳಿಗೆಗಳಿಗೆ ಪ್ರಶಸ್ತಿ ಹಾಗೂ 3ಮಳಿಗೆಗಳಿಗೆ ಸಮಾಧಾನಕರ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.ಸಮಾರಂಭದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಎಸ್. ಬೀರಾದರ್, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್, ನಗರ ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಗ್ರಾಮೀಣ ಜಂಟಿ ಕಾರ್ಯದರ್ಶಿ ದಿನೇಶಕುಮಾರ್.ವಿ., ಖಜಾಂಚಿ ಆರ್.ದೊರೈ, ಉಪಸಮಿತಿ ಅಧ್ಯಕ್ಷ ಸದಾಶಿವ ಆರ್.ಅಮೀನ್, ಸಹ ಅಧ್ಯಕ್ಷ ಆನಂದರಾವ್,ಕೆ, ಉಪಸಮಿತಿಯ ಸಲಹೆಗಾರರಾದ ಶ್ರೀಕಂಠದತ್ತ ಪಿ.ಎಸ್., ಕಿರಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

---------------------------

ಕೋಟ್‌.... ಸಣ್ಣ ಕೈಗಾರಿಕಾ ವಲಯವು ಪರಸ್ಪರ ಸಂಪರ್ಕ ಸಾಧಿಸಲು, ಸಹಕಾರ ಬೆಳೆಸಿಕೊಳ್ಳಲು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು ಈ ಸಮಾವೇಶ ಸಹಕಾರಿಯಾಗಿದೆ. ಇಲ್ಲಿ ನಡೆದ ತಾಂತ್ರಿಕ ಅಧಿವೇಶನಗಳು, ಪ್ಯಾನೆಲ್ ಚರ್ಚೆಗಳು, ಖರೀದಿದಾರರ-ಮಾರಾಟಗಾರರ ಸಂವಾದಗಳು ಮತ್ತು ಕೈಗಾರಿಕಾ ಪ್ರದರ್ಶನಗಳು ಉದ್ಯಮಿಗಳಿಗೆ ಅಮೂಲ್ಯ ಅನುಭವ ಮತ್ತು ಕಲಿಕೆಯ ಅವಕಾಶಗಳನ್ನು ಒದಗಿಸಿವೆ ಎಂದು ಹೇಳಿದರು.

- ಗಣೇಶ್ ರಾವ್, ಕಾಸಿಯಾ ಅಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಿಗೆ ಸೂಕ್ತ ಮಾರುಕಟ್ಟೆ ರೂಪಿಸಿಲ್ಲ
ತುಮಕೂರನ್ನು ಬೆಂಗಳೂರು ಉತ್ತರ ಮಾಡಲು ವಿರೋಧ