ಕೆಆರ್‌ಎಸ್‌ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ನೀಡಿದ್ದ ಹಕ್ಕುಪತ್ರ ಸಿಂಧುವಲ್ಲ: ರಮೇಶ ಬಂಡಿಸಿದ್ದೇಗೌಡ

KannadaprabhaNewsNetwork |  
Published : Jun 04, 2025, 12:33 AM IST
3ಕೆಎಂಎನ್ ಡಿ20 | Kannada Prabha

ಸಾರಾಂಶ

ಇತ್ತೀಚೆಗಷ್ಟೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪಟ್ಟಣ್ಣಯ್ಯ ಪ್ರವೇಶ ದರ ಹಾಗೂ ಟೋಲ್ ಸಂಗ್ರಹದ ವಿರುದ್ಧ ಕೆಆರ್‌ಎಸ್ ಪ್ರವೇಶ ದ್ವಾರದ ಮುಂಭಾಗ ಧರಣಿ ನಡೆಸಿ, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೆ, ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಸರ್ಕಾರ ಬೆಲೆ ಏರಿಸಿದ್ದ ಕ್ರಮವನ್ನು ಸಮರ್ಥಿಸಿಕೊಂಡರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಈ ಹಿಂದೆ ನೀಡಲಾಗಿದ್ದ ಹಕ್ಕುಪತ್ರಗಳು ಸಿಂಧುವಲ್ಲ. ಕೆಲ ದಿನಗಳಲ್ಲಿ ಇಲ್ಲಿನ ಜನತೆಗೆ ಮತ್ತೆ ಹಕ್ಕುಪತ್ರ ವಿತರಿಸುವುದಾಗಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ತಾಲೂಕಿನ ಕೆಆರ್‌ಎಸ್ ಗ್ರಾಮದಲ್ಲಿ 10 ಕೋಟಿ ರು. ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ಹಿಂದಿನ ಅವಧಿಯಲ್ಲಿ ಇಲ್ಲಿನ ನಿವಾಸಿಗಳಿಗೆ ವಿತರಿಸಲಾಗಿದ್ದ ಹಕ್ಕುಪತ್ರಗಳು ಕ್ರಮಬದ್ಧವಾಗಿಲ್ಲ. ಜೊತೆಗೆ ಅಧಿಕೃತವಲ್ಲದ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಪ್ರತಿ ಮನೆ, ಮನೆಗಳಿಗೆ ತೆರಳಿ ಹಕ್ಕುಪತ್ರ ವಿತರಿಸುವುದಾಗಿ ತಿಳಿಸಿದರು.

ಕೆಆರ್‌ಎಸ್ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಅಧಿಕ ಶುಲ್ಕ ವಸೂಲಿ ಹಾಗೂ ಟೋಲ್ ಸಂಗ್ರಹ ಮಾಡುತ್ತಿರವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಶುಲ್ಕ ವಸೂಲಿ ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ನಡೆಯುತ್ತಾ ಬಂದಿದೆ ಎಂದರು.

ಪ್ರವಾಸಿಗರಿಗೆ ನಾವೇನು 500 ರು. ಶುಲ್ಕ ವಿಧಿಸುತ್ತಿಲ್ಲ. ಒಂದು ಒಳ್ಳೆಯ ಹೋಟೆಲ್‌ನಲಿ ಕಾಫಿ ಕುಡಿದರೆ 150 ರಿಂದ 200 ರು. ಕೊಡಬೇಕು ಎಂದು ಬೃಂದಾವನ ಪ್ರವೇಶ, ವಾಹನ ಪಾರ್ಕಿಂಗ್ ಮತ್ತು ಟೋಲ್ ಶುಲ್ಕ ಏರಿಕೆಯನ್ನು ಸಮರ್ಥಿಸಿಕೊಂಡರು.

ಇತ್ತೀಚೆಗಷ್ಟೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪಟ್ಟಣ್ಣಯ್ಯ ಪ್ರವೇಶ ದರ ಹಾಗೂ ಟೋಲ್ ಸಂಗ್ರಹದ ವಿರುದ್ಧ ಕೆಆರ್‌ಎಸ್ ಪ್ರವೇಶ ದ್ವಾರದ ಮುಂಭಾಗ ಧರಣಿ ನಡೆಸಿ, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೆ, ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಸರ್ಕಾರ ಬೆಲೆ ಏರಿಸಿದ್ದ ಕ್ರಮವನ್ನು ಸಮರ್ಥಿಸಿಕೊಂಡರು.

ಕಾವೇರಿ ನದಿ ತೀರದ ಒತ್ತುವರಿ ಬಗ್ಗೆ ಪ್ರತಿಕ್ರಿಯಿಸಿ, ಬಫೋರ್ ಝೋನ್‌ನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರನ್ನು ತೆರವು ಮಾಡಿಸಲೇಬೇಕು. ಪ್ರಕೃತಿಗಿಂತ ಯಾರೂ ದೊಡ್ಡವರಲ್ಲ ಎಂದು ಬಫೋರ್ ಝೋನ್ ನಲ್ಲಿ ಅಕ್ರಮ ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಖಡಕ್ ಎಚ್ಚರಿಕೆ ನೀಡಿದರು.

ಚಿತ್ರ ನಟ ಕಮಲ್‌ ಹಾಸನ್ ಅವರ ಹೇಳಿಕೆಗೆ, ಶಾಸಕರು ಯಾರೇ ಆಗಲೀ ಇತರ ಭಾಷೆಗಳಿಗೆ ಧಕ್ಕೆಯಾಗುವ ಹಾಗೆ ಮಾತನಾಡಬಾರದು. ಈ ವಿಷಯದಲ್ಲಿ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೋರಲೇಬೇಕು ಎಂದು ಆಗ್ರಹಿಸಿದರು.

ಇಂದು ಐಪಿಎಲ್ ಮ್ಯಾಚ್ ಇದ್ದು 17 ವರ್ಷಗಳ ಕಾಯುವಿಕೆಗೆ ಇಂದು ಮುಕ್ತಿ ಸಿಗಲಿದೆ. ಶ್ರೀಚಾಮುಂಡೇಶ್ವರಿ ದೇವಿ, ಶ್ರೀರಂಗನಾಥ ಸ್ವಾಮಿ, ಶ್ರೀನಿಮಿಷಾಂಬ ದೇವಿಯ ಅನುಗ್ರಹದೊಂದಿಗೆ ಇಂದು ಆರ್‌ಸಿಬಿಗೆ ಜಯವಾಗಲಿದೆ. ಈ ಸಲ ಕಪ್ ನಮ್ದೇ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಜನಪರವಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಹಲವು ಅಭಿವೃದ್ಧಿ ಕೆಲಸಗಳಿಗೆ ಮುಂದಾಗಿದೆ. ವಿರೋಧ ಪಕ್ಷದವರ ಹೇಳಿಕೆಗಳಿಗೆ ಕಿವಿಗೊಡಬೇಡಿ ಎಂದರು.

ಸರ್ಕಾರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದೆ. ಅಮ್ಯೂಸ್ ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆಗಳಿಗೆ ಶೀಘ್ರದಲ್ಲೇ ಚಾಲನೆ ನೀಡುವುದಾಗಿ ತಿಳಿಸಿದರು.

ನಂತರ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ 4.98 ಕೋಟಿ ರು. ವೆಚ್ಚದಲ್ಲಿ ದೇವರಾಯ ಮುಖ್ಯ ಕಾಲುವೇಯಡಿ ಬರುವ ಉಪ ಶಾಖೆಗಳಾದ ಬೇವಿನತಾಳು, ಪೇಟೆಗದ್ದೆ, ಬೊಮ್ಮರು ಶಾಖೆ ನಾಲೆಗಳಿಗೆ ಸಿಸಿ ಗ್ರ್ರೌಂಡ್ ಟ್ರಫ್ ಅಭಿವೃದ್ಧಿ ಕಾಮಗಾರಿ. ಪಟ್ಟಣದ ದರಿಯಾದೌಲತ್ ಬಾಗ್ ಮುಂಭಾಗದ ಚಂದಗಾಲು ರಸ್ತೆ ಹಾಗೂ 5 ಕೋಟಿ ರು. ವೆಚ್ಚದಲ್ಲಿ ತಾಲೂಕಿನ ಕೂಡಲಕುಪ್ಪೆ ಬಳಿಯ ಎರಮಣಿ ಪಿಕಪ್ ನಾಲೆಯ ಆಧುನೀಕರಣ ಕಾಮಗಾರಿಗೆ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಞಾನವನ್ನು ಓಡಿಸಿ ಜ್ಞಾನ ಬೆಳಗುವ ಗುರುವಿಗೆ ಗುಲಾಮರಾಗಿ: ಡಿ.ನಾರಾಯಣಪ್ಪ
ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ