ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಸತತ ಅಭ್ಯಾಸ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಶ್ರದ್ಧೆಯ ಫಲವಾಗಿ ಪಡೆದ ಎಂಜಿನಿಯರಿಂಗ್ ಪದವಿ ಉಜ್ವಲ ಭವಿಷ್ಯದ ಮೈಲುಗಲ್ಲಾಗಿದೆ. ಇಂದಿನ ಸ್ಪಧಾತ್ಮಕ ಜಗತ್ತಿನಲ್ಲಿ ನೀವು ಕೈಗೊಳ್ಳುವ ಅಚಲ ನಿರ್ಧಾರ ಮುಖ್ಯವಾಗುತ್ತದೆ ಎಂದು ಗದಗ ಮಹಾತ್ಮಾಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ನಾಡಗೌಡರ ಹೇಳಿದರು.
ಆಧುನಿಕ ತಾಂತ್ರಿಕ ಮತ್ತು ಔದ್ಯೋಗಿಕ ಯುಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದರೂ ಸ್ಪರ್ಧಾತ್ಮಕ ಮನೋಭಾವ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನ (ಪದವಿ) ದ ನಂತರ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ನಿಮ್ಮ ಸುಂದರ ಭವಿಷ್ಯಕ್ಕಾಗಿ ಪಾಲಕರು ಹತ್ತಾರು ಆಸೆ-ಕನಸು ಹೊತ್ತು ತಮ್ಮನ್ನೇ ಸಮರ್ಪಿಸಿಕೊಂಡಿರುತ್ತಾರೆ. ಜೀವನದಲ್ಲಿ ಕೀಳರಿಮೆ ಬಿಟ್ಟು ದೃಢ ನಿರ್ಧಾರ, ಪ್ರಯತ್ನ, ಶಿಸ್ತು ರೂಢಿಸಿಕೊಳ್ಳಿ. ಕಲಿತ ಶಾಲೆ-ಕಾಲೇಜು, ಶಿಕ್ಷಕರು, ಪಾಲಕರ ಬಗ್ಗೆ ಸದಾ ಪ್ರೀತಿ, ಗೌರವವಿರಲಿ. ವಿದೇಶಕ್ಕೆ ಹೋದವರು ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳದಿರಿ, ಪಾಲಕರ ನಿರ್ಲಕ್ಷ್ಯ ಈಗ ಕಾನೂನು ಅಪರಾಧ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಮಾತನಾಡಿದರು. ಯುವ ಎಂಜಿನಿಯರುಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನ ಕಂಡು ಹಿಡಿದು ದೇಶದ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ಸಲ್ಲಿಸಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು. ದಿ. ವೆಂಕಪ್ಪ ಅಗಡಿಯವರು ಗ್ರಾಮೀಣ ಭಾಗದ ಬಡ, ರೈತರ ಮಕ್ಕಳು ಎಂಜಿನಿಯರಿಂಗ್ ಶಿಕ್ಷಣ ಹೊಂದಬೇಕು ಎಂಬ ಸದುದ್ದೇಶದಿಂದ ಸ್ಥಾಪಿಸಿದ ಅಗಡಿ ಸಂಸ್ಥೆಯು ೨ ದಶಕಗಳಿಂದ ಶಿಕ್ಷಣ ರಂಗದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ವೇದಿಕೆ ಮೇಲೆ ಡಾ.ಎನ್. ಹಯವದನ, ಡಾ. ಸುಭಾಸ ಮೇಟಿ, ಪ್ರೊ. ವಿಕ್ರಂ ಶಿರೋಳ, ಪ್ರೊ. ಸ್ವಪ್ನ ಚನ್ನಗೌಡರ, ಡಾ.ಅರುಣ ಕುಂಬಿ, ಡಾ. ಆರ್.ಎಂ. ಪಾಟೀಲ, ಡಾ. ಸಂತೋಷ ಬುಜರಿ, ಡಾ. ರಾಜಶೇಖರ ಕುಣಬೇವು, ಡಾ.ಶ್ರೀನಿವಾಸ್ ಆರ್, ಡಾ. ಗಿರೀಶ ಯತ್ನಳ್ಳಿ, ರವಿ ಚೌವ್ಹಾಣ, ಮುಕುಂದ ಡಿ, ಪ್ರೊ. ಸೋಮಶೇಖರ ಕೆರಿಮನಿ, ಪ್ರೊ.ಎಸ್.ಎಫ್. ಕೊಡ್ಲಿ, ಪ್ರೊ. ಅರುಣಕುಮಾರ ಸೇರಿ ವಿವಿಧ ವಿಭಾಗಗಳ ಉಪನ್ಯಾಸಕರು, ಪಾಲಕರು ಇದ್ದರು. ಪ್ರೊ. ಬಸವರಾಜ ಸೊರಟೂರ, ವಿದ್ಯಾರ್ಥಿ ಅಪೂರ್ವ, ಸೃಷ್ಟಿ ನಿರೂಪಿಸಿದರು.