ಬಣ್ಣದ ಬದುಕು ಮುಗಿಸಿದ ರಂಗಕರ್ಮಿ ಯಶವಂತ ಸರದೇಶಪಾಂಡೆ

KannadaprabhaNewsNetwork |  
Published : Sep 30, 2025, 12:00 AM IST

ಸಾರಾಂಶ

ಆಧುನಿಕ ಕನ್ನಡ ರಂಗಭೂಮಿಯಲ್ಲಿ ಎಂತಹ ನಾಟಕಗಳಿದ್ದರೂ ಪ್ರೇಕ್ಷಕರ ಕೊರತೆ ಅನುಭವಿಸುತ್ತಿರುವ ಸಂದರ್ಭದಲ್ಲಿ ತಮ್ಮ ಚುಟುಕು ಹಾಸ್ಯ ನಾಟಕಗಳ ಮೂಲಕವೇ ಪ್ರೇಕ್ಷಕರನ್ನು ಮರಳಿ ರಂಗಮಂದಿರಗಳಿಗೆ ಎಳೆದು ತಂದ ಕೀರ್ತಿ ಯಶವಂತ ಸರದೇಶಪಾಂಡೆ ಅವರಿಗೇ ಸಲ್ಲಬೇಕು.

ಬಸವರಾಜ ಹಿರೇಮಠ

ಧಾರವಾಡ:

ನಗೆ ನಾಟಕಕಾರ, ನಿರ್ದೇಶಕ, ಕಿರುತೆರೆ ಹಾಗೂ ಸಿನಿಮಾ ನಟರೂ ಆಗಿದ್ದ ಡಾ. ಯಶವಂತ ಸರದೇಶಪಾಂಡೆ (60) ಬದುಕಿನ ಪಾತ್ರದ ಬಣ್ಣ ಕಳಚಿದ್ದು, ರಂಗಭೂಮಿಯಲ್ಲೊಂದು ಖಾಲಿತನ ಸೃಷ್ಟಿಸಿ ಮರಳಿಬಾರದ ಲೋಕದತ್ತ ಪಯಣ ಬೆಳೆಸಿದ್ದಾರೆ.

ಆಧುನಿಕ ಕನ್ನಡ ರಂಗಭೂಮಿಯಲ್ಲಿ ಎಂತಹ ನಾಟಕಗಳಿದ್ದರೂ ಪ್ರೇಕ್ಷಕರ ಕೊರತೆ ಅನುಭವಿಸುತ್ತಿರುವ ಸಂದರ್ಭದಲ್ಲಿ ತಮ್ಮ ಚುಟುಕು ಹಾಸ್ಯ ನಾಟಕಗಳ ಮೂಲಕವೇ ಪ್ರೇಕ್ಷಕರನ್ನು ಮರಳಿ ರಂಗಮಂದಿರಗಳಿಗೆ ಎಳೆದು ತಂದ ಕೀರ್ತಿ ಯಶವಂತ ಸರದೇಶಪಾಂಡೆ ಅವರಿಗೇ ಸಲ್ಲಬೇಕು. ಬಾಲ್ಯದಿಂದಲೇ ಅಭಿಯನದತ್ತ ಒಲವು ಇದ್ದಂತ ಡಾ. ಯಶವಂತ, ಎಸ್ಸೆಸ್ಸೆಲ್ಸಿ, ಐಟಿಐ ಮುಗಿಸಿ ಕಿರ್ಲೋಸ್ಕರ ಕಂಪನಿಯಲ್ಲಿ ನೌಕರಿ ಮಾಡಿದರು. ನಂತರ ಹೆಗ್ಗೋಡಿನ ನೀನಾಸಂನಲ್ಲಿ ರಂಗ ಡಿಪ್ಲೊಮಾ ಮುಗಿಸಿದರು. ನ್ಯೂಯಾರ್ಕ್‌ ವಿಶ್ವವಿದ್ಯಾಯದಿಂದ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಸಹ ಪಡೆದಿದ್ದರು.

ತಿರವು ಪಡೆದ ಮರಾಠಿ ನಾಟಕ:

ಕೆಲ ವರ್ಷಗಳ ಕಾಲ ನಾಗಪೂರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಕೂಡಾ ದೇಶಾದ್ಯಂತ ಕಾರ್ಯಕ್ರಮ ಸಂಘಟನೆಯ ಹೊಣೆ ಹೊತ್ತಿದ್ದರು. ಇದಾದ ಬಳಿಕ ಯಶವಂತ ಮರಾಠಿಯ ಆಲ್‌ ದಿ ಬೆಸ್ಟ್‌ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿ, ನಿರ್ದೇಶನ ಮಾಡಿ ಕನ್ನಡ ರಂಗಭೂಮಿಗೆ ತಂದಿದ್ದು ಈ ಕ್ಷೇತ್ರಕ್ಕೆ ಕೊಟ್ಟ ಬಹುದೊಡ್ಡ ತಿರುವು. ಆಲ್‌ ದಿ ಬೆಸ್ಟ್‌ ನಾಟಕ ಪ್ರದರ್ಶನಗಳಿಗೆ ಸಾಲು ಹಚ್ಚಿ ಟಿಕೆಟ್‌ ಕೊಂಡು ರಂಗಭೂಮಿಗೆ ವಿಶೇಷ ತಿರುವು ತಂದುಕೊಟ್ಟರು. ಅಲ್ಲಿಂದ ಆರಂಭಗೊಂಡ ಹಾಸ್ಯ ನಾಟಕಗಳ ಪಯಣ ಯಶವಂತರೊಂದಿಗೆ ಇತ್ತೀಚೆಗಿನ ಅಮರ ಮಧುರ ಪ್ರೇಮ ವರೆಗೆ ಸಾಗಿ ಬಂದಿದೆ.

ಸಹಿ ರೀ ಸಹಿ ಸಂಚಲನ:

ಈ ಮಧ್ಯೆ ಸಹಿ ರೀ ಸಹಿ ನಾಟಕ ಕನ್ನಡ ರಂಗಭೂಮಿಯಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಅದಾದ ನಂತರ ಒಂದಾಟ ಭಟ್ಟರದ್ದು, ಹಿಂಗಾದರೆ ಡಾಟ್‌ ಕಾಮಿಡಿ, ಹೀಗೆಕೆ ನೀ ದೂರ ಓಡುವೆ.. ಸೇರಿದಂತೆ ಹಲವು ಹಾಸ್ಯ ನಾಟಕಗಳನ್ನು ಮರಾಠಿಯಿಂದ ಕನ್ನಡಕ್ಕೆ ತಂದು ಹೊಸದೊಂದು ಇತಿಹಾಸ ಸೃಷ್ಟಿಸಿದ್ದರು. ಜೊತೆಗೆ ಕಿರುತೆರೆ, ಸಿನಿಮಾ, ಪುಸ್ತಕ ಬರವಣಿಗೆ, ಪತ್ರಿಕೆಗಳಿಗೆ ಲೇಖನ ಬರವಣಿಗೆ ಹೀಗೆ ಹಲವು ಆಯಾಮಗಳಲ್ಲಿ ತಮ್ಮ ಕ್ರಿಯಾಶೀಲತೆ ಮೆರೆದು ಮರೆಯಾಗಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲೊಂದು ದೊಡ್ಡ ನಿರ್ವಾತ ಸೃಷ್ಟಿಸಿದ್ದಾರೆ.

ಕಮಲಗೆ ಕಲಿಸಿದರು:

ರಾಮ ಭಾಮಾ ಶಾಮಾ ಸಿನಿಮಾದಲ್ಲಿ ಕಮಲ ಹಾಸನ ಅವರಿಗೆ ಉತ್ತರ ಕರ್ನಾಟಕ ಭಾಷೆ ಕಲಿಸಿದ್ದು, ಅವರೊಂದಿಗೆ ತಾವು ಸಹ ನಟಿಸಿ ಸಿನಿಮಾದಲ್ಲಿ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡವರು ಯಶವಂತ ಸರದೇಶಪಾಂಡೆ. ಜತೆಗೆ ಹಲವಾರು ಸಿನಿಮಾಗಳಲ್ಲಿ ಪಾತ್ರ ವಹಿಸಿ ವಿಶೇಷ ಅಭಿನಯ ಶೈಲಿಯಿಂದ ಸಿನಿಮಾರಂಗದಲ್ಲೂ ಛಾಪು ಮೂಡಿಸಿದ್ದರು. ತಮ್ಮ ಗುರುಬಲ ಎಂಟರಟೇನರ್ಸ್‌ ಮೂಲಕ ರಂಗ ಸಂಗ ಗಂಗ, ಯಾರಿಗೆ ಇಡ್ಲಿ, ಐಡಿಯಾ ಮಾಡ್ಯಾರ ಎಂಬ ಸಿನಿಮಾಗಳನ್ನು ನಿರ್ದೇಶಿಸಿ ನಟನೆ ಸಹ ಮಾಡಿದ್ದಾರೆ. ಗುರು ಇನ್‌ಸ್ಟಿಟ್ಯೂಟ್‌ ಮೂಲಕ ಹುಬ್ಬಳ್ಳಿಯಲ್ಲಿ ಆದಿರಂಗ ರಂಗ ಭೂಮಿ ಕಟ್ಟಿ ರಂಗ ತರಬೇತಿ ಸಹ ನೀಡುತ್ತಿದ್ದರು. ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಪುಸ್ತಕಗಳ ರಚನೆ ಮಾಡಿದ್ದಾರೆ. ದಾವಣಗೆರೆಯ ವೃತ್ತಿರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅವರ ರಂಗ ಸಾಧನೆಗೆ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ಅವರ ಬಹುತೇಕ ನಾಟಕಗಳು ಅಮೆರಿಕ, ಇಂಗ್ಲೆಂಡ್‌, ಅಬುದಬಿ, ದುಬೈ, ಕತಾರ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡು ಅಲ್ಲಿಯ ಕನ್ನಡಿಗರ ಮನಸೂರೆಗೊಂಡಿದ್ದನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಅಮೆರಿಕೆಯಲ್ಲಿ ನಡೆದ ನಾವಿಕ ಸಮ್ಮೇಳನದಲ್ಲಿ ಅಮರ ಮಧುರ ಪ್ರೇಮ ನಾಟಕವನ್ನು ಪ್ರದರ್ಶಿಸಿದ್ದರು.

ಜನ್ಮದಿನ ಆಚರಣೆ:

ತಮ್ಮ 60ನೇ ಜನ್ಮದಿನದ ಪ್ರಯುಕ್ತ ಇತ್ತೀಚೆಗೆ ಬೆಂಗಳೂರಿನ ಪ್ರೆಸ್ಟೀಜ್‌ ಸೆಂಟರ್‌ ಫಾರ್‌ ಫರಫಾರ್ಮಿಂಗ್‌ ಆರ್ಟ್ಸನಲ್ಲಿ ಇಡೀ ದಿನ ಉತ್ತರ ಕರ್ನಾಟಕದ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸಿದ್ದರು. ಸಂಗೀತ, ನಾಟಕ, ಹಾಡುಗಳ ಆಯೋಜನೆ ಮೂಲಕವೇ ಜನ್ಮದಿನ ಆಚರಿಸಿದ್ದು ವಿಶೇಷ. ಇತ್ತೀಚೆಗೆ ಸೃಜನಾ ರಂಗಮಂದಿರದಲ್ಲಿ ರಾಶಿಚಕ್ರ ನಾಟಕ ಪ್ರದರ್ಶನ ಏರ್ಪಡಿಸಿ ಅವರಿಗೆ ಇದೇ ಸಂದರ್ಭದಲ್ಲಿ ಧಾರವಾಡದ ಸ್ನೇಹಿತರು ವಿಶೇಷ ಅಭಿನಂದನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಟೈಮಿಂಗ್‌ ನಟ..

ಕನ್ನಡ ರಂಗಭೂಮಿಯಲ್ಲಿ ಅದ್ಭುತವಾದ ಟೈಮಿಂಗ್‌ ನಟರಲ್ಲಿ ಯಶವಂತ ಕೂಡಾ ಒಬ್ಬರು. ಅವರೊಂದಿಗೆ 35 ವರ್ಷಗಳ ಗೆಳೆತನ. ಅವರು ಎಲ್ಲಿರುತ್ತಿದ್ದರೋ ಅಲ್ಲಿ ನಗೆ ಇರುತ್ತಿತ್ತು. ಪ್ರತಿ ಮಾತಿನಲ್ಲೂ ನಗೆ ಇರುವಂತೆ ನೋಡಿಕೊಳ್ಳುತ್ತಿದ್ದರು. ರಂಗಭೂಮಿ ಅವರಿಂದ ಇನ್ನೂ ಬಹಳಷ್ಟು ಅಪೇಕ್ಷೆ ಮಾಡುವಾಗ ವಿದಾಯ ಹೇಳಿದ್ದು ನೋವಿನ ಸಂಗತಿ. ಅವರ ನಾಟಕಗಳಾದ ಸಹಿ ರೀ ಸಹಿ, ಹಿಂಗಾದರೆ ಡಾಟ್‌ ಕಾಮೀಡಿ, ಸೂಪರ್‌ ಸಂಸಾರಗಳಲ್ಲಿ ನಾನು ಸಹ ನಟಿಸಿದ್ದು ಈಗ ಅವರಿಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ ಎಂದು ಆಪ್ತ ಸ್ನೇಹಿತ, ರಂಗಕರ್ಮಿ ರವಿ ಕುಲಕರ್ಣಿ ಡಾ. ಯಶವಂತ ಅವರನ್ನು ಸ್ಮರಿಸುತ್ತಾರೆ.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ