ಬೆಂಗಳೂರು : ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕಸ ಉತ್ಪಾದನೆ ಹೆಚ್ಚಾಗಿದ್ದು, ರಸ್ತೆ ಬದಿ, ಮಾರುಕಟ್ಟೆಗಳಲ್ಲಿ ಕಸ ವಿಲೇವಾರಿಯಾಗದೇ ಗಬ್ಬು ನಾರುವ ಪರಿಸ್ಥಿತಿ ಉಂಟಾಗಿದೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ದಿನಕ್ಕೆ 4,900 ಮೆ.ಟನ್ ತ್ಯಾಜ್ಯ ಉತ್ಪಾದನೆಯಾಗಲಿದ್ದು, ದಸರಾ ಹಬ್ಬದ ಹಿನ್ನೆಲೆಯಲ್ಲಿ ಕಸದ ಉತ್ಪಾದನೆ ಏಕಾಏಕಿ ಮೂರು ಪಟ್ಟು ಅಧಿಕಗೊಂಡಿದೆ. ಈ ನಡುವೆ ಪೌರಕಾರ್ಮಿಕರು ಹಾಗೂ ಕಸ ವಿಲೇವಾರಿ ಸಿಬ್ಬಂದಿಯು ಹಬ್ಬದ ಹಿನ್ನೆಲೆಯಲ್ಲಿ ರಜೆ ಹಾಕಿರುವುದರಿಂದ ಕಸ ವಿಲೇವಾರಿಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಹೀಗಾಗಿ, ನಗರದ ರಸ್ತೆಗಳಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ರಾಶಿ ರಾಶಿ ಕಸ ಶೇಖರಣೆಯಾಗಿದೆ.
ದಸರಾ ಹಬ್ಬದ ಹಿನ್ನೆಲೆ ಆಯುಧ ಪೂಜೆಗಾಗಿ ನಗರದ ಎಲ್ಲಾ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಬಾಳೆ ಕಂದು, ಬೂದು ಕುಂಬಳಕಾಯಿ, ಎಲೆಗಳು ಹಾಗೂ ಹೂವು ಮಾರಾಟ ಮಾಡಲಾಗಿದೆ. ಇದರಿಂದ ಉತ್ಪತ್ತಿಯಾದ ತ್ಯಾಜ್ಯವನ್ನು ಸ್ಥಳದಲ್ಲೇ ಬಿಟ್ಟಿದ್ದಾರೆ. ಮನೆ ಮನೆಗಳಲ್ಲಿ ಸಂಗ್ರಹಿಸುವ ತ್ಯಾಜ್ಯವು ಅಧಿಕಗೊಂಡಿದೆ. ಅದನ್ನು ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಹಾಕಿದ್ದಾರೆ. ಸಣ್ಣ ಪ್ರಮಾಣದಲ್ಲಿ ಮಳೆ ಬರುತ್ತಿರುವುದರಿಂದ ಕಸದಲ್ಲಿ ನೀರು ಹೆಚ್ಚಾಗಿ ಕೊಳೆತ ವಾಸನೆ ಬರುತ್ತಿದೆ.
ನಗರದಲ್ಲಿ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್ ಮಾರುಕಟ್ಟೆ, ಗಾಂಧಿ ಬಜಾರ್, ದೇವಸಂದ್ರ ಮಾರುಕಟ್ಟೆ, ಕೆ.ಆರ್ ಪುರ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ರಸಲ್ ಮಾರುಕಟ್ಟೆ, ಪಾಲಿಕೆ ಬಜಾರ್ ಸೇರಿದಂತೆ 12 ಮಾರುಕಟ್ಟೆಗಳಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಉತ್ಪಾದನೆ ಆಗದೆ.
ಈ ಪೈಕಿ ಸುಮಾರು 900 ಟನ್ ತ್ಯಾಜ್ಯವನ್ನು ಅ.1ರಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿ ವಿಲೇವಾರಿ ಮಾಡಿದೆ. ಅ.2 ರಂದು 2 ಸಾವಿರ ಟನ್, ಅ.3 ರಂದು ನಗರದ ವಿವಿಧ ವಾರ್ಡ್ ಸೇರಿದಂತೆ ಸುಮಾರು 2 ಸಾವಿರ ಟನ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ.
ನಗರದ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚುವರಿಯಾಗಿ ತ್ಯಾಜ್ಯ ಉತ್ಪಾದನೆಯಾಗಿದ್ದ ಕಾರಣ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳ ನೇತೃತ್ವದಲ್ಲಿ ಹೆಚ್ಚುವರಿಯಾಗಿ ಜೆಸಿಬಿಗಳನ್ನು ಬಳಸಿಕೊಂಡು ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ವಿಲೇವಾರಿ ಮಾಡುವ ಕೆಲಸ ಮಾಡಲಾಗಿದೆ.
ದಸರಾ ಹಬ್ಬದಿಂದ ಉತ್ಪತ್ತಿಯಾದ ತ್ಯಾಜ್ಯವನ್ನು ಕಾಲಮಿತಿಯೊಳಗಾಗಿ ತೆರವುಗೊಳಿಸುವ ಕೆಲಸ ಹಾಗೂ ರಸ್ತೆ ಬದಿ ಉತ್ಪತ್ತಿಯಾಗುವ ಕಸ ಸುರಿಯುವ ಸ್ಥಳಗಳನ್ನು ಕೂಡ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.