ಜಗಕ್ಕೆ ಅನ್ನ ನೀಡುವ ರೈತನ ಸಂಕಷ್ಟ ಕೇಳುವವರಿಲ್ಲ

KannadaprabhaNewsNetwork |  
Published : Jul 17, 2026, 02:00 AM IST
ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ಜಾಗೃತ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಯಾವುದೇ ನೀರಾವರಿ ಯೋಜನೆಗಳಿಗೆ ಒಂದು ರುಪಾಯಿ ಬಿಡಿಗಾಸು ನೀಡಿಲ್ಲ. ಜಮೀನುಗಳಿಗೆ ಒಡ್ಡು ನಿರ್ಮಿಸುವ ಕಾರ್ಯಕ್ರಮ, ಬೀಜ, ಗೊಬ್ಬರದ ಮೇಲಿನ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ. ಬೆಳೆಗೆ ನೀರು ಕೇಳಿದರೆ ಜೈಲಿಗೆ ಹಾಕುವ ಕಾರ್ಯವಾಗುತ್ತಿದೆ.

ಹುಬ್ಬಳ್ಳಿ:

ಈಗಿನ ಜನಪ್ರತಿನಿಧಿಗಳು ಹಸಿರು ವಸ್ತ್ರ ಧರಿಸಿ ಘೋಷಣೆ ಹಾಕಿಸಿಕೊಳ್ಳಲು ಮಾತ್ರ ರೈತರನ್ನು ಸೀಮಿತಗೊಳಿಸಿದ್ದಾರೆ. ಅವರಿಗೆ ರೈತರು ಅನುಭವಿಸುತ್ತಿರುವ ಕಷ್ಟಗಳು ಕಾಣುತ್ತಿಲ್ಲ. ಅನ್ನ ನೀಡುವ ರೈತನೇ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಕಿಡಿಕಾರಿದರು.

ಇಲ್ಲಿಯ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಭವನದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ರೈತ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಯಾವುದೇ ನೀರಾವರಿ ಯೋಜನೆಗಳಿಗೆ ಒಂದು ರುಪಾಯಿ ಬಿಡಿಗಾಸು ನೀಡಿಲ್ಲ. ಜಮೀನುಗಳಿಗೆ ಒಡ್ಡು ನಿರ್ಮಿಸುವ ಕಾರ್ಯಕ್ರಮ, ಬೀಜ, ಗೊಬ್ಬರದ ಮೇಲಿನ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ. ಬೆಳೆಗೆ ನೀರು ಕೇಳಿದರೆ ಜೈಲಿಗೆ ಹಾಕುವ ಕಾರ್ಯವಾಗುತ್ತಿದೆ. ರೈತರು ಬೆಳೆದ ಬೆಳೆಗೆ ಯೋಗ್ಯವಾದ ಬೆಲೆ ನಿಗದಿಗೊಳಿಸಲು ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ನೂರಾರು ರೈತರು ಮೃತಪಟ್ಟರು ಎಂದರು.

ಈ ಭಾಗದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಸರ್ಕಾರ ಕ್ರಮಕೈಗೊಳ್ಳಬೇಕು. ರೈತರ ಬಗ್ಗೆ ಕಾಳಜಿ ಇಲ್ಲದವರು ಅಧಿಕಾರದಲ್ಲಿ ಏಕೆ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಹೋರಾಟ:

ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದಿದ್ದರೆ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾದರೂ ಹೇಗೆ? ಜಮೀನಿಗೆ ಹೋಗಲು ರಸ್ತೆ, ಶಾಲೆ ಹಾಗೂ ಆಸ್ಪತ್ರೆ ನಿರ್ಮಾಣ ಮಾಡಬೇಕು. ಇದನ್ನು ಬೇಡಿ ಪಡೆಯುವುದಲ್ಲ, ಅದು ನಮ್ಮ ಹಕ್ಕು. ಪ್ರತಿ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುವುದು. ಮುಂದಿನ ದಿನಗಳಲ್ಲಿ ರೈತರನ್ನು ಕಡೆಗಣಿಸಿದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜೀನಾಮೆ ನೀಡಲಿ:

ಕುಂದಗೋಳ ತಾಲೂಕು ಅಧ್ಯಕ್ಷ ಗುರುಪಾದಪ್ಪ ಬಂಕದ ಮಾತನಾಡಿ, ಪ್ರತಿಯೊಂದು ಸಮಸ್ಯೆಗೂ ರೈತರು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಬರಗಾಲವಾದರೂ ಯಾವ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ರೈತರ ಬೆಳೆದ ಬೆಳೆಗೆ ಬೆಂಬಲ ನೀಡದಿದ್ದರೆ ಜನಪ್ರತಿನಿಧಿಗಳು ರಾಜೀನಾಮೆ ನೀಡಲಿ ಎಂದರು.

ಜಾಗೃತಿ ಮೆರವಣಿಗೆ:

ರೈತ ಜಾಗೃತ ಸಮಾವೇಶದ ಪೂರ್ವದಲ್ಲಿ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸವಾಯಿ ಗಂಧರ್ವ ಸಭಾಭವನದ ವರೆಗೆ ಜನಜಾಗೃತಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಅಣ್ಣಿಗೇರಿ ದಾಸೋಹ ಮಠ ಶಿವಕುಮಾರ ಶ್ರೀ, ಮಂಟೂರ ಆನಂದ ಅಶ್ರಮ ಮಹಾಂತಲಿಂಗ ಶ್ರೀ ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶಿವಾನಂದ ಬೆಂತೂರ, ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಬೋಜಿ, ರಾಜ್ಯ ಸಂಚಾಲಕ ಸಿದ್ದಯ್ಯಾ ಕಟ್ನೂರಮಠ, ಶಿವಾನಂದ ಮಾಯಕಾರ, ಪುಷ್ಪಲತಾ ಎಚ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋನಂ ವಾಂಗ್ಚೂಕ್ ಹೋರಾಟಕ್ಕೆ ಗದುಗಿನಲ್ಲಿ ಬೆಂಬಲ
ಬೆಳೆವಿಮೆ ಯೋಜನೆ: ರೈತರಿಗೆ ಸಹಕಾರ ನೀಡದ ಬ್ಯಾಂಕ್ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ