ಕನ್ನಡಪ್ರಭವಾರ್ತೆ ಚಿತ್ರದುರ್ಗಚಿತ್ರದುರ್ಗ ಬಸವಕೇಂದ್ರ ಮುರುಘಾ ಮಠದ 24 ನೇ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣ ಗ್ರಂಥವೊಂದನ್ನು ತರಲು ನಿರ್ಧರಿಸಲಾಗಿದೆ.ಮುರುಘಮಠದಲ್ಲಿ ಭಾನುವಾರ ಸಭೆ ಸೇರಿದ್ದ ವಿದ್ವಾಂಸರು, ಪ್ರಾಜ್ಞರು ಹಾಗೂ ಸ್ವಾಮೀಜಿಗಳು ಪ್ರಕಟಣಾ ಪೂರ್ವ ಸಮಾಲೋಚನಾ ಸಭೆಯಲ್ಲಿ ಗುರುಗಳ ವಿಚಾರವಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.ಲಿಂಗೈಕ್ಯ ಜಗದ್ಗರು ಜಯದೇವ ಶ್ರೀಗಳು, ಚಿತ್ರದುರ್ಗದ ಐತಿಹಾಸಿಕ ಮಹತ್ವದ ಬೆಳವಣಿಗೆಗೆ ತಮ್ಮ ಇಡೀ ಬದುಕನ್ನ ಸಮಾಜದ ಒಳಿತಿಗಾಗಿ ಮುಡುಪಾಗಿರಿಸಿ ದುಡಿದಿದ್ದರು. ಜಗದ್ಗುರು ಮುರಘರಾಜೇಂದ್ರ ಬೃಹನ್ಮಠದ 24ನೇ ಪೀಠಾಧ್ಯಕ್ಷರಾಗಿ ಚಿತ್ರದುರ್ಗವನ್ನು ಕೇಂದ್ರವನ್ನಾಗಿರಿಸಿಕೊಂಡು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ನಾಡಿನೆಲ್ಲೆಡೆ ಹೆಸರು ಮಾಡಿದ್ದಾರೆ ಎಂದು ವಿದ್ವಾಂಸರು ಪ್ರತಿಪಾದಿಸಿದರು.
ಹಾಗೆಯೇ ಹಳೆಯ ಪುಸ್ತಕಗಳಿಂದ ಗಮನಾರ್ಹ ಲೇಖನಗಳು, ಜಗದ್ಗುರುಗಳನ್ನು ಕುರಿತು ಬಂದಿರುವ ಕೃತಿ, ಹೊಸ ಲೇಖನ, ಇತ್ತೀಚಿನ ವಿದ್ವಾಂಸರು ಹಾಗೂ ಸ್ವಾಮಿಗಳ ಬರಹಗಳು, ಆಗಿನ ಕಾಲದ ಪತ್ರ, ಆಹ್ವಾನ ಪತ್ರಿಕೆ, ಕರಪತ್ರ, ದಿನಪತ್ರಿಕೆ ಮತ್ತು ಇತರ ದಾಖಲೆಗಳ ಸಂಗ್ರಹ ಮಾಡಬೇಕು. ಒಟ್ಟಾರೆಯಾಗಿ ಜಯದೇವರ ಇಡೀ ಜೀವನ ಸಾಧನೆಯ ಹೂರಣವನ್ನು ಸೇರಿಸಿ ಕಟ್ಟಿಕೊಡುವ ಪ್ರಯತ್ನ ಈ ಕೃತಿಯಲ್ಲಿರುತ್ತದೆ ಸಭೆಯಲ್ಲಿ ತಿಳಿಸಲಾಯಿತು.ಸಂಶೋಧಕರು, ಸಾಹಿತಿಗಳು, ಕವಿಗಳು ಸೇರಿದ್ದ ಈ ಸಭೆಯಲ್ಲಿ ವಿಭಿನ್ನ ಆಲೋಚನೆ ಮತ್ತು ಕೃತಿಯ ಸ್ವರೂಪ ಹೇಗಿರಬೇಕೆಂಬ ಆಶಯಕ್ಕೆ ತಕ್ಕಂತೆ ಕೃತಿ ಮತ್ತು ಅವರ ಜಯಂತ್ಯುತ್ಸವವೂ ಕೂಡ ಸ್ಮರಣೀಯ ಎನ್ನುವಂತಾಗಬೇಕೆಂಬ ಸದಾಶಯ ವ್ಯಕ್ತವಾಯಿತು.ಶ್ರೀ ಜಗದ್ಗುರು ಮುರಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮಿಗಳ ಗ್ರಂಥ ಕುರಿತಂತೆ ಆಶಯ ಮಾತುಗಳನ್ನಾಡಿದರು.
ವಿದ್ವಾಂಸರಾದ ಡಾ. ಮಲ್ಲೇಪುರಂಜಿ ವೆಂಕಟೇಶ್, ಡಾ. ಲಕ್ಷ್ಮಣ್ ತೆಲಗಾವಿ, ಡಾ.ಬಿ. ರಾಜಶೇಖರಪ್ಪ, ಡಾ. ಬಿ. ನಂಜುಂಡಸ್ವಾಮಿ, ಬೈರಮಂಗಲ ರಾಮೇಗೌಡ, ವೀರಸಾಬಿಹಳ್ಳಿ ಶಿವಣ್ಣ, ಹಿರಿಯ ಪತ್ರಕರ್ತ ಜಿ.ಎಸ್ .ಉಜ್ಜನಪ್ಪ, ಕೆ.ಎಲ್. ರಾಜಶೇಖರ್, ಗಿರಿಮಲ್ಲಣ್ಣನವರ್, ಸ್ವಾನ್ ಮುದ್ರಣಾಲಯದ ಕೃಷ್ಣಮೂರ್ತಿ ಹಾಗೂ ಎನ್.ತಿಪ್ಪಣ್ಣ ಮತ್ತಿತರರು ಭಾಗವಹಿಸಿದ್ದರು. ವಿಆರ್ ಎಲ್ ಸಮೂಹ ಸಂಸ್ಥೆ ಅಧ್ಯಕ್ಷ ವಿಜಯ ಸಂಕೇಶ್ವರ ಅವರು ಸಭೆಯಲ್ಲಿ ಭಾಗವಹಿಸಿ ಸಭೆಯ ನಿರ್ಣಯಗಳಿಗೆ ಸಹಮತ ವ್ಯಕ್ತಪಡಿಸಿದರು.