ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಕಲಾಭವನದಲ್ಲಿ ಬುಧವಾರ ಬಸವ ಸಂಸ್ಕೃತಿ ಅಭಿಯಾನದ ನಿಮಿತ್ತ ನಡೆದ ಸಂವಾದದಲ್ಲಿ ಸಚಿನ್ ಗಡಿಬಿಡಿ ಎನ್ನುವವರ ಕೇಳಿದ ಸ್ವಾಮೀಜಿ ಆದವರು ತಮ್ಮ ಸಮಾಜದ ಇಂತವರಿಗೆ ಟಿಕೆಟ್ ಕೊಡಬೇಕು. ಇಂತವರನ್ನೇ ಮಂತ್ರಿ ಮಾಡಬೇಕು ಎಂದು ಸರ್ಕಾರ ಮೇಲೆ ಒತ್ತಡ ಹಾಕುವುದು ಬಸವ ತತ್ವಕ್ಕೆ ವಿರೋಧವಲ್ಲವೆ ? ಎನ್ನುವ ಪ್ರಶ್ನೆಗೆ ಸ್ವಾಮೀಜಿ ಈ ಉತ್ತರ ನೀಡಿದರು.
ಅನರ್ಹರರನ್ನು ಅರ್ಹರು ಎಂದು ಹೇಳಿ ಒತ್ತಡ ಹಾಕುವವರು ಸ್ವಾಮೀಜಿ ಆಗಲ್ಲ. ಅವರು ಸಹ ಒಬ್ಬ ರಾಜಕಾರಣಿಯಂತೆ. ಮಠಕ್ಕೆ ಸ್ವಾಮಿ ಮಾಡುವಾಗ ಅವರಲ್ಲಿ ಯಾವೆಲ್ಲ ಅರ್ಹತೆಗಳು ಇರಬೇಕು ಎಂದು ಸಮಾಜ ಗುರುತಿಸಬೇಕು. ಅನರ್ಹರರನ್ನು ಪೀಠಕ್ಕೆ ಕೂಡಿಸಿದಾಗ ಅವರಿಂದ ಮಠ ಹಾಗೂ ಸಮಾಜ ಉದ್ಧಾರ ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದರು.ಬಸವಣ್ಣ ಸಹ ಒಬ್ಬ ಅಪರೂಪದ ದಾರ್ಶನಿಕ ರಾಜಕಾರಣಿ. ಅಕಾರವನ್ನು ಅವರು ಕಸಕ್ಕಿಂತ ಕಡೆಯಾಗಿ ಕಿತ್ತು ಹೊಗೆದವರು, ಅವರು ನಮಗೆಲ್ಲ ಮಾದರಿ. ಮೂಢರನ್ನು ಸ್ವಾಮಿ ಮಾಡಿದರೆ ಅವರು ರಾಜಕಾರಣ ಮಾಡಲು ಮುಂದಾಗುತ್ತಾರೆ. ಎಲ್ಲ ಸ್ವಾಮಿಗಳು ಇದೇ ರೀತಿ ಇಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಸ್ವಾಮಿ ಆದವರು ಭಕ್ತರಿಗೆ ಹೆದರಬೇಕು. ಸ್ವಾಮಿಯನ್ನು ಕಂಡು ಭಕ್ತರು ಹೆದರುವಂತಾಗಬಾರದು ಎಂದು ಹೇಳಿ ಸರ್ಜಜ್ಞನ ವಚನವೊಂದನ್ನು ಉಲ್ಲೇಖಿಸಿದರು.
ಜಾತಿ ನಿರ್ಮೂಲನೆಗೆ ಬಸವಾದಿ ಶರಣರು ಸಾಕಷ್ಟು ಕೆಲಸ ಮಾಡಿದರೂ ಇಂದಿಗೂ ಜಾತಿ ವ್ಯವಸ್ಥೆ ನಿರ್ಮೂಲನೆ ಯಾಕೆ ಸಾಧ್ಯ ಆಗಿಲ್ಲ ಎನ್ನುವ ಪ್ರಶ್ನೆಗೆ, ಗದುಗಿನ ತೋಂಟದಾರ್ಯ ಮಠದ ಶ್ರೀಗಳು, 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಬಹಳಷ್ಟಿತ್ತು. ಆಗ ಅವರು ಕಾಯಕಗಳಿಗೆ ಪ್ರಾಶಸ್ತ್ಯ ನೀಡಿ, ಕಾಯಕದಲ್ಲಿ ಯಾವುದು ಮೇಲು, ಕೀಳಿಲ್ಲ ಎಂದು ತೋರಿಸಿಕೊಟ್ಟರು. ಮುಂಬರುವ ದಿನಗಳಲ್ಲಿ ಅದು ಬೇರೆ ಬೇರೆ ಧರ್ಮಗಳ ಪ್ರಭಾವದಿಂದ ಕಾಯಕಗಳು ಜಾತಿಗಳಾದವು. ಈಗ ಅದು ವಿಜೃಂಭಿಸುತ್ತಿವೆ. ಮೀಸಲಾತಿಗಾಗಿ ಜಾತಿ ವಿಜೃಂಬಣೆ ಮತ್ತಷ್ಟು ಹೆಚ್ಚಾಗಿದೆ. ಶರಣರು ಆರ್ಥಿಕ ಸಮಾನತೆಗಾಗಿ ಕಾಯಕ, ದಾಸೋಹ ಪದ್ಧತಿ ಜಾರಿಗೆ ತಂದಿದ್ದರು ಎಂದು ಹೇಳಿದರು.