ಕನ್ನಡಪ್ರಭ ವಾರ್ತೆ ತುಮಕೂರು
ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 4 ರಂದು ನಗರದ ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಮತ ಎಣಿಕೆ ನಡೆಯಲಿದ್ದು, ಎಣಿಕಾ ಕೇಂದ್ರಕ್ಕೆ 3 ಸುತ್ತಿನ ಭದ್ರತೆ ಒದಗಿಸಲು ಭಾರತ ಚುನಾವಣಾ ಆಯೋಗವು ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಎನ್‌ಐಸಿ ಕಚೇರಿಯಲ್ಲಿದು ನವದೆಹಲಿಯ ಭಾರತ ಚುನಾವಣಾ ಆಯೋಗದಿಂದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದರು.
ಎಣಿಕೆ ಪ್ರಕ್ರಿಯೆಯನ್ನು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಎಣಿಕಾ ಕೇಂದ್ರದ ಆವರಣದ ಸುತ್ತಲಿನ 100 ಮೀಟರ್ ವ್ಯಾಪ್ತಿಯ ಪರಿಧಿಯಲ್ಲಿ ವಾಹನಗಳನ್ನು ನಿರ್ಬಂಧಿಸಿ ಪಾದಚಾರಿ ವಲಯವೆಂದು ಗುರುತಿಸಲಾಗುವುದು. ಮೊದಲ ಸುತ್ತಿನ ಭದ್ರತೆ ಒದಗಿಸಲಾಗುವುಲ್ಲದೆ 2ನೇ ಸುತ್ತಿನಲ್ಲಿ ರಾಜ್ಯ ಪೊಲೀಸ್ ಹಾಗೂ 3ನೇ ಸುತ್ತಿನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಿಂದ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು. ಮತ ಎಣಿಕಾ ಸಿಬ್ಬಂದಿ, ಎಣಿಕಾ ಏಜೆಂಟ್, ಅಭ್ಯರ್ಥಿಗಳು ಸೇರಿದಂತೆ ಯಾರಿಗೂ ಎಣಿಕಾ ಕೇಂದ್ರದೊಳಗೆ ಮೊಬೈಲ್ ತರಲು ಅವಕಾಶವಿರುವುದಿಲ್ಲ. ಮೊಬೈಲ್‌ಗಳನ್ನು ಸುರಕ್ಷಿತವಾಗಿಡಲು ಎಣಿಕಾ ಕೇಂದ್ರದ ಆವರಣದಲ್ಲಿ ಮೊಬೈಲ್ ಡೆಪಾಸಿಟ್ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು, ಸಂಬಂಧಿಸಿದವರು ಎಣಿಕಾ ಕೇಂದ್ರದೊಳಗೆ ಬರುವ ಮುನ್ನ ತಮ್ಮ ಮೊಬೈಲ್‌ಗಳನ್ನು ಈ ಡೆಪಾಸಿಟ್ ಕೇಂದ್ರದಲ್ಲಿಡತಕ್ಕದ್ದು. ಮಹಿಳೆ ಹಾಗೂ ಪುರುಷರನ್ನು ತಪಾಸಣೆ ಮಾಡಲು ಪ್ರತ್ಯೇಕವಾಗಿ ಮಹಿಳಾ ಹಾಗೂ ಪುರುಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕಾ ದಿನದಂದು ಭದ್ರತಾ ಕೊಠಡಿಯಿಂದ ಎಣಿಕಾ ಕೇಂದ್ರದೊಳಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಸಾಗಿಸುವ ಪೂರ್ಣ ಪ್ರಕ್ರಿಯೆಯನ್ನು ನಿಗಾವಹಿಸಲು 360 ಡಿಗ್ರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು. ತುಮಕೂರು ಲೋಕಸಭಾ ಕ್ಷೇತ್ರದ ಒಟ್ಟು 1,846 ಮತಗಟ್ಟೆಗಳ ಮತಗಳ ಎಣಿಕೆಗಾಗಿ 12 ಎಣಿಕಾ ಕೊಠಡಿ ಹಾಗೂ 121 ಎಣಿಕಾ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮತ ಎಣಿಕಾ ಕೊಠಡಿಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಸಹಾಯಕ ಚುನಾವಣಾಧಿಕಾರಿಗಳು, ಎಣಿಕಾ ಸಹಾಯಕರು, ಸೂಕ್ಷ್ಮವೀಕ್ಷಕರು ಹಾಗೂ ಎಣಿಕಾ ಮೇಲ್ವಿಚಾರಕರಿಗೆ ಈಗಾಗಲೇ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಜೂನ್ 1ರಂದು 2ನೇ ಹಂತದ ಎಣಿಕಾ ತರಬೇತಿ ನೀಡಲಾಗುವುದು. ಜಿಲ್ಲೆಯಲ್ಲಿ 2 ಮತ ಎಣಿಕಾ ಕೇಂದ್ರಗಳಿರುವುದರಿಂದ ಚುನಾವಣಾ ಆಯೋಗವು ಶಿಮ್ಮಿ ನಾಹಿದ್ ಹಾಗೂ ಕೆ.ಎಸ್.ವಾಸವ ಸೇರಿದಂತೆ ಇಬ್ಬರು ಎಣಿಕಾ ವೀಕ್ಷಕರನ್ನಾಗಿ ನೇಮಿಸಿದೆ ಎಂದು ಮಾಹಿತಿ ನೀಡಿದರು. ಮತ ಎಣಿಕೆ ಕಾರ್ಯಕ್ಕೆ ಜೂನ್ ೧ರೊಳಗಾಗಿ ಎಣಿಕಾ ಏಜೆಂಟರ್‌ಗಳನ್ನು ನೇಮಕ ಮಾಡಿ ವರದಿ ಸಲ್ಲಿಸಲು ಈಗಾಗಲೇ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್‌ಗಳಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಚುನಾವಣಾ ತಹಶೀಲ್ದಾರ್ ರೇಷ್ಮ, ಟೂಡಾ ಆಯುಕ್ತ ಬಸಂತಿ ಸೇರಿದಂತೆ ಮತ್ತಿತರರಿದ್ದರು.