ಹಿಂಸೆಯನ್ನು ಸಹಿಸುವ ರಾಷ್ಟ್ರ ಭಾರತವಲ್ಲ. ಬದಲಾದ ಭಾರತದ ಬಗ್ಗೆ ಮಾತನಾಡುವ ಮುನ್ನ ಶತ್ರು ರಾಷ್ಟ್ರಗಳು ಯೋಚಿಸಬೇಕಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಬಿಜೆಪಿ, ವಿಶ್ವಹಿಂದೂ ಪರಿಷತ್ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿ, ಅಹಿಂಸೆಯನ್ನೇ ದೇಶದ ದೌರ್ಬಲ್ಯವೆಂದು ಕೊಂಡಿದ್ದ ನಮ್ಮ ಶತ್ರುಗಳು ಕಳೆದ ಏಳು ದಶಕದಿಂದ ಭಯೋತ್ಪಾದನೆ ಮೂಲಕ ಗಡಿ ಪ್ರದೇಶದ ಜನರ ನೆಮ್ಮದಿ ಹಾಳು ಮಾಡಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಹಿಂಸೆಯನ್ನು ಸಹಿಸುವ ರಾಷ್ಟ್ರ ಭಾರತವಲ್ಲ. ಬದಲಾದ ಭಾರತದ ಬಗ್ಗೆ ಮಾತನಾಡುವ ಮುನ್ನ ಶತ್ರು ರಾಷ್ಟ್ರಗಳು ಯೋಚಿಸಬೇಕಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಬಿಜೆಪಿ, ವಿಶ್ವಹಿಂದೂ ಪರಿಷತ್ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿ, ಅಹಿಂಸೆಯನ್ನೇ ದೇಶದ ದೌರ್ಬಲ್ಯವೆಂದು ಕೊಂಡಿದ್ದ ನಮ್ಮ ಶತ್ರುಗಳು ಕಳೆದ ಏಳು ದಶಕದಿಂದ ಭಯೋತ್ಪಾದನೆ ಮೂಲಕ ಗಡಿ ಪ್ರದೇಶದ ಜನರ ನೆಮ್ಮದಿ ಹಾಳು ಮಾಡಿದ್ದಾರೆ. ಈ ವೇಳೆ ಸಹ ದೇಶದ ಸೈನಿಕರ ಆತ್ಮಸ್ಥೈರ್ಯ ತುಂಬಿ ಹೋರಾಟದ ಮನೋಬಲ ಹೆಚ್ಚಿಸಬೇಕಿದ್ದ ದೇಶದ ಸಾಕಷ್ಟು ವಿರೋಧ ಪಕ್ಷದ ನಾಯಕರು ಸೈನಿಕರ ಮನೋಬಲ ಕುಗ್ಗುವಂತೆ ಮಾಡುವ ಮೂಲಕ ದೇಶ ಹಿಂದಿನ ಯುದ್ಧದಲ್ಲಿ ಸೋಲುವಂತಾಗಿತ್ತು. ಆದರೆ, ಇಂದು ಹಿಂದಿನ ಸ್ಥಿತಿ ಇಲ್ಲ. ಸೈನಿಕರಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಲಾಗಿದ್ದು ಶತ್ರುಗಳಿಂದ ಒಂದು ಗುಂಡು ಹಾರಿದರೆ, ನಮ್ಮಿಂದ ನೂರು ಗುಂಡು ಹಾರಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ಶತ್ರು ರಾಷ್ಟ್ರಕ್ಕೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆ ನಡೆಸುವ ಮುನ್ನ ಶತ್ರು ರಾಷ್ಟ್ರ ಹತ್ತು ಬಾರಿ ಯೋಚಿಸುವಂತೆ ಮಾಡಿದೆ. ಇದು ಸದೃಢ ಸಶಕ್ತ ಭಾರತದ ಲಕ್ಷಣ. ದೇಶ ಸ್ವತಂತ್ರಗೊಂಡ ವೇಳೆಯಿಂದ ಓಲೈಕೆ ರಾಜಕಾರಣ ತಪ್ಪಿದ್ದಲ್ಲಿ ಇಂದು ದೇಶದ ಸಮಸ್ಯೆ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ ಎಂದರು.ತೆಂಕಲಗೂಡು ಮಠದ ಶ್ರೀ ಚನ್ನಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ದೇಶವಾಸಿಗಳು ನಿತ್ಯ ತಮ್ಮ ಒಳಿತಿಗೆ ಪೂಜಿಸುವ ವೇಳೆ ಗಡಿಯಲ್ಲಿ ದೇಶ ರಕ್ಷಣೆಗೆ ನಿಂತಿರುವ ಸೈನಿಕ ಕುಟುಂಬಗಳ ಒಳಿತಿಗೂ ಪ್ರಾರ್ಥಿಸಿ. ಸೈನಿಕರಿಲ್ಲದ ನಮ್ಮ ದೇಶವನ್ನು ಕಲ್ಪನೆ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಕುಟುಂಬಕ್ಕಿಂತ ದೇಶ ಮುಖ್ಯ ಎಂಬ ಸಂಕಲ್ಪದೊಂದಿಗೆ ದೇಶದ ಗಡಿಯ ಹವಮಾನ ವೈವಿಧ್ಯದ ನಡುವೆ ಹೋರಾಟ ಮಾಡುತ್ತಿರುವ ಸೈನಿಕರ ಮನೋಸ್ಥೈರ್ಯ ತುಂಬುವ ಕೆಲಸವನ್ನು ದೇಶವಾಸಿಗಳು ಮಾಡಬೇಕಿದೆ ಎಂದರು.ಹೆಗಡ್ಡಿಹಳ್ಳಿ ಮಠದ ಶ್ರೀಷಡ್ಪಾವರಹಿತೇಶ್ವರ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಇಂದು ಬಲಿಷ್ಠ ನಾಯಕತ್ವದ ಪರಿಣಾಮ ಶತ್ರುರಾಷ್ಟ್ರಗಳ ನಿದ್ರೆ ಹಾರಿಹೋಗುವಂತಾಗಿದೆ. ಮುಂದುವರಿದ ಹಲವು ರಾಷ್ಟ್ರಗಳ ಪಟ್ಟಿಗೆ ನಮ್ಮ ದೇಶದ ಸೇನಾ ವ್ಯವಸ್ಥೆ ಸೇರುತ್ತಿದೆ. ಎದುರಾಳಿ ರಾಷ್ಟ್ರ ಮುಂದಿನ ದಿನಗಳಲ್ಲಿ ಬಾಲಬಿಚ್ಚಲು ಯೋಚಿಸುವಂತ ಪರಿಸ್ಥಿತಿಯನ್ನು ಪಹಲ್ಗಾಂ ಸೇನಾ ಕಾರ್ಯಾಚರಣೆ ಇಡಿ ಪ್ರಪಂಚಕ್ಕೆ ಬಿಚ್ಚಿಟ್ಟಿದೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಹೇಮಾವತಿ ಪ್ರತಿಮೆಯಿಂದ ಬಸವೇಶ್ವರ ಪ್ರತಿಮೆವರೆಗೂ ತಿರಂಗ ಯಾತ್ರೆ ನಡೆಸಲಾಯಿತು. ಸೈನಿಕರು, ವಿದ್ಯಾರ್ಥಿಗಳು ಮೀಟರ್ ಉದ್ದದ ತಿರಂಗವನ್ನು ಪ್ರದರ್ಶಿಸಲಾಯಿತು. ತಿರಂಗಕ್ಕೆ ಪಟ್ಟಣದ ಹಲವೆಡೆ ಮಹಿಳೆಯರು ಪುಷ್ಪಾರ್ಚನೆ ಮಾಡಿದರು. ಈ ವೇಳೆ ಬಿಜೆಪಿ ಪಕ್ಷದ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಹಿಂದೂಪರ ಸಂಘಟನೆಯ ಮುಖಂಡ ರಘು ಸಕಲೇಶಪುರ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕರಡಿಗಾಲ್ ಹರೀಶ್, ಪ್ರೊ. ಅಣ್ಣಪ್ಪಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷೆ ನೇತ್ರಾ ಮಂಜುನಾಥ್, ಮಾಜಿ ಸೈನಿಕರಾದ ಧರ್ಮಪ್ಪ, ಚಂದ್ರು ಮುಂತಾದವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.