ಧಾರವಾಡ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆರೂಢ ಸಂಸ್ಥೆ, ರೈಸ್ ಬೈಯೋನಿಕ್ ಸಂಸ್ಥೆ, ಡಿಮ್ಹಾನ್ಸ್ ಹಾಗೂ ಹಲವು ಸಂಘಟನೆಗಳ ಜೊತೆಗೂಡಿ ಆಯೋಜಿಸಿದ್ದ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಾಗಾರ ಯಶಸ್ವಿಗೊಂಡಿತು.
ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಕಲಚೇತನರಿಗೆ ಸಲಕರಣೆಗಳ ವಿತರಣೆ ಮೂಲಕ ಅವರ ಬಾಳಿನಲ್ಲಿ ಹೊಸ ಬೆಳಕನ್ನು ತರುವ ಕಾರ್ಯವಾಗಿದೆ. ಅಂಗವೈಕಲ್ಯತೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವಂತಾಗಬೇಕು. ತದನಂತರದಲ್ಲಿ ಚಿಕಿತ್ಸೆ, ವೈದ್ಯರ ಸಲಹೆ, ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಸಾಧನ ಸಲಕರಣೆಗಳು ಎಷ್ಟು ಮುಖ್ಯವೋ ಅದೇ ರೀತಿ ಫಿಜೀಯೋಥೇರಪಿ ಮತ್ತು ಆಕುಪೇಶನ್ ಥೇರಪಿ ಕೂಡ ಮುಖ್ಯ. ಇದು ವಿಶೇಷಚೇತನರ ಮನೋಬಲವನ್ನು ಹೆಚ್ಚಿಸುತ್ತದೆ ಎಂದರು.ಕೇವಲ ಸಲಕರಣೆಗಳಾಗಿರದೆ ವಿಶೇಷಚೇತನರಿಗೆ ಬೇರೆಯವರ ಮೇಲೆ ಅವಲಂಬಿತವಲ್ಲದೇ ಸ್ವಾವಲಂಬಿ ಬದುಕನ್ನು ಸಾಗಿಸಲು ನೆರವಾಗುತ್ತದೆ. ಡಿಮ್ಹಾನ್ಸ್ ಸಂಸ್ಥೆಯು ಸಮಗ್ರ ಆರೋಗ್ಯದ ಹಿತದೃಷ್ಠಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಮತ್ತು ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುತ್ತದೆ. ಡಿಮ್ಹಾನ್ಸ್ ಸಂಸ್ಥೆಯಲ್ಲಿ ಉತ್ತಮ ತಜ್ಞರ ತಂಡವಿದ್ದು ಮತ್ತು ಉತ್ತಮ ಮೂಲ ಸೌಕರ್ಯಗಳೂ ಇದ್ದು, ಇವುಗಳನ್ನು ಅಗತ್ಯವುಳ್ಳ ಜನರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೂಢ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಹೂಗಾರ, ಈಗಾಗಲೇ ನಮ್ಮ ಸಂಸ್ಥೆಯ ಮೂಲಕ ಅಭಿವೃದ್ದಿ ಕುಂಠಿತ ಮಕ್ಕಳ ಚಟುವಟಿಕೆ, ಶಿಕ್ಷಣ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು, ವಿಶೇಷಚೇತನರು ಮತ್ತು ಅವರ ಪಾಲಕರಿಗೆ ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳಲು ವಿವಿಧ ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ವ-ಉದ್ಯೋಗಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಅಗತ್ಯವಿರುವ ವಿಶೇಷಚೇತನರಿಗೆ ಸಾಧನ ಸಲಕರಣೆಗಳ ಜೊತೆ ಧಾರವಾಡ ನಗರ ಮತ್ತು ನವಲಗುಂದ ಗ್ರಾಮಾಂತರ ಭಾಗದಲ್ಲಿ ಚಟುವಟಿಕೆ ಶಿಕ್ಷಣ ಕೇಂದ್ರ ತೆರೆದು ನಿರಂತರ ಉಚಿತ ಸೇವಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ನ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್., ಮಾತನಾಡಿದರು. 71ಕ್ಕೂ ಹೆಚ್ಚು ವಿಶೇಷಚೇತನರಿಗೆ 216 ವಿವಿಧ ಸಾಧನ ಸಲಕರಣೆಗಳನ್ನು ನೀಡಲಾಯಿತು. ಡಿಮ್ಹಾನ್ಸ್ ಆಡಳಿತಾಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಮಾಧವಿ ಹೂಗಾರ, ಪಿ.ಎಫ್. ನದಾಫ್, ವೀಣಾ ಪೂಜಾರ ಇದ್ದರು.