ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಈ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಸೋರುವ ಈ ಕಟ್ಟಡ ಮಾನವನ ಅಸ್ತಿ ಪಂಜರದಂತಿದೆ. ಧೂಳು ತುಂಬಿಕೊಂಡು ತುಕ್ಕು ಹಿಡಿದ ಹಳೆ ಯಂತ್ರಗಳು, ಕಿತ್ತು ಹೋದ ನೆಲಹಾಸು, ಅಪ್ಪಿತಪ್ಪಿ ಗೋಡೆ ಮುಟ್ಟಿದರೆ ವಿದ್ಯುತ್ ಶಾಕ್ ಕೊಡುವಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.ಪಟ್ಟಣದ ಈ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ 1984ರಲ್ಲಿ ಸಾರಿಗೆ ಹಾಗೂ ಕಾರ್ಮಿಕ ಸಚಿವರಾಗಿದ್ದ ಎಂ.ಪಿ. ಪ್ರಕಾಶ ಅವರ ಕಾಲದಲ್ಲಿ ಮಂಜೂರಾಗಿತ್ತು. 12 ಎಕರೆ 45 ಸೆಂಟ್ಸ್ ಭೂಮಿ ಹೊಂದಿತ್ತು. ನಂತರದಲ್ಲಿ 1 ಎಕರೆ ಕಾರ್ಮಿಕರ ಕಲ್ಯಾಣ ಭವನಕ್ಕೆ, 5 ಎಕರೆ ಸರ್ಕಾರಿ ಕಾರ್ಯಾಗಾರ ಮತ್ತು ಉಪಕರಣಗಾರಕ್ಕೆ ನೀಡಲಾಗಿದ್ದು, 5 ಎಕರೆ 45 ಸೆಂಟ್ಸ್ ಭೂಮಿ ಮಾತ್ರ ಉಳಿದಿದೆ.
ಈ ಐಟಿಐ ಕಾಲೇಜು ಸರ್ಕಾರದಿಂದ ಅಕ್ಷರಶಃ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಉತ್ತಮ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಬರುವ ವಿದ್ಯಾರ್ಥಿಗಳಿಗೆ, ಕುಸಿದು ಬೀಳುವ ಕಟ್ಟಡಗಳ ಮಧ್ಯೆ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಿದೆ.ಈ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಫಿಟ್ಟರ್, ಟರ್ನರ್, ವೆಲ್ಡರ್ ತರಬೇತಿಗಾಗಿ ಒಟ್ಟು 279 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.
ಅವನತಿ ಅಂಚಿನಲ್ಲಿರುವ ಈ ಕಟ್ಟಡಗಳ ಒಳಗೆ ಕಿತ್ತು ಹೋದ ನೆಲಹಾಸು, ತುಕ್ಕು ಹಿಡಿದ ಹಳೆ ಯಂತ್ರಗಳು, ಗುಜರಿ ಸೇರಬೇಕಿದ್ದ ಹಳೆ ಕಬ್ಬಿಣದ ಸಾಮಾನುಗಳು, ಜಾಡು ಹಿಡಿದು ಧೂಳು ಮೆತ್ತಿದ ಆಸನಗಳ ನಡುವೆ ವಿದ್ಯಾರ್ಥಿಗಳು ತರಬೇತಿ ಪಡೆಯುವ ದುಸ್ಥಿತಿ ಇದೆ.ತರಬೇತಿ ಸಂಸ್ಥೆಯಲ್ಲಿ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ಕುಡಿವ ನೀರಿಲ್ಲ, ಸ್ವಚ್ಛತೆಯಂತೂ ಮೊದಲೇ ಇಲ್ಲ. ಇದ್ದೂ ಇಲ್ಲದಂತಿರುವ ಶೌಚಾಲಯ. ಕುಡಿವ ನೀರಿನ ಮೋಟಾರ್ ಸುಟ್ಟು ಹೋಗಿದೆ. ನೀರು ಬರುವ ನಳಕ್ಕೆ ಬೀಗ ಜಡಿಯಲಾಗಿದೆ. ವಿದ್ಯಾರ್ಥಿಗಳು ನೀರನ್ನು ಅರಸಿ ಸಂಸ್ಥೆಯ ಎದುರಿಗೆ ಇರುವ ಸಾಯಿಬಾಬಾ ದೇವಸ್ಥಾನಕ್ಕೆ ಹೋಗುವ ಸ್ಥಿತಿ ಇದೆ. ಒಟ್ಟಾರೆ ಶೈಕ್ಷಣಿಕ ವಾತಾವರಣವೇ ಇಲ್ಲದಾಗಿದೆ.
ತರಬೇತಿ ಸಂಸ್ಥೆಗೆ ಆರಂಭದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ತರಬೇತಿ ಪಡೆಯಲು ದಾಖಲಾತಿ ಮಾಡಿಕೊಳ್ಳುತ್ತಿದ್ದರು. ಈಗ ಈ ಸಂಸ್ಥೆಯಲ್ಲಿ ಕೇವಲ ಮೂರು ವಿದ್ಯಾರ್ಥಿನಿಯರು ಮಾತ್ರ ಇದ್ದಾರೆ. ಪಟ್ಟಣದಿಂದ ಐಟಿಐ ಕಾಲೇಜಿಗೆ ಬರಲು ಬಸ್ಸಿನ ಸೌಲಭ್ಯವಿಲ್ಲ. ನಡೆದುಕೊಂಡೇ ಬರಬೇಕಾದ ಸ್ಥಿತಿ ಇದೆ. ಇಂತಹ ಅಗತ್ಯ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ವಿದ್ಯಾರ್ಥಿನಿಯರು ಈ ತರಬೇತಿ ಸಂಸ್ಥೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಐಟಿಐ ಕಾಲೇಜಿಗೆ 23 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಪ್ರಾಚಾರ್ಯ ಹುದ್ದೆ ಖಾಲಿ, ಕಿರಿಯ ತರಬೇತಿ ಅಧಿಕಾರಿಗಳು 19 ಜನ ಇದ್ದಾರೆ. ತರಬೇತಿ ಅಧಿಕಾರಿ 2 ಹುದ್ದೆಗಳಲ್ಲಿ 1 ಖಾಲಿ, ಇನ್ನೊಂದು ಬೇರೆಡೆ ನಿಯೋಜನೆ, ಪ್ರಥಮ ದರ್ಜೆ ಸಹಾಯಕ 3 ಹುದ್ದೆ ಖಾಲಿ, ದ್ವಿತೀಯ ದರ್ಜೆ ಸಹಾಯಕ 2 ಹುದ್ದೆಗಳಲ್ಲಿ 1 ಖಾಲಿ, ಕಚೇರಿಯ ಅಧೀಕ್ಷಕ ಹುದ್ದೆ ಖಾಲಿ, ಆಡಳಿತಾಧಿಕಾರಿ ಇದ್ದಾರೆ, ಡಿ ಗ್ರೂಪ್ 5 ಹುದ್ದೆಗಳು ಖಾಲಿ ಇವೆ.ಸಂಜೆಯಾಗುತ್ತಲೇ ಕುಡುಕರ ಹಾವಳಿ, ಎಲ್ಲೆಂದರಲ್ಲಿ ಬಿಯರ್ ಬಾಟಲಿ ಹಾಗೂ ಮದ್ಯದ ಪೌಚ್‌ಗಳೇ ತುಂಬಿವೆ.
ಐಟಿಐ ಕಾಲೇಜಿಗೆ ಕಟ್ಟಡಗಳ ಕೊರತೆ ಕಾಡುತ್ತಿದೆ. 3 ಹಳೆ ಕಟ್ಟಡ ನೆಲಸಮ ಮಾಡಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ₹10 ಕೋಟಿ ಅನುದಾನ ನೀಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಹೂವಿನಹಡಗಲಿ ಸರ್ಕಾರಿ ಐಟಿಐ ಕಾಲೇಜು ಪ್ರಭಾರ ಪ್ರಾಚಾರ್ಯ ಯಲ್ಲಪ್ಪ.ಈ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಸೌಲಭ್ಯಗಳೇ ಇಲ್ಲ. ಸೋರುವ ಕಟ್ಟಡ, ಕಾಲೇಜಿಗೆ ಹೋಗಲು ಬಸ್ಸಿನ ಸೌಲಭ್ಯವಿಲ್ಲ. ಸಂಜೆ ಕುಡುಕರ ಹಾವಳಿ ಇದೆ. ಹೀಗೆ ಸಾಕಷ್ಟು ಸೌಲಭ್ಯಗಳೇ ಇಲ್ಲ. ಕೂಡಲೇ ಸರ್ಕಾರ ಕನಿಷ್ಠ ಸೌಲಭ್ಯಗಳನ್ನು ನೀಡಲಿ ಎನ್ನುತ್ತಾರೆ ವಿದ್ಯಾರ್ಥಿಗಳ ಪಾಲಕರು.