ರಾಜ್ಯದ 2ನೇ ಭಾಷೆ ತುಳು: ದ.ಕ, ಉಡುಪಿಯಲ್ಲಿ ಅನುಷ್ಠಾನಕ್ಕೆ ಶೀಘ್ರ ಮಾರ್ಗಸೂಚಿ

KannadaprabhaNewsNetwork |  
Published : Sep 21, 2026, 02:30 AM IST
ತುಳು ಪಿಲಿ (ಪ್ರಾತಿನಿಧಿಕ ಚಿತ್ರ) | Kannada Prabha

ಸಾರಾಂಶ

ಮಂಗಳೂರು ಸಂಪುಟ ಸಭೆಯಲ್ಲಿ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳು ಘೋಷಣೆಯಾಗಿದ್ದು, ಕರಾವಳಿಯ ದ.ಕ. ಮತ್ತು ಉಡುಪಿ ಜಿಲ್ಲೆಗೆ ಅನ್ವಯವಾಗುವಂತೆ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅನುಷ್ಠಾನಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸುವ ಪ್ರಕ್ರಿಯೆ ವೇಗ ಪಡೆದಿದ್ದು ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟವಾಗಲಿದೆ.

ಮಂಗಳೂರು: ಮಂಗಳೂರು ಸಂಪುಟ ಸಭೆಯಲ್ಲಿ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳು ಘೋಷಣೆಯಾಗಿದ್ದು, ಕರಾವಳಿಯ ದ.ಕ. ಮತ್ತು ಉಡುಪಿ ಜಿಲ್ಲೆಗೆ ಅನ್ವಯವಾಗುವಂತೆ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅನುಷ್ಠಾನಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸುವ ಪ್ರಕ್ರಿಯೆ ವೇಗ ಪಡೆದಿದ್ದು ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟವಾಗಲಿದೆ.ದ.ಕ. ಮತ್ತು ಉಡುಪಿ ಜಿಲ್ಲೆಗಳ ಆಡಳಿತ ಕಚೇರಿಗಳಲ್ಲಿ ಇದರ ಸಮರ್ಪಕ ಅನುಷ್ಠಾನಕ್ಕಾಗಿ ಭಾಷಾ ಅನುವಾದಕರ ನೇಮಕವೂ ನಡೆಯಲಿದೆ. ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತಲಾ ಇಬ್ಬರು ಅನುವಾದಕರು, ಎಲ್ಲ ತಾಲೂಕು ಕಚೇರಿಗಳಲ್ಲಿ ಒಬ್ಬರು ಅನುವಾದಕರ ನೇಮಕವಾಗಲಿದೆ. ಅಧಿಕಾರಿಗಳಿಗೆ ತುಳು ಕಲಿಸುವ ಪ್ರಕ್ರಿಯೆಯೂ ಆರಂಭವಾಗಲಿದೆ.

ಶಾಲೆಗಳಲ್ಲಿ ಕಲಿಕೆಗೂ ಅನುದಾನ: 2010ರಿಂದ ಪ್ರೌಢಶಾಲೆಯಲ್ಲಿ ತೃತೀಯ ಭಾಷೆಯಾಗಿ, 2017-18ರಿಂದ ಪದವಿಯಲ್ಲಿ ದ್ವಿತೀಯ ಭಾಷೆಯಾಗಿ ತುಳು ಬೋಧಿಸಲಾಗುತ್ತಿದೆ. ಸದ್ಯ ಇದಕ್ಕೆ ತುಳು ಅಕಾಡೆಮಿ ಮತ್ತು ಆಯಾ ಶಿಕ್ಷಣ ಸಂಸ್ಥೆಗಳು ಅನುದಾನ ಹೊಂದಿಸಿಕೊಳ್ಳುತ್ತಿವೆ. ಮುಂದೆ ಸರ್ಕಾರದಿಂದಲೇ ಅನುದಾನ ಬಿಡುಗಡೆಯಾಗುವ, ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿ ಆಗಲಿದೆ. ಅಲ್ಲದೆ ಸಾಂಸ್ಕೃತಿಕವಾಗಿಯೂ ತುಳು ಕಾರ್ಯಕ್ರಮಗಳಿಗೆ ಹೆಚ್ಚಿನ ಸರ್ಕಾರಿ ಪ್ರಾಯೋಜನೆ, ಮನ್ನಣೆ ಸಿಗಲಿದೆ. ಕಾರ್ಯಾಗಾರ, ಅಧ್ಯಯನಗಳಲ್ಲೂ ತುಳುವಿಗೆ ಮಹತ್ವದ ಸ್ಥಾನ ಲಭಿಸಲಿದೆ.

ಆಂಧ್ರಪ್ರದೇಶ ಮಾದರಿ: ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸಲಾಗಿತ್ತು. ಅದೇ ಮಾನದಂಡಗಳನ್ನು ಅನುಸರಿಸಿ ಈಗ ತುಳುವಿಗೂ ಸ್ಥಾನಮಾನ ನೀಡಲಾಗಿದೆ. 1996ರಲ್ಲಿ 6, ಅನಂತರ 12 ಜಿಲ್ಲೆಗಳಿಗೆ, 2002ರಲ್ಲಿ ಎಲ್ಲ ಜಿಲ್ಲೆಗಳಿಗೂ ಅನ್ವಯ ಮಾಡಲಾಯಿತು.

3 ಸಿಎಂಗಳ ಅವಧಿಯಲ್ಲಿ ಪ್ರಮುಖ ಪ್ರಕ್ರಿಯೆ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿ ರಚಿಸಲಾಗಿತ್ತು. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯಾಗಿದ್ದ ಕೆ.ಎಂ. ಗಾಯತ್ರಿ ಅವರ ನೇತೃತ್ವದ ತಂಡವನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿ ಅಲ್ಲಿ ಅಧಿಕೃತ ಭಾಷಾ ಸ್ಥಾನಮಾನ ನೀಡಿರುವ ಮಾದರಿಯನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಇದೀಗ ಡಿ.ಕೆ.ಶಿವಕುಮಾರ್ ಅವರ ಅವಧಿಯಲ್ಲಿ ಘೋಷಣೆಯ ಹಂತ ತಲುಪಿದೆ.

ಪರಿಚ್ಛೇದ ಸೇರ್ಪಡೆ ಕಡ್ಡಾಯವಲ್ಲ: ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಬೇಕಾದರೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಣೆಯಾಗುವುದು ಕಡ್ಡಾಯವೇನಲ್ಲ. ಡೋಗ್ರಿ ಹಾಗೂ ಕೆಲವು ಪ್ರಾದೇಶಿಕ ಭಾಷೆಗಳು ರಾಜ್ಯದ ಅಧಿಕೃತ ಭಾಷೆಯಾಗದೆಯೇ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿವೆ. ಆದಾಗ್ಯೂ ಅಧಿಕೃತ ಭಾಷೆಯ ಘೋಷಣೆಯು ಪರಿಚ್ಛೇದಕ್ಕೆ ಸೇರ್ಪಡೆ ಹಕ್ಕೊತ್ತಾಯಕ್ಕೆ ಬಲ ನೀಡಲಿದೆ.

ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗಾಗಿ ರಾಷ್ಟ್ರಮಟ್ಟದಲ್ಲಿಯೂ ಹೋರಾಟ ನಡೆದಿದೆ. 2003ರಲ್ಲಿ ಹೊಸದಿಲ್ಲಿಯಲ್ಲಿ ಸಮಾವೇಶವೂ ನಡೆದಿತ್ತು. ಆಗ ವಾಮನ ನಂದಾವರ ತುಳು ಅಕಾಡೆಮಿ ಅಧ್ಯಕ್ಷರಾಗಿದ್ದರು. ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಮುಂದಾಳತ್ವದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. 8ನೇ ಪರಿಚ್ಛೇದವನ್ನೇ ಕೇಂದ್ರೀಕರಿಸಿ ಚಳವಳಿ ಕೂಡ ನಡೆದಿತ್ತು. 1983ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಅಖಿಲ ಭಾರತ ತುಳು ಸಮ್ಮೇಳನದಲ್ಲಿಯೂ ಬಲವಾಗಿ ಪ್ರತಿಪಾದಿಸಲ್ಪಟ್ಟಿತ್ತು.

--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಸಮಾಜಕ್ಕೆ ದಿಕ್ಸೂಚಿಯಾಗಲಿ
ಮಳೆ ಇಲ್ಲ, ಬೆಳೆ ಇಲ್ಲ ಸರ್ಕಾರಕ್ಕೆ ಆದಾಯ ಕಡಿಮೆ ಇದೆ: ರಾಯರಡ್ಡಿ