ಶಾಲೆ ಬಾಗಿಲಿಗೆ ಸಿಲುಕಿ ಬಾಲಕಿ ಬೆರಳು ಕಟ್‌ : ಕಸಕ್ಕೆಸೆದ ಶಿಕ್ಷಕರು-ಅಮಾನವೀಯ ವರ್ತನೆ!

Published : Feb 14, 2026, 06:01 AM IST
Tumakuru school negligence case

ಸಾರಾಂಶ

ಶಾಲೆಯ ಕಬ್ಬಿಣದ ಬಾಗಿಲಿಗೆ ಸಿಲುಕಿದ್ದರಿಂದ ತನ್ನ ಎರಡು ಬೆರಳುಗಳನ್ನು ಕಳೆದುಕೊಂಡ 1ನೇ ತರಗತಿಯ ಬಾಲಕಿಯೊಬ್ಬಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಬದಲು, ತುಂಡಾದ ಬೆರಳುಗಳನ್ನು ಸರ್ಕಾರಿ ಶಾಲೆ ಶಿಕ್ಷಕರು ಕಸದ ತೊಟ್ಟಿಗೆ ಎಸೆದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ

  ತುಮಕೂರು :  ಶಾಲೆಯ ಕಬ್ಬಿಣದ ಬಾಗಿಲಿಗೆ ಸಿಲುಕಿದ್ದರಿಂದ ತನ್ನ ಎರಡು ಬೆರಳುಗಳನ್ನು ಕಳೆದುಕೊಂಡ 1ನೇ ತರಗತಿಯ ಬಾಲಕಿಯೊಬ್ಬಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಬದಲು, ತುಂಡಾದ ಬೆರಳುಗಳನ್ನು ಸರ್ಕಾರಿ ಶಾಲೆ ಶಿಕ್ಷಕರು ಕಸದ ತೊಟ್ಟಿಗೆ ಎಸೆದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗೂಳೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ, ಮರುಜೋಡಣೆ ಚಿಕಿತ್ಸೆ ಮಾಡಲು ವೈದ್ಯರು ಬೆರಳು ಕೇಳಿದ್ದಾರೆ. ಬೆರಳುಗಳನ್ನು ಕೇಳಿಕೊಂಡು ಶಾಲೆಗೆ ಪೋಷಕರು ತೆರಳಿದಾಗ, ಕಸದ ತೊಟ್ಟಿಗೆ ಎಸೆದಿರುವುದಾಗಿ ಶಿಕ್ಷಕರು ಉತ್ತರ ನೀಡಿದ್ದಾರೆ. ಬೆರಳು ಸಿಗದ ಕಾರಣ 1ನೇ ತರಗತಿಯ ಬಾಲಕಿ ತನ್ನ ಬೆರಳುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವಂತಾಗಿದೆ.

ಮನುಷ್ಯತ್ವ ಇಲ್ಲದ ರೀತಿ ವರ್ತಿಸಿದ ಶಾಲೆಯ ಮುಖ್ಯ ಶಿಕ್ಷಕ, ಇಬ್ಬರು ಸಹ ಶಿಕ್ಷಕರು ಹಾಗೂ ಅವರು ಮಾಡಿದ ತಪ್ಪಿಗಾಗಿ ತಾಲೂಕು ಶಿಕ್ಷಣಾಧಿಕಾರಿ (ಬಿಇಒ) ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೆಂಥ ವರ್ತನೆ?:

ಫೆ.11ರ ಬುಧವಾರ ಗೂಳೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಕರು ಊಟದ ವಿರಾಮ ನೀಡಿದ್ದರು. ಆ ವೇಳೆ ಚಿನ್ಮಯಿದೇವಿ ಎಂಬ ಬಾಲಕಿ ತನಗರಿವಿಲ್ಲದಂತೆ ಕಬ್ಬಿಣದ ಬಾಗಿಲ ಸಂದಿಯಲ್ಲಿ ಕೈ ಇಟ್ಟಿದ್ದಳು. ಆ ಬಗ್ಗೆ ಗೊತ್ತಿಲ್ಲದ ಕೆಲವು ಮಕ್ಕಳು ಬಾಗಿಲನ್ನು ಮುಚ್ಚಿವೆ. ಇದರಿಂದಾಗಿ ಬಾಲಕಿಯ ಮಧ್ಯದ ಬೆರಳಿನ ತುದಿ ಹಾಗೂ ಉಂಗುರ ಬೆರಳು ಅರ್ಧ ಭಾಗ ತುಂಡಾಗಿದೆ.

ಅಂತಹ ಸಂದರ್ಭದಲ್ಲಿ ಪೋಷಕರಿಗೆ ಮಾಹಿತಿ ನೀಡಿ, ಬಾಲಕಿಯನ್ನು ಶಿಕ್ಷಕರು ತುಂಡಾದ ಬೆರಳ ಸಮೇತ ಆಸ್ಪತ್ರೆಗೆ ಕರೆದೊಯ್ದಿದ್ದರೆ, ಬೆರಳು ಮರುಜೋಡಣೆಗೆ ಅವಕಾಶವಿತ್ತು. ಆದರೆ, ಉಳಿದ ಮಕ್ಕಳು ತುಂಡಾದ ಬೆರಳು ನೋಡಿದರೆ ಭಯಗೊಳ್ಳುತ್ತಾರೆ ಎಂದು ಊಹಿಸಿ ಚಿನ್ಮಯಿದೇವಿಯ ಬೆರಳುಗಳನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ರಕ್ತಸ್ರಾವದಿಂದ ನರಳುತ್ತಿದ್ದ ಬಾಲಕಿಗೆ ಬ್ಯಾಂಡೇಜ್‌ ಸುತ್ತಿ, ನೀರು ಹಾಕಿದ್ದಾರೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಪೋಷಕರು ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಬೆರಳು ಇದ್ದರೆ ಜೋಡಿಸಬಹುದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಶಾಲೆಗೆ ಬಂದ ಪೋಷಕರು ಬೆರಳುಗಳನ್ನು ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ. ಆದರೆ ಬೆರಳುಗಳನ್ನು ಕಸಕ್ಕೆ ಬಿಸಾಕಿರುವುದಾಗಿ ಶಿಕ್ಷಕರು ಹೇಳಿದ್ದಾರೆ. ಶಾಲೆಯ ಮಕ್ಕಳು ರಕ್ತ ನೋಡಿ ಭಯ ಬೀಳುತ್ತಾರೆ ಎಂದು ಕಸಕ್ಕೆ ಎಸೆದೆವು ಎಂದು ಶಿಕ್ಷಕರು ತಿಳಿಸಿದ್ದಾರೆ. ಇದರಿಂದಾಗಿ ಚಿನ್ಮಯಿದೇವಿ ಶಾಶ್ವತ ಅಂಗವಿಕಲಳಾಗಿದ್ದಾಳೆ.

ಘಟನೆ ಬಗ್ಗೆ ತುಮಕೂರು ಬಿಇಒಗೂ ಮಾಹಿತಿ ನೀಡಿದರೂ ಸಮರ್ಪಕವಾಗಿ ಉತ್ತರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಯ ಹೆಡ್ ಮಾಸ್ಟರ್ ನಾಗೇಶ್, ಶಿಕ್ಷಕರಾದ ರೇಣುಕಮ್ಮ, ವೆಂಕಟೇಶ್ ಹಾಗೂ ಬಿಇಒ ಹನುಮಂತಪ್ಪ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಆಸ್ಪತ್ರೆಗೆ ಯಾರೂ ಕರೆದೊಯ್ಯಲಿಲ್ಲ

11ನೇ ತಾರೀಕಿಗೆ ಊಟಕ್ಕೆ ಬಿಟ್ಟಾಗ ಲೈನ್ ಮಾಡಿಸಿದ್ದರು. ಬಾಗಿಲ‌‌ ಬಳಿ ಕೈ ಇಟ್ಟುಕೊಂಡು ನಿಂತಿದ್ದೆ. ಹಿಂದಿನಿಂದ ಯಾರೋ ಬಾಗಿಲು ಹಾಕಿದರು. ಆಗ ಬೆರಳು ತುಂಡಾಯಿತು. ಯಾರೂ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ, ಅಲ್ಲೇ ಬ್ಯಾಂಡೇಜ್ ಸುತ್ತಿದರು. ಅಲ್ಲೇ ಕುಳಿಸಿ, ನೀರು ಹಾಕಿದರು.

-ಚಿನ್ಮಯಿದೇವಿ, 1ನೇ ತರಗತಿ ವಿದ್ಯಾರ್ಥಿನಿ.

PREV
Stay updated with the latest news from Tumkur district (ತುಮಕೂರು ಸುದ್ದಿ) — local politics, development, infrastructure, social issues, crime, environment and community affairs in the district on Kannada Prabha News.
Read more Articles on

Recommended Stories

ಸಂಕಷ್ಟಕ್ಕೆ ಸ್ಪಂದಿಸಿದರೆ ಅದು ಗುಂಪುಗಾರಿಕೆಯೇ?
ಬಿಜೆಪಿ,ಎನ್‌ಡಿಎಯಿಂದ ನಾನೇ ಕ್ಯಾಂಡಿಡೇಟ್‌