ತುಮಕೂರಿನ ಠಾಣೆಯಲ್ಲಿ ಲಾಕಪ್‌ ಡೆತ್‌!

Published : Mar 21, 2026, 09:50 AM IST
lockup death

ಸಾರಾಂಶ

ಯುಗಾದಿ ಹಬ್ಬದಂದು ಇಸ್ಪೀಟ್‌ ಆಡುತ್ತಿದ್ದ ವ್ಯಕ್ತಿಗಳನ್ನು ಕರೆತಂದು ವಿಚಾರಣೆ ನಡೆಸುವ ವೇಳೆಯಲ್ಲಿಯೇ ಆತ ಪೊಲೀಸ್‌ ಠಾಣೆಯಲ್ಲಿಯೇ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದಲ್ಲಿ ನಡೆದಿದೆ. ಯಳನಾಡು ನಿವಾಸಿ ಕಾಂತರಾಜು (50) ಮೃತ ವ್ಯಕ್ತಿ.

ಹುಳಿಯಾರು :  ಯುಗಾದಿ ಹಬ್ಬದಂದು ಇಸ್ಪೀಟ್‌ ಆಡುತ್ತಿದ್ದ ವ್ಯಕ್ತಿಗಳನ್ನು ಕರೆತಂದು ವಿಚಾರಣೆ ನಡೆಸುವ ವೇಳೆಯಲ್ಲಿಯೇ ಆತ ಪೊಲೀಸ್‌ ಠಾಣೆಯಲ್ಲಿಯೇ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದಲ್ಲಿ ನಡೆದಿದೆ. ಯಳನಾಡು ನಿವಾಸಿ ಕಾಂತರಾಜು (50) ಮೃತ ವ್ಯಕ್ತಿ.

ವಿಚಾರಣೆಗೆ ಕರೆತರುವಾಗಲೇ ಆ ವ್ಯಕ್ತಿ ನಿತ್ರಾಣಗೊಂಡರೂ ಪೊಲೀಸರು ಕ್ಯಾರೇ ಎಂದಿಲ್ಲ. ಠಾಣೆಯಲ್ಲಿ ಸುಸ್ತಾಗಿ ಬಿದ್ದಿದ್ದರೂ ನಾಟಕವಾಡುತ್ತೀಯ ಎಂದು ಬೂಟುಗಾಲಿನಲ್ಲಿ ಒದ್ದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೃತದೇಹವನ್ನು ಠಾಣೆ ಒಳಗಿಟ್ಟು ಗ್ರಾಮಸ್ಥರು ಪ್ರತಿಭಟಿಸಿದರು. ಎಸ್ಪಿ ಸ್ಥಳಕ್ಕಾಗಮಿಸಿ ಕಠಿಣ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ.

ಆಗಿದ್ದೇನು?: 

ಹುಳಿಯಾರು ಸಮೀಪದ ಯಳನಾಡುವಿನಲ್ಲಿ ಯುಗಾದಿಯ ಸಂಭ್ರಮದಲ್ಲಿ ಕೆಲವರು ಇಸ್ಪೀಟ್ ಆಡುತ್ತಿದ್ದರು. ಹುಳಿಯಾರು ಠಾಣೆ ಪೊಲೀಸರು ಮಫ್ತಿಯಲ್ಲಿ ಬಂದು ದಾಳಿ ನಡೆಸಿ 6 ಜನರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿಯೇ ಕಾಂತರಾಜು ವಾಂತಿ ಮಾಡಿಕೊಂಡು ನಿತ್ರಾಣವಾದರೂ ಪೊಲೀಸರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಠಾಣೆಗೆ ಕರೆತಂದಿದ್ದಾರೆ. ಸುಮಾರು 3 ಗಂಟೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದರು ಎನ್ನುವ ಆರೋಪವಿದೆ. ಅಲ್ಲದೆ ನಾಟಕವಾಡುತ್ತಿದ್ದೀಯಾ ಎಂದು ಪೊಲೀಸರು ಬೂಟುಗಾಲಿಂದ ಒದ್ದಿದ್ದರಿಂದ ಆತ ಅಲ್ಲಿಯೇ ಕುಸಿದು ಬಿದ್ದ ಎನ್ನಲಾಗಿದೆ. ಕೊನೆಗೆ ಜೊತೆಯಲ್ಲಿದ್ದವರು ಪೊಲೀಸರಿಗೆ ಒತ್ತಡ ಹಾಕಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಾಗ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರತಿಭಟನೆ:

ವಿಷಯ ತಿಳಿದ ಗ್ರಾಮಸ್ಥರು ಠಾಣೆಯೊಳಗೆ ಶವ ಇಟ್ಟು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಮಾಜಿ ಶಾಸಕ ಕಿರಣ್ ಕುಮಾರ್, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಅವರ ಮಗ ಅಭಿಜ್ಞಾ ಮಾಧುಸ್ವಾಮಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಅವರಿಗೆ ಕರೆಮಾಡಿ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ಕುಳಿತರು. ಈ ವೇಳೆ ಹಿರಿಯ ಅಧಿಕಾರಿಗಳು ಆಗಮಿಸಿ ನಾಯಕರೊಂದಿಗೆ ಮಾತುಕತೆ ನಡೆಸಿ ನಾಯಕರ ಮನವೊಲಿಸಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ನಂತರ ಜನರು ನಾಯಕರ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಈ ವೇಳೆ ಶವ ಪರೀಕ್ಷೆಯನ್ನು ತುಮಕೂರಿನಲ್ಲಿಯೇ ನಡೆಸಬೇಕು ಎಂದು ಷರತ್ತು ಹಾಕಿದ್ದು ಅದಕ್ಕೆ ಎಸ್‌ಪಿ ಅವರು ತಡರಾತ್ರಿಯೇ 1.30ಕ್ಕೆ ತುಮಕೂರಿಗೆ ಕಾಂತರಾಜು ಅವರ ಮೃತದೇಹವನ್ನು ರವಾನಿಸಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು. ವಿನಾಕಾರಣ ಅಮಾಯಕನ ಪ್ರಾಣಹೋಗಿದೆ. ಪೊಲೀಸರು ಮಾಮೂಲಿ ಪಡೆದು ಜೂಜು ಅಡ್ಡೆಗಳನ್ನು ತಮ್ಮ ನಿಯಂತ್ರಣದಲ್ಲಿ ನಡೆಸುತ್ತಿದ್ದಾರೆ. ಅಮಾಯಕರನ್ನು ಕರೆತಂದು ಪ್ರಕರಣ ದಾಖಲಿಸುತ್ತಾರೆ. ಕೆಲ ಪೊಲೀಸ್ ಅಧಿಕಾರಿಗಳು ಅತಿ ಕಡಿಮೆ ಅವಧಿಯಲ್ಲಿ ಹಣ ಆಸ್ತಿಗಳನ್ನು ಗಳಿಸುತ್ತಿದ್ದಾರೆ. ಹುಳಿಯಾರು ಠಾಣೆಯ ಬಿಟ್ಟು ಬೇರೆ ಠಾಣೆಗೆ ಹೋಗುವ ಮನಸ್ಸು ಮಾಡುವುದಿಲ್ಲ. ಒಟ್ಟಾರೆಯಾಗಿ ರಕ್ಷಕರೆ ಭಕ್ಷಕರಾಗಿದ್ದಾರೆ ಎಂದು ತಮ್ಮ ನೋವನ್ನು ಹೊರ ಹಾಕಿದರು.

ಹುಳಿಯಾರು ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ಆಟ ಬಹಳ ಬೇರು ಬಿಟ್ಟಿದೆ. ಇದನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ದರೋಡೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಈ ಕೂಡಲೇ ಅವುಗಳ ಮೇಲೆ ಪೊಲೀಸರು ನಿಯಂತ್ರಣ ಹೇರದಿದ್ದರೆ ಪರಿಣಾಮ ಎದುರಿಸಬೇಕಾದಿತು.

-ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ.

PREV
Stay updated with the latest news from Tumkur district (ತುಮಕೂರು ಸುದ್ದಿ) — local politics, development, infrastructure, social issues, crime, environment and community affairs in the district on Kannada Prabha News.
Read more Articles on

Recommended Stories

ಮಹಿಳೆಯರು ಸಬಲರಾದರೆ ಮಹಿಳಾ ದಿನಾಚರಣೆ ಸಾರ್ಥಕ
ಸುದ್ದಿ ಸಿದ್ಲಿಂಗು ಇನ್ನಿಲ್ಲ : ಪತ್ರಕರ್ತರ ಬಳಗದಿಂದ ಕಂಬನಿ