ರಮ್ಯಾಗೆ ಕೆಟ್ಟ ಮೆಸೇಜ್‌ ಕಳುಹಿಸಿದ್ದ ಮತ್ತಿಬ್ಬರ ಸೆರೆ

KannadaprabhaNewsNetwork |  
Published : Aug 05, 2025, 12:30 AM ISTUpdated : Aug 05, 2025, 10:53 AM IST
Ramya Darshan Fans

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೆ ನಿಂದನೆ ಪ್ರಕರಣ ಸಂಬಂಧ ನಟ ದರ್ಶನ್ ಅವರ ಮತ್ತಿಬ್ಬರು ಅಭಿಮಾನಿಗಳನ್ನು ಸಿಸಿಬಿ ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೆ ನಿಂದನೆ ಪ್ರಕರಣ ಸಂಬಂಧ ನಟ ದರ್ಶನ್ ಅವರ ಮತ್ತಿಬ್ಬರು ಅಭಿಮಾನಿಗಳನ್ನು ಸಿಸಿಬಿ ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಡೂರಿನ ಸಿ.ವೈ.ರಾಜೇಶ್‌ ಹಾಗೂ ಎಚ್‌.ಎಸ್‌.ಭುವನ್ ಗೌಡ ಬಂಧಿತ ಆರೋಪಿಗಳು. ಈ ಮೂಲಕ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಇನ್ನು ಎಂಟು ಕಿಡಿಗೇಡಿಗಳ ವಿಳಾಸ ಪತ್ತೆಯಾಗಿದ್ದು, ಕೃತ್ಯ ಬೆಳಕಿಗೆ ಬಂದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಕ್ಷಪ್ತ ಮನಸ್ಸಿನ ಅಭಿಮಾನಿ

ಈ ನಾಲ್ವರು ಆರೋಪಿಗಳ ಪೈಕಿ ಕಡೂರಿನ ರಾಜೇಶ್‌ ವಿಚಿತ್ರ ಸ್ವಭಾವದವನಾಗಿದ್ದು, ನಟ ದರ್ಶನ್‌ ಕಟ್ಟಾ ಅಭಿಮಾನಿಯಾಗಿದ್ದ. ತನ್ನೂರಲ್ಲಿ ಐದು ಎಕರೆ ಜಮೀನಿನಲ್ಲಿ ಆತ ಕೃಷಿ ಮಾಡಿಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ಕ್ಷುಲ್ಲಕ ವಿಚಾರವಾಗಿ ಆ್ಯಸಿಡ್ ಕುಡಿದು ಗಂಟಲು ಸಹ ಸುಟ್ಟಿಕೊಂಡಿದ್ದ. ಇನ್ನು ಮತ್ತೊಬ್ಬ ಭುವನ್ ಗೌಡ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ ಅವರಿಗೆ ನಿಂದನೆ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಸಂಬಂಧ ಮತ್ತಿಬ್ಬರನ್ನು ಬಂಧಿಸಲಾಗಿದೆ. ಇನ್ನು ಕೆಲವರ ಪತ್ತೆಗೆ ತನಿಖೆ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿಯ ನ್ಯಾಯಾಲಯದ ಕಲಾಪ ಸಂಬಂಧ ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ ತಾಣಗಳಲ್ಲಿ ನಟಿ ರಮ್ಯಾ ಪೋಸ್ಟ್‌ ಮಾಡಿದ್ದರು. ಇದಕ್ಕೆ ಕೆರಳಿದ ದರ್ಶನ್ ಅಭಿಮಾನಿಗಳು, ರಮ್ಯಾ ಅವರಿಗೆ ಅಶ್ಲೀಲ ಹಾಗೂ ನಿಂದನೆ ಸಂದೇಶ ಕಳುಹಿಸಿ ಅವಮಾನಿಸಿದ್ದರು. ಈ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಮ್ಯಾ ಅವರು, ಇನ್‌ಸ್ಟಾಗ್ರಾಂನ 43 ಖಾತೆಗಳ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಆಯುಕ್ತರಿಗೆ ದೂರು ನೀಡಿದ್ದರು.

ಅದರಂತೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಂ ನೇತೃತ್ವದಲ್ಲಿ ನಿಂದಕರ ಬೇಟೆ ಶುರುವಾಗಿದ್ದು, ಕೊನೆಗೆ 43 ಖಾತೆಗಳ ಪೈಕಿ 11 ಖಾತೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

PREV
Read more Articles on

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ