ಯು. ರಾಜಾಪುರ ಗ್ರಾಮದಲ್ಲಿ ಐತಿಹಾಸಿಕ ಕುರುಹುಗಳು

KannadaprabhaNewsNetwork |  
Published : Sep 09, 2025, 01:01 AM IST
ಚಿತ್ರ: ೭ಎಸ್.ಎನ್.ಡಿ.೦೨- ಸಂಡೂರು ತಾಲೂಕಿನ ಯು. ರಾಜಾಪುರ ಗ್ರಾಮದಲ್ಲಿ ಕಳ್ಳರು ಗ್ರಾಮದ ಒಳಗಡೆ ನುಸುಳುವುದನ್ನು ದೂರದಿಂದಲೇ ಪತ್ತೆ ಹಚ್ಚಿ, ಜನರನ್ನು ಎಚ್ಚರಿಸಲು ನಿರ್ಮಿಸಿದ್ದ ಉಡೇವು.೭ಎಸ್.ಎನ್.ಡಿ.೦೩- ಸಂಡೂರು ತಾಲೂಕಿನ ಯು. ರಾಜಾಪುರ ಗ್ರಾಮದ ಬಳಿಯ ಬೆಟ್ಟದಲ್ಲಿನ ಕಲ್ಲು ಬಂಡೆಗಳ ಮೇಲೆ ಚಿತ್ರಿತಗೊಂಡಿರುವ ರೇಖಾಚಿತ್ರಗಳು.೭ಎಸ್.ಎನ್.ಇಡ.೦೪- ಸಂಡೂರು ತಾಲೂಕಿನ ಯು. ರಾಜಾಪುರ ಗ್ರಾಮದ ಬಳಿ ದೊರೆತ ವೀರಗಲ್ಲು. | Kannada Prabha

ಸಾರಾಂಶ

ತಾಲೂಕಿನ ಗಡಿ ಭಾಗದಲ್ಲಿರುವ ಮತ್ತು ಗುಡ್ಡ ಬೆಟ್ಟಗಳಿಂದ ಆವೃತವಾಗಿರುವ ಯು. ರಾಜಾಪುರ (ಉಬ್ಬಲಗಂಡಿ-ರಾಜಾಪುರ) ಗ್ರಾಮದಲ್ಲಿ ಹಲವು ಐತಿಹಾಸಿಕ ಕುರುಹು ಕಾಣಬಹುದಾಗಿದೆ.

ಊರನ್ನು ಕಳ್ಳಕಾಕರಿಂದ ಕಾಯಲು ನಿರ್ಮಿಸಿದ ಉಡೇವು

ಶಿಲಾ ಬೆಟ್ಟದ ಮೇಲೆ ಪ್ರಾಣಿಗಳ ರೇಖಾಚಿತ್ರಗಳು

ವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ಗಡಿ ಭಾಗದಲ್ಲಿರುವ ಮತ್ತು ಗುಡ್ಡ ಬೆಟ್ಟಗಳಿಂದ ಆವೃತವಾಗಿರುವ ಯು. ರಾಜಾಪುರ (ಉಬ್ಬಲಗಂಡಿ-ರಾಜಾಪುರ) ಗ್ರಾಮದಲ್ಲಿ ಹಲವು ಐತಿಹಾಸಿಕ ಕುರುಹು ಕಾಣಬಹುದಾಗಿದೆ.

ಗ್ರಾಮದ ಬಳಿಯ ಬೆಟ್ಟದಲ್ಲಿನ ಬಂಡೆ ಕಲ್ಲುಗಳ ಮೇಲೆ ಪ್ರಾಣಿಗಳ ರೇಖಾಚಿತ್ರಗಳನ್ನು ಚಿತ್ರಿಸಲಾಗಿದೆ. ಈ ಚಿತ್ರಗಳು ಶಿಲಾಯುಗದ ಕಾಲಕ್ಕೆ ಸೇರಿದವುಗಳಾಗಿವೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಊರ ಕಾವಲಿಗೆ ಇದ್ದ ಉಡೇವು:

ಗ್ರಾಮದ ಅಗಸೆ ಬಾಗಿಲಿನ ಬಳಿಯಲ್ಲಿನ ಈಶ್ವರ ದೇವಸ್ಥಾನದ ಎದುರಿಗೆ ಊರ ಕಾವಲಿಗೆ ಅನುಕೂಲವಾಗಲೆಂದು ನಿರ್ಮಿಸಲಾಗಿದ್ದ ಉಡೇವು (ಕೋಟೆ ಅಥವಾ ಬುರುಜು ಆಕಾರದ ಕಟ್ಟಡ) ಕಾಲನ ಹೊಡೆತಕ್ಕೆ ಸಿಕ್ಕರೂ, ಈಗಲೂ ಗಟ್ಟಿಮುಟ್ಟಾಗಿದೆ. ಈ ಉಡೇವ ಮೇಲೆ ಕೆಲ ದಶಕಗಳ ಹಿಂದೆ ಮನೆಯೊಂದಿತ್ತು. ಅಲ್ಲಿ ಊರ ತಳವಾರರು ವಾಸವಾಗಿರುತ್ತಿದ್ದರು. ಅಗಸೆಯ ಹಿಂದೆ ಮನೆಗಳು ಇರುತ್ತಿದ್ದವು. ರಾತ್ರಿಯಾಯಿತೆಂದರೆ, ಕಳ್ಳರ ಕಾಟದಿಂದ ರಕ್ಷಣೆ ಪಡೆಯಲು ಊರ ಅಗಸೆ ಬಾಗಿಲನ್ನು ಹಾಕಿಬಿಡುತ್ತಿದ್ದರು. ಅಗಸೆಯ ಹಿಂದುಗಡೆಯ ಉಡೇವದ ಮೇಲಿನ ಮನೆಯಲ್ಲಿ ವಾಸವಿದ್ದ ತಳವಾರರು ಕಳ್ಳರು ಊರಿನ ಒಳಗಡೆ ನುಸುಳದಂತೆ ಕಾವಲು ಕಾಯುತ್ತಿದ್ದರು. ಕಳ್ಳರು ಬಂದರೆ, ಗ್ರಾಮದ ಜನತೆಗೆ ಸೂಚನೆ ನೀಡುವ ಮೂಲಕ ಅವರನ್ನು ಎಚ್ಚರಿಸಿ, ಗ್ರಾಮವನ್ನು ಕಳ್ಳರಿಂದ ರಕ್ಷಿಸುತ್ತಿದ್ದರು. ಈಗ ಅಗಸೆ ಹೊರಗಡೆಯೂ ಊರು ಬೆಳೆದಿದೆ.

ವೀರಗಲ್ಲುಗಳು:

ಗ್ರಾಮದ ಸುತ್ತಮುತ್ತ ಕೆಲವೆಡೆಗಳಲ್ಲಿ ವೀರಗಲ್ಲುಗಳು ಕಾಣಸಿಗುತ್ತವೆ. ಕಾಲನ ಹೊಡೆತಕ್ಕೆ ಸಿಕ್ಕು ಜನಮಾನಸದಿಂದ ಮರೆಯಾಗುವ ಮುನ್ನ ಇಂತಹ ಐತಿಹಾಸಿಕ ಕುರುಹು ಸಂರಕ್ಷಿಸಿ, ಅವುಗಳ ಕುರಿತು ಸಂಶೋಧನೆ ನಡೆಸಿ, ಬೆಳಕು ಚೆಲ್ಲಬೇಕಿದೆ. ಆ ಮೂಲಕ ಕಾಲಗರ್ಭದಲ್ಲಿ ಹೂತು ಹೋಗಿರುವ ಸ್ಥಳೀಯ ಇತಿಹಾಸವನ್ನು ಜನತೆಗೆ ಪರಿಚಯಿಸುವ ಕಾರ್ಯ ಇತಿಹಾಸಕಾರರಿಂದ ನಡೆಯಬೇಕಿದೆ.ನಮ್ಮ ಗ್ರಾಮದ ಬಳಿಯ ಬೆಟ್ಟದಲ್ಲಿನ ಕಲ್ಲು ಬಂಡೆಗಳ ಮೇಲೆ ಶಿಲಾಯುಗದ ಕಾಲದ್ದೆಂದು ಹೇಳಲಾದ ರೇಖಾ ಚಿತ್ರಗಳಿವೆ. ಗ್ರಾಮದಲ್ಲಿಯೇ ಉಡೇವು ಇದೆ. ಸುತ್ತಮುತ್ತ ಕೆಲ ವೀರಗಲ್ಲುಗಳು ಕಾಣಸಿಗುತ್ತವೆ. ಇವುಗಳ ಮೇಲೆ ಇತಿಹಾಸಕಾರರು ಬೆಳಕು ಚೆಲ್ಲುವ ಅಗತ್ಯವಿದೆ ಎಂದು ಗ್ರಾಪಂ ಅಧ್ಯಕ್ಷ, ಯು. ರಾಜಾಪುರ ನಿವಾಸಿ ಬಿ. ನಾಗೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ