ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಅನುಷ್ಠಾನಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಸುಮಾರು 73 ಸಾವಿರ ಎಕರೆ ಜಮೀನು ಮುಳುಗಡೆಯಾಗಲಿದ್ದು, ರೈತರು ಪ್ರತಿ ಎಕರೆ ಜಮೀನಿಗೆ ₹50 ಲಕ್ಷ ಪರಿಹಾರ ಕೇಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಅನುಷ್ಠಾನಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಸುಮಾರು 73 ಸಾವಿರ ಎಕರೆ ಜಮೀನು ಮುಳುಗಡೆಯಾಗಲಿದ್ದು, ರೈತರು ಪ್ರತಿ ಎಕರೆ ಜಮೀನಿಗೆ ₹50 ಲಕ್ಷ ಪರಿಹಾರ ಕೇಳುತ್ತಿದ್ದಾರೆ. ₹40 ಲಕ್ಷ ಮೇಲ್ಪಟ್ಟು ಪರಿಹಾರ ನಿಗದಿಪಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕೆ ರೈತರ ಒಪ್ಪಿಗೆ ಬೇಕಾಗುತ್ತದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೂರನೇ ಹಂತದ ಯೋಜನೆಯ ಅನುಷ್ಠಾನದಿಂದ ₹10 ಲಕ್ಷ ಎಕರೆ ಜಮೀನು ನೀರಾವರಿ ಸೌಲಭ್ಯ ಪಡೆಯಲಿದೆ. ಉತ್ತರ ಕರ್ನಾಟಕದ ಪಾಲಿನ 130 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಹೊಸ ಏತ ನೀರಾವರಿ ಯೋಜನೆ ನಿರ್ಮಿಸುವ ಅವಶ್ಯಕತೆ ಇದೆ. ಮರೆಗುದ್ದಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ಸಮ್ಮತಿಸಿದೆ. ತುಂಗಳ ಸಾವಳಗಿ ಅವೈಜ್ಞಾನಿಕವಾಗಿದೆ ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗಿದೆ. ತಾಲೂಕಿನ ತುಬಚಿ ಗ್ರಾಮದ ಬಳಿ ನೂತನ ಜಾಕ್‌ವೆಲ್ ನಿರ್ಮಿಸಲು ಮನವಿ ಸಲ್ಲಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಜಮಖಂಡಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ವಹಿಸಲಾಗಿದೆ. ಟಕ್ಕಳಕಿ-ಟಕ್ಕೊಡ ರಸ್ತೆ, ನಗರದ ರಸ್ತೆ ಅಗಲೀಕರಣ, ಯುಜಿಡಿ ಕೆಲಸಗಳಿಗೆ ಅನುದಾನ ತರುವ ಕೆಲಸ ಮಾಡಲಾಗಿದೆ. ನಗರಕ್ಕೆ ಕುಡಿಯುವ ನೀರಿನ ಸರಬರಾಜು ಕೇಂದ್ರದಲ್ಲಿ ನುರಿತ ತಜ್ಞರನ್ನು ನೇಮಿಸಿ ಸರಬರಾಜಾಗುವ ನೀರು ಕುಡಿಯಲು ಯೋಗ್ಯವಿರುವಂತೆ ನೋಡಿಕೊಳ್ಳಲು ಮನವಿ ಸಲ್ಲಿಸಲಾಗಿದ್ದು, ಸರ್ಕಾರ ಗುತ್ತಿಗೆ ಆಧಾರದಲ್ಲಿ ತಜ್ಞರನ್ನು ನೇಮಿಸಿಕೊಳ್ಳಲು ನಗರಸಭೆಗೆ ಅನುಮತಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತ್ವರಿತವಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 6 ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿಗೆ ₹1.60 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣವಾಗಲಿದೆ. ಗಿರೀಶ ನಗರದ ಪ್ರಾಥಮಿಕ ಶಾಲೆಯಲ್ಲಿ ₹9 ಲಕ್ಷ ವೆಚ್ಚದಲ್ಲಿ ನೂತನ ಕೊಠಡಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಳೆಯಿಂದ ಬೆಳೆಹಾನಿಯಾದ ಬಗ್ಗೆ ಅಧಿಕಾರಿಗಳು ಸರ್ವೆ ನಡೆಸಿದ್ದು, ಸರ್ಕಾರ ಪರಿಹಾರ ನೀಡಲಿದೆ ಎಂದು ತಿಳಿಸಿದರು. ಪ್ರಾಂಶುಪಾಲೆ ಡಾ.ಸುನಂದಾ ಶಿರೂರ, ಉಪನ್ಯಾಸಕರು, ವಿದ್ಯಾರ್ಥಿಗಳು ಮುಖಂಡರಾದ ಶಂಕರ ಕಾಳೆ, ಗಣೇಶ ಶಿರಗಣ್ಣವರ, ಪ್ರಶಾಂತ ಗಾಯಕವಾಡ, ವಿಸ್ವಾಸ ಪಾಟೀಲ, ರಮೇಶ ಆಲಬಾಳ, ಕುಶಾಲ ವಾಘ್ಮೋರೆ, ಸಂತೋಷ ಮಾನೆ, ರಾಜು ಚಿಕನಾಳ, ರಾಜು ಕಡಕೋಳ, ನಾಗರಾಜ ತಂಗಡಗಿ, ಅಣ್ಣಪ್ಪ ಚಿಕ್ಕಲಗಾರ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.