ರಾಯಚೂರಲ್ಲಿ ವಕ್ಫ್ ಜಾಗದ ಅನಧಿಕೃತ ಮನೆ, ಅಂಗಡಿ ತೆರವು

KannadaprabhaNewsNetwork |  
Published : May 22, 2025, 01:13 AM ISTUpdated : May 22, 2025, 01:14 AM IST
21ಕೆಪಿಆರ್‌ಸಿಆರ್‌ 02: | Kannada Prabha

ಸಾರಾಂಶ

ವಕ್ಫ್‌ ಸೇರಿದ ಜಾಗದಲ್ಲಿ ಅನಧಿಕೃತ ಮನೆ ಹಾಗೂ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಬುಧವಾರ ಆರಂಭಿಸಲಾಯಿತು.

ಸ್ಥಳೀಯರಿಂದ ವಿರೋಧ, ಪ್ರತಿಭಟನೆ । ವಕ್ಫ್ ಟ್ರಿಬ್ಯೂನಲ್‌ನಿಂದ ತಾತ್ಕಾಲಿಕ ತಡೆ । ಬಿಗಿ ಪೊಲೀಸ್‌ ಬಂದೋಬಸ್ತ್

ಕನ್ನಡಪ್ರಭ ವಾರ್ತೆ ರಾಯಚೂರು

ವಕ್ಫ್‌ ಸೇರಿದ ಜಾಗದಲ್ಲಿ ಅನಧಿಕೃತ ಮನೆ ಹಾಗೂ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಬುಧವಾರ ಆರಂಭಿಸಲಾಯಿತು.

ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಹಿಂಬದಿಯಲ್ಲಿರುವ ಹಾಶ್ಮಿಯಾ ಮಸೀದಿಯ ಅಕ್ಕ-ಪಕ್ಕದಲ್ಲಿ ಹಲವಾರು ದಶಕಗಳಿಂದ ಮನೆ ಹಾಗೂ ಮುಖ್ಯ ರಸ್ತೆ ಮುಂಭಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ಕಟ್ಟಿಕೊಂಡು ವಿವಿಧ ರೀತಿಯಲ್ಲಿ ವ್ಯಾಪಾರ-ವಹಿವಾಟು ಮಾಡಲಾಗುತ್ತು. ಈ ಜಾಗವು ವಕ್ಫ್‌ ಸೇರಿದ್ದು, ಅಕ್ರವಾಗಿ ಒತ್ತುವರಿ ಮಾಡಿಕೊಂಡಿದ್ದರಿಂದ, ಬುಧವಾರ ಬೆಳಂಬೆಳಗ್ಗೆ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಐದಾರು ಜೆಸಿಬಿಯೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಯಿತು.

ವಕ್ಫ್‌ ಗೆ ಸೇರಿದ್ದ ಜಾಗದ ಒತ್ತುವರಿಯನ್ನು ತೆರವುಗೊಳಿಸುವಂತೆ ವಕ್ಫ್ ಮಂಡಳಿಯಿಂದಲೇ ದೂರು ಸಲ್ಲಿಕೆಯಾಗಿದ್ದು, ಕಲಬುರಗಿ ವಕ್ಫ್ ಟ್ರಿಬ್ಯೂನಲ್ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬುಧವಾರ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ತೆರವುಗೊಳಿಸಲು ಮುಂದಾಗುತ್ತಿದ್ದಂತೆ ಅಲ್ಲಿಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಲು ಮುಂದಾದರು. ಈ ವೇಳೆ ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಹಾಶ್ಮೀಯಾ ಮೈದಾನದಲ್ಲಿ ಸುಮಾರು 34 ಕುಟುಂಬಗಳು ವಾಸವಾಗಿದ್ದು ಅದೇ ರೀತಿ 20ಕ್ಕೂ ಹೆಚ್ಚು ಅಂಗಡಿಗಳನ್ನು ನಡೆಸಲಾಗುತ್ತಿದೆ.

ಮೂರ್ನಾಲ್ಕು ದಶಕಗಳಿಂದ ಇಲ್ಲೇ ವಾಸ ಮಾಡಲಾಗುತ್ತಿದೆ, ವ್ಯಾಪಾರ ವಹಿವಾಟು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ಇದೀಗ ಏಕಾಏಕಿ ಜಾಗ ಖಾಲಿ ಮಾಡುವಂತೆ ಸೂಚಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. ಆದರೆ, ಇದ್ಯಾವುದಕ್ಕೂ ಮನ್ನಣೆ ನೀಡದ ಪೊಲೀಸರು ಪ್ರತಿಭಟನಾಕಾರರನ್ನು ಪಕ್ಕಕ್ಕೆ ಕರೆದು ಮನವೊಲಿಸಿ ತಮ್ಮ ಕೆಲಸ ಮುಂದುವರಿಸಿದರು.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆಯೇ ಒತ್ತುವರಿ ತೆರವು ಮಾಡುವಂತೆ ಅಂಗಡಿ ಮುಂಗಟ್ಟುಗಳು, ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅದನ್ನು ಸ್ಥಳೀಯರು ನಿರ್ಲಕ್ಷಿಸಿದ್ದರು. ಆದರೆ, ಇಂದು ದಿಢೀರ್ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕಂಗಾಲಾದರು. ಕೆಲ ವರ್ತಕರು ಕಾಲಾವಕಾಶ ಕೊಡಿ ನಾವೇ ಎಲ್ಲ ಸಾಮಗ್ರಿ ತೆರವು ಮಾಡಿಕೊಳ್ಳುವುದಾಗಿ ತಿಳಿಸಿದರು. ಉಳಿದ ಕಡೆ ಜೆಸಿಬಿಗಳು ಕಟ್ಟಡಗಳ ನೆಲಸಮ ಕಾರ್ಯ ಆರಂಭಿಸಿತು. ಮಧ್ಯಾಹ್ನದ ವೇಳೆ ರಸ್ತೆ ಮುಂಭಾಗದ ಬಹುತೇಕ ಕಟ್ಟಡಗಳನ್ನು ತೆರವು ಮಾಡಲಾಗಿತ್ತು.

ವಿಪರ್ಯಾಸ ಎಂದರೆ ಇಲ್ಲಿ ವಾಸಿಸುತ್ತಿರುವವರಲ್ಲಿ ಬಹುತೇಕರು ಬಾಡಿಗೆದಾರರಾಗಿದ್ದಾರೆ. ವಕ್ಫ್ ಸ್ಥಳ ಒತ್ತುವರಿ ಮಾಡಿ ಮನೆ ಕಟ್ಟಿದವರು ಅವುಗಳನ್ನು ಬಾಡಿಗೆ ನೀಡಿ ತಾವು ಬೇರೆ ನೆಲೆಸಿದ್ದಾರೆ. ಅಲ್ಲದೇ, ಹೋಟೆಲ್ಗಳಿಗೆ, ವಿವಿಧ ವಾಣಿಜ್ಯ ಉದ್ದೇಶಗಳಿಗೂ ಬಾಡಿಗೆ ನೀಡಿದ್ದಾರೆ. ತೆರವು ಕಾರ್ಯಚರಣೆ ವೇಳೆಯೇ ಈ ವಿಚಾರ ಬೆಳಕಿಗೆ ಬಂದಿದೆ.

ಈ ತೆರವು ಕಾರ್ಯ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣಿಸಿ ಪ್ರಯಾಣಿಕರು ಪರದಾಡಿದರು. ಸಾರಿಗೆ ಬಸ್ಗಳ ಮಾರ್ಗ ಬದಲಿಸಿ ಹಳೇ ಡಿಸಿ ಕಚೇರಿ ಮುಂಭಾಗದಿಂದ ಓಡಿಸಲಾಯಿತು. ಅಲ್ಲದೇ, ಸ್ಟೇಶನ್ ರಸ್ತೆಯಿಂದ ಬರುವ ವಾಹನಗಳಿಗೆ ಪರ್ಯಾಯ ಮಾರ್ಗವಿಲ್ಲದೇ ಪರದಾಡಿದ ಪ್ರಸಂಗ ನಡೆಯಿತು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’