26ಕ್ಕೆ ಚಾಲಕರಿಗೆ ಸಮವಸ್ತ್ರ, ಮಕ್ಕಳಿಗೆ ಪುರಸ್ಕಾರ

KannadaprabhaNewsNetwork | Published : Nov 21, 2023 12:45 AM

ಸಾರಾಂಶ

ವಿನಯ ಮಾರ್ಗ ಟ್ರಸ್ಟ್‌, ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಆಯೋಜನೆ । ವಿದ್ಯಾರ್ಥಿಗಳ ಪಾಲಕರಿಗೆ ಸನ್ಮಾನ

ವಿನಯ ಮಾರ್ಗ ಟ್ರಸ್ಟ್‌, ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಆಯೋಜನೆ । ವಿದ್ಯಾರ್ಥಿಗಳ ಪಾಲಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಟೋ, ಲಾರಿ, ಟ್ಯಾಕ್ಸಿ ಚಾಲಕರಿಗೆ ಸನ್ಮಾನ, ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾವಿರಾರು ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ವಿನಯ ಮಾರ್ಗ ಟ್ರಸ್ಟ್‌, ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ನ.26ರಂದು ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಇನ್ ಸೈಟ್ಸ್ ಅಕಾಡೆಮಿ ಸಂಸ್ಥಾಪಕ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯಕುಮಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 11ಕ್ಕೆ ಹಿಂದುಳಿದ ಸಮುದಾಯಗಳ ಮಠಾಧೀಶರ ಸಾನ್ನಿಧ್ಯದಲ್ಲಿ ನಡೆವ ಸಮಾರಂಭದಲ್ಲಿ ಚಾಲಕರ ಮಕ್ಕಳಿಗೆ ವಿಶೇಷವಾಗಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ 1 ಸಾವಿರ ರು. ನಗದು ಪ್ರೋತ್ಸಾಹಧನ, ನೆನಪಿನ ಕಾಣಿಕೆ, ಪ್ರಮಾಣಪತ್ರ, ಕಾಲೇಜು ಬ್ಯಾಗ್‌ ನೀಡಿ, ಗೌರವಿಸಲಾಗುವುದು. ವಿದ್ಯಾರ್ಥಿಗಳ ಪಾಲಕರಿಗೆ ಸನ್ಮಾನಿಸಲಾಗುವುದು. ಚಾಲಕರು ನ.24ರೊಳಗಾಗಿ ಡಿಎಲ್, ಆಧಾರ್ ಕಾರ್ಡ್‌, ವಿದ್ಯಾರ್ಥಿಗಳ ಅಂಕಪಟ್ಟಿ ಜೆರಾಕ್ಸ್ ಪ್ರತಿ ಸಹಿತ ಜಿ.ಬಿ.ವಿನಯಕುಮಾರ, ಜನ ಸಂಪರ್ಕ ಕಚೇರಿ, ಮ.ನಂ.2415-45, 10ನೇ ಅಡ್ಡ ರಸ್ತೆ, ಅಥಣಿ ಕಾಲೇಜು ರಸ್ತೆ, ಎಸ್ಸೆಸ್ ಲೇಔಟ್ ಎ ಬ್ಲಾಕ್, ದಾವಣಗೆರೆ(ಮೊ. 85480-22544, 93806-11142)ಗೆ ನೀಡಿ, ಹೆಸರು ನೋಂದಾಯಿಸಿ ಎಂದು ತಿಳಿಸಿದರು.

ಸಮಾರಂಭದಲ್ಲಿ ಕನಿಷ್ಟ 500ರಿಂದ 1 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ದಾವಣಗೆರೆಯಲ್ಲಿ 5-6 ಸಾವಿರಕ್ಕಿಂತಲೂ ಹೆಚ್ಚು ಆಟೋ ರಿಕ್ಷಾಗಳಿದ್ದು, ಸಮಾರಂಭಕ್ಕೆ ಬರುವ ಎಲ್ಲಾ ಆಟೋ ಚಾಲಕರಿಗೂ ಸಮವಸ್ತ್ರವನ್ನು ಟ್ರಸ್ಟ್‌ ಹಾಗೂ ಬಳಗದಿಂದ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವೈಯಕ್ತಿಕವಾಗಿ ತಾವೂ ಸಾಕಷ್ಟು ಬಡ ಮಕ್ಕಳಿಗೆ ಓದಿಗೆ ನೆರವಿನ ಹಸ್ತ ಚಾಚುತ್ತಿದ್ದೇನೆ ಎಂದು ಹೇಳಿದರು.

ಶೀಘ್ರವೇ ಇನ್‌ಸೈಟ್‌ ಅಕಾಡೆಮಿ ಸ್ಥಾಪನೆ:

ದಾವಣಗೆರೆ ಸೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶೀಘ್ರವೇ ಇನ್‌ಸೈಟ್‌ ಅಕಾಡೆಮಿ ಸ್ಥಾಪಿಸಿ, ಐಎಎಸ್‌, ಐಪಿಎಸ್‌ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುವುದು. ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಾವು ಭೇಟಿಯಾಗಿದ್ದ ವೇಳೆ ಶ್ರೀಮಠ ಹಾಗೂ ತಮ್ಮ ಇನ್‌ಸೈಟ್ಸ್ ಅಕಾಡೆಮಿಯಿಂದ ಬೆಂಗಳೂರಿನ ಆರ್‌ಟಿ ನಗರದಲ್ಲಿ ಐಎಎಸ್‌-ಐಪಿಎಸ್‌ ತರಬೇತಿ ಕೇಂದ್ರ ಆರಂಭಿಸುವ ಚರ್ಚೆ ನಡೆಸಿದ್ದು, ಶೀಘ್ರವೇ ಕೇಂದ್ರವು ಕಾರ್ಯಾರಂಭವಾಗಲಿದೆ ಎಂದು ತಿಳಿಸಿದರು. ಬಳಗದ ಎಸ್.ಎಂ.ಸಿದ್ಧಲಿಂಗಪ್ಪ, ಆರ್‌.ಬಿ.ಪರಮೇಶ, ಶರತ್‌, ಪುರಂದರ ಲೋಕಿಕೆರೆ, ಜಿ.ಎನ್.ಷಣ್ಮುಖಪ್ಪ ಇತರರಿದ್ದರು. .............................

ಲೋಕಸಭಾ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ

* ಕ್ಷೇತ್ರದಲ್ಲಿ ಮೂವರ ಹೆಸರು ಮುಂಚೂಣಿಯಲ್ಲಿವೆ: ಜಿ.ಬಿ.ವಿನಯಕುಮಾರ

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ತಾವು ಟಿಕೆಟ್ ಆಕಾಂಕ್ಷಿಯಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ ಈಶ್ವರ ಖಂಡ್ರೆಯವರು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ನಾನೂ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದೇನೆ ಎಂದು ಬೆಂಗಳೂರಿನ ಇನ್ ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು. ದಾವಣಗೆರೆ ಟಿಕೆಟ್ ಕೋರಿ ಒಟ್ಟು 6 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಮೂವರ ಹೆಸರು ಮಾತ್ರ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಹೋಗಿವೆ. ನಾಯಕರಿಗೆ ಕಳಿಸಿದ ಹೆಸರುಗಳ ಪೈಕಿ ತಮ್ಮ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಇದೆ ಎಂದರು.

ಕ್ಷೇತ್ರಾದ್ಯಂತ ಪ್ರತಿ ಹಳ್ಳಿಗೂ ಭೇಟಿ ನೀಡಿ, ಜನರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದೇನೆ. ನಮ್ಮ ಕೈಲಾದಷ್ಟು ನೆರವಿನ ಹಸ್ತ ಚಾಚುತ್ತಿದ್ದೇವೆ. ಬಡವರು, ಶ್ರಮಿಕರು, ಕೂಲಿ ಕಾರ್ಮಿಕರು, ರೈತಾಪಿ ವರ್ಗದ ಮಕ್ಕಳು ವಿದ್ಯಾವಂತರಾಗಿ ಮುಖ್ಯವಾಹಿನಿಗೆ ಬರಬೇಕೆಂಬ ಕನಸು ನನಗಿದೆ. ಈ ಹಿನ್ನೆಲೆಯಲ್ಲಿ ಸಮಾಜಮುಖಿ ಕಾರ್ಯಗಳನ್ನು ತಮ್ಮ ಬಳಗ , ಅಕಾಡೆಮಿ ಹಾಗೂ ವಿನಯ ಮಾರ್ಗ ಟ್ರಸ್ಟ್ ಮೂಲಕ ಮಾಡುತ್ತಿದ್ದೇನೆ.

ಜಿ.ಬಿ.ವಿನಯಕುಮಾರ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.............20ಕೆಡಿವಿಜಿ4-ದಾವಣಗೆರೆಯಲ್ಲಿ ಇನ್ಸ್‌ಸೈಟ್ಸ್‌ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article