ಕನ್ನಡಪ್ರಭ ವಾರ್ತೆ ಮೈಸೂರುಒಳಮೀಸಲಾತಿಯಿಂದ ದಲಿತರು ಒಗ್ಗಟ್ಟಾಗಿಲ್ಲ, ವಿಂಗಡನೆಯಾಗಿದ್ದು, ಇದರ ಅರಿವು ಯಾರಿಗೂ ಇಲ್ಲವಾಗಿದೆ. ಒಳ ಮೀಸಲಾತಿ ವಿಷಯದಲ್ಲಿ ಪರಿಶಿಷ್ಟ ಜಾತಿಗಳನ್ನು ಒಡೆದು ಆಳುವ ತೀರ್ಮಾನವಾಗಿದೆ ಎಂದು ಕಾಂಗ್ರೆಸ್ ಶಾಸಕ ಎ.ಆರ್. ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.ಮೈಸೂರು ವಿವಿ, ರಾಜ್ಯ ಮುಕ್ತ ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗ ಸಹಯೋಗದಲ್ಲಿ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ 21ನೇ ಮಹಾ ಸಮ್ಮೇಳನ ಮತ್ತು ರಜತ ಮಹೋತ್ಸವ ಸಮಾರಂಭದಲ್ಲಿ ಅವರು, ಮೀಸಲು ಕ್ಷೇತ್ರದ ರಾಜಕಾರಣ ಕುರಿತು ಮಾತನಾಡಿದರು.ನಮ್ಮಲ್ಲಿರುವ 2 ಪ್ರಬಲ ಜಾತಿಗಳಿಗೆ ಅವಕಾಶ ಕಲ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಒಳಮೀಸಲಾತಿ ಹಂಚಿಕೆ ನ್ಯಾಯ ಸಮ್ಮತವಾಗಿಲ್ಲ. ನ್ಯಾ. ನಾಗಮೋಹನದಾಸ್ ವರದಿಯಲ್ಲಿ ಪರಿಶಿಷ್ಟ ಜಾತಿಗಳ ವರ್ಗೀಕರಣವೇ ಅವೈಜ್ಞಾನಿಕ ಎಂದು ಅವರು ತಿಳಿಸಿದರು.ಸದನದಲ್ಲೇ ಒಳ ಮೀಸಲಾತಿ ಮಸೂದೆಯನ್ನು ನಾನೊಬ್ಬನ್ನೇ ಬಹಿರಂಗವಾಗಿ ವಿರೋಧಿಸಿದ್ದೆ. ಇದಕ್ಕೆ ಸರ್ಕಾರ ಕಿವಿಗೊಡಲಿಲ್ಲ. ಒಳ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಲಾಗಿದೆ. ಇದು ಇಲ್ಲಿಗೆ ಮುಗಿಯಲ್ಲ. ಇನ್ಮುಂದೆ ದಲಿತರಿಗೆ ಸಿಎಂ ಸ್ಥಾನ ಕೇಳಲಾಗಲ್ಲ. ಈ ಕಚ್ಚಾಟದಲ್ಲಿ 3ನೇ ಸಮುದಾಯಕ್ಕೆ ಸಿಎಂ ಸ್ಥಾನ ಹೋಗುತ್ತದೆಯಷ್ಟೇ ಎಂದು ಅವರು ಎಚ್ಚರಿಸಿದರು.ದೇಶದಲ್ಲಿ ಎಸ್ಸಿ ಪಟ್ಟಿ ಏಕರೂಪದಲ್ಲಿ ಇಲ್ಲ. ಒಂದು ರಾಜ್ಯಕ್ಕೂ, ಇನ್ನೊಂದು ರಾಜ್ಯಕ್ಕೂ ತಾಳೆ ಆಗುತ್ತಿಲ್ಲ. ಕರ್ನಾಟಕದಲ್ಲಿ ಎಸ್ಸಿ ಪಟ್ಟಿಯಲ್ಲಿರುವ ಜಾತಿ, ಬೇರೆ ರಾಜ್ಯದಲ್ಲಿ ಒಬಿಸಿಯಲ್ಲಿ ಇರುತ್ತದೆ. ಇಂತಹ ಹತ್ತಾರು ನಿದರ್ಶನಗಳಿವೆ. ಡಾ.ಬಿ.ಆರ್. ಅಂಬೇಡ್ಕರ್ ಮೀಸಲಾತಿ ಕೊಟ್ಟಾಗ ಎಸ್ಸಿ ಪಟ್ಟಿಯಲ್ಲಿ ಕೇವಲ 6 ಜಾತಿಗಳಿದ್ದವು. ಆದರೀಗ ರಾಜ್ಯದಲ್ಲಿ 101 ಜಾತಿಗಳಿವೆ. ರಾಷ್ಟ್ರ ಮಟ್ಟದ ಪಟ್ಟಿಯಲ್ಲಿ 200 ಹೆಚ್ಚು ಜಾತಿಗಳಿವೆ. ಜೊತೆಗೆ ಎಲ್ಲ ಜಾತಿಗಳು, ಎಲ್ಲ ಧರ್ಮದವರಿಗೂ ಮೀಸಲಾತಿ ಸಿಗುತ್ತಿದೆ. ಇಂತಹ ಸ್ಥಿತಿ ಇರುವಾಗ ಭಾರತೀಯರೆಲ್ಲ ಒಂದು ಎಂಬ ಹೇಳಿಕೆ ವಾಸ್ತವ ಆಗಿದೆಯೇ ಎಂದು ಅವರು ಪ್ರಶ್ನಿಸಿದರು.ಇದೇ ವೇಳೆ ಚುನಾವಣಾ ರಾಜಕಾರಣ ಕುರಿತು ಶಾಸಕ ಜಿ.ಟಿ. ದೇವೇಗೌಡ, ಸದನದ ಕಾರ್ಯಕಲಾಪಗಳು ಕುರಿತು ಶಾಸಕ ಎಸ್. ಸುರೇಶ್ ಕುಮಾರ್, ಮಹಿಳಾ ರಾಜಕಾರಣ ಕುರಿತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಂ. ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು.----ಕೋಟ್...ಮಾತನಾಡಿ, ಜನರ ಸಮಸ್ಯೆಗಳಿಗೆ ಸದನದಲ್ಲಿ ಉತ್ತರ ಸಿಗುತ್ತದೆಯೇ ಹೊರತು, ಪರಿಹಾರ ದೊರೆಯುತ್ತಿಲ್ಲ. ಸದನದ ಗುಣಮಟ್ಟ ಕುಸಿದಿದೆ. ಕಲಾಪ ಇಲ್ಲ. ಬರೀ ಪ್ರತಾಪವೇ ಆಗುತ್ತಿದೆ. ಸದನದಲ್ಲಿ ಜನರ ದುಃಖ ದುಮ್ಮಾನಗಳ ಕುರಿತು ಚರ್ಚೆಯಾಗುತ್ತಿಲ್ಲ.- ಎಸ್. ಸುರೇಶ್ ಕುಮಾರ್, ಶಾಸಕರು----ರಾಜಕೀಯದಲ್ಲಿ ನೀತಿ ಗೌಣವಾಗಿದೆ. ಯಾರು ಬೇಕಾದರೂ ರಾಜಕೀಯಕ್ಕೆ ಬರಬಹುದು, ರಾಜಕಾರಣ ಮಾಡಬಹುದಾಗಿದೆ. ಮೌಲ್ಯಾಧಾರಿತ ರಾಜಕಾರಣ ನಶಿಸಿದೆ. ಮೌಲ್ಯವೂ ಮಾಯವಾಗಿದೆ. ಜಾತಿ, ಹಣ ಬಲವೇ ವಿಜೃಂಭಿಸುತ್ತಿದೆ. ಇದರಿಂದಲೇ ಶಾಸಕ, ಮಂತ್ರಿಯೂ ಆಗಬಹುದಾಗಿದೆ. ಪ್ರಜ್ಞಾವಂತರು, ವಿದ್ಯಾವಂತರು, ಪ್ರಾಮಾಣಿಕರು ರಾಜಕೀಯಕ್ಕೆ ಬರಲು ಆತ್ಮಸ್ಥೈರ್ಯವೇ ಇಲ್ಲವಾಗಿದೆ. ಅಂತಹವರನ್ನು ಜನರು ಸಹ ಆಯ್ಕೆ ಮಾಡಲ್ಲ.- ಜಿ.ಟಿ. ದೇವೇಗೌಡ, ಶಾಸಕರು---ತೋಳ್ಬಲ, ಹಣದಿಂದ ಮಹಿಳೆಯರ ಪ್ರಾತಿನಿಧ್ಯ ನಶಿಸುತ್ತಿದೆ. ಶಾಸನಸಭೆಗಳಲ್ಲಿ ಶೇ.50 ರಷ್ಟು ಮೀಸಲಾತಿ ಜಾರಿಗೆ ಬಂದರೂ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಲ್ಲ. ಹಣವಂತರೆ ತಮ್ಮ ಮನೆಯ ಮಹಿಳೆಯರಿಗೆ ಅವಕಾಶ ಕೊಡುತ್ತಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಕುಟುಂಬದಲ್ಲಿ ಮಹಿಳಾ ಸಮಾನತೆ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದೆ. ಆದರೆ, ರಾಜಕೀಯದಲ್ಲಿ ಪ್ರಾತಿನಿಧ್ಯ ಇನ್ನೂ ಮರೀಚಿಕೆಯಾಗಿದೆ.- ಡಾ. ಪುಷ್ಪಾ ಅಮರನಾಥ್, ಉಪಾಧ್ಯಕ್ಷರು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರೇ