ಧಾರವಾಡ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಹಾಹಾಕಾರ!

KannadaprabhaNewsNetwork |  
Published : Jun 29, 2025, 01:33 AM IST
ಕಲಘಟಗಿಯಲ್ಲಿ ಶನಿವಾರ ರೈತರು ಯೂರಿಯಾ ಗೊಬ್ಬರಕ್ಕೆ ಆಗ್ರಹಿಸಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ರಪಡಿಸಿದರು. | Kannada Prabha

ಸಾರಾಂಶ

ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುತ್ತಿರುವುದನ್ನು ಕಂಡು ಪ್ರಜ್ಞಾವಂತರಲ್ಲಿ ಕಾಡುತ್ತಿರುವ ಪ್ರಶ್ನೆಗಳಿವು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಳೆದ ವಾರದಿಂದ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ಗೊಬ್ಬರಕ್ಕಾಗಿ ರೈತರ ಸರತಿ ಸಾಲು, ಪ್ರತಿಭಟನೆಗಳಂಥ ಘಟನೆಗಳು ಮಾಮೂಲಿ ಎಂಬಂತಾಗಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲೂ ಯೂರಿಯಾ ಗೊಬ್ಬರ ಕೊರತೆ ಅತಿಯಾಗಿದ್ದು, ಕೃಷಿ ಇಲಾಖೆಯ ನಿಷ್ಕ್ರಿಯತೆ ಖಂಡಿಸಿ ಶನಿವಾರ ರೈತರು ಕಲಘಟಗಿ ಪಟ್ಟಣದಲ್ಲಿ ಎರಡು ತಾಸುಗಳ ಕಾಲ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಮಳೆಯಿಂದಾಗಿ ರೈತರು ಈ ಸಲ ಯೂರಿಯಾ ಗೊಬ್ಬರವನ್ನು ಹೆಚ್ಚಿಗೆ ಬಳಸುತ್ತಿದ್ದಾರೆ ಎನ್ನುವುದು ಕೃಷಿ ಇಲಾಖೆಯ ಸಬೂಬು. ಹಾಗಿದ್ದರೆ ಬೇಡಿಕೆಗಿಂತ ಹೆಚ್ಚು ಸರಬರಾಜು ಆದರೂ ಗೊಬ್ಬರಕ್ಕಾಗಿ ರೈತರು ಪರದಾಡುತ್ತಿರುವುದು ಏಕೆ?

ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುತ್ತಿರುವುದನ್ನು ಕಂಡು ಪ್ರಜ್ಞಾವಂತರಲ್ಲಿ ಕಾಡುತ್ತಿರುವ ಪ್ರಶ್ನೆಗಳಿವು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಳೆದ ವಾರದಿಂದ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ಗೊಬ್ಬರಕ್ಕಾಗಿ ರೈತರ ಸರತಿ ಸಾಲು, ಪ್ರತಿಭಟನೆಗಳಂಥ ಘಟನೆಗಳು ಮಾಮೂಲಿ ಎಂಬಂತಾಗಿವೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರ ಸ್ವಕ್ಷೇತ್ರ ಕಲಘಟಗಿಯಲ್ಲಂತೂ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜತೆಗೆ ಪ್ರತಿಭಟನೆಗಳು ನಡೆಯುತ್ತಿವೆ. ಶನಿವಾರ ಅದು ವಿಕೋಪಕ್ಕೆ ಹೋಗಿ ಕಾರವಾರ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯನ್ನು ಎರಡು ತಾಸುಗಳ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಏನಾಗುತ್ತಿದೆ?: ಪ್ರಸಕ್ತ ಸಾಲಿಗೆ 2.81 ಲಕ್ಷ ಹೆಕ್ಟೇರ್‌ ಭೂಮಿ ಬಿತ್ತನೆಯ ಗುರಿ ಜಿಲ್ಲೆಯದ್ದು. ಈವರೆಗೆ 2.35 ಲಕ್ಷ ಹೆಕ್ಟೇರ್‌ (ಶೇ.83ರಷ್ಟು) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ವರ್ಷ ಜನವರಿಯಿಂದ ಜೂನ್‌ 28ರ ವರೆಗೆ 240 ಮಿಮೀ ಮಳೆಯಾಗಬೇಕಿತ್ತು. ಆದರೆ, ಸುರಿದಿದ್ದು ಬರೋಬ್ಬರಿ 381 ಮಿಮೀ ಮಳೆ. ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಕಾರಣ ಭೂಮಿಯಲ್ಲಿನ ತೇವಾಂಶ ಹೆಚ್ಚಾಗಿದೆ. ಅದರಲ್ಲೂ ಕಲಘಟಗಿ ಮಲೆನಾಡಾಗಿರುವ ಕಾರಣ ಅಲ್ಲಿ ತೇವಾಂಶ ಇನ್ನೂ ಹೆಚ್ಚಾಗಿದೆ. ನವಲಗುಂದ ಹಾಗೂ ಕುಂದಗೋಳದಲ್ಲಿ ಬೆಣ್ಣಿಹಳ್ಳ- ತುಪರಿಹಳ್ಳಗಳಿಂದಾಗಿ ಬಿತ್ತಿರುವ ಪ್ರದೇಶ ನೀರಲ್ಲೇ ನಿಂತಂತಾಗಿದೆ.

ಜಿಲ್ಲೆಗೆ ಡಿಎಪಿ, ಯೂರಿಯಾ ಸೇರಿದಂತೆ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ. ಇದೀಗ ಬಿತ್ತನೆ ಬಹುತೇಕ ಮುಗಿದ ಕಾರಣ ಡಿಎಪಿ ಗೊಬ್ಬರದ ಅಗತ್ಯವಿಲ್ಲ. ಆದರೆ, ಮಳೆ ಪ್ರಮಾಣ ಜಾಸ್ತಿಯಾಗಿರುವುದರಿಂದ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗುತ್ತಿದೆ. ಹಾಗೆ ನೋಡಿದರೆ ಜೂನ್‌ ಅಂತ್ಯದ ವರೆಗೆ ಜಿಲ್ಲೆಗೆ 11900 ಮೆಟ್ರಿಕ್‌ ಟನ್‌ ಯೂರಿಯಾ ಗೊಬ್ಬರ ಬೇಡಿಕೆ ಇದೆ. ಆದರೆ, ಈವರೆಗೆ 15900 ಮೆಟ್ರಿಕ್‌ ಟನ್‌ ಯೂರಿಯಾ ಪೂರೈಕೆಯಾಗಿದ್ದು, 13 ಸಾವಿರ ಮೆಟ್ರಿಕ್‌ ಟನ್‌ವರೆಗೂ ವಿತರಣೆ ಕೂಡ ಮಾಡಿದೆ. ಇನ್ನು 2900 ಮೆ.ಟನ್‌ನಷ್ಟು ಯೂರಿಯಾ ದಾಸ್ತಾನಿದೆ. ಆದರೂ ರೈತರು ಮಾತ್ರ ಪ್ರತಿನಿತ್ಯ ಯೂರಿಯಾ ಗೊಬ್ಬರಕ್ಕಾಗಿ ಪರದಾಡುವುದು ತಪ್ಪುತ್ತಿಲ್ಲ.

ಏಕೆ ಏನು ಕಾರಣ?: ಮಳೆ ಜಾಸ್ತಿಯಾಗಿರುವುದರಿಂದ ಯೂರಿಯಾ ಜಾಸ್ತಿ ಸಿಂಪಡಣೆ ಮಾಡಬೇಕು ಎಂಬ ಕಲ್ಪನೆ ರೈತರದ್ದು. ಹೀಗಾಗಿ ಒಂದು ಎಕರೆಗೆ ಕೃಷಿ ಇಲಾಖೆ ಶಿಫಾರಸ್ಸು ಮಾಡಿದ್ದಕ್ಕಿಂತ ಹೆಚ್ಚು ಅಂದರೆ 2-3 ಪಟ್ಟು ಗೊಬ್ಬರ ಸಿಂಪಡಣೆ ಮಾಡುತ್ತಿದ್ದಾರೆ. ಇದರಿಂದಾಗಿ ಬೇಡಿಕೆ ಜಾಸ್ತಿಯಾಗುತ್ತಿದೆ. ಜತೆಗೆ ಮುಂದೆ ಸಿಗುತ್ತದೆಯೋ ಇಲ್ವೋ ಎಂಬ ಆತಂಕದಲ್ಲೇ ಈಗ ಅಗತ್ಯವಿಲ್ಲದಿದ್ದರೂ ಕೊಂಡುಕೊಂಡು ಇಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಅಂಗಡಿ ಮುಂದೆ ನಿಂತ ಎಲ್ಲ ರೈತರಿಗೆ ಕೆಲ ಸಲ ಯೂರಿಯಾ ಸಿಗುವುದಿಲ್ಲ. ಆಗ ಸಹಜವಾಗಿ ರೈತರು ರೊಚ್ಚಿಗೆಳುವಂತಾಗುತ್ತಿದೆ ಎಂದು ಅಂಗಡಿಯೊಂದರ ಮಾಲೀಕರೊಬ್ಬರು ತಿಳಿಸುತ್ತಾರೆ.

ಅತಿಯಾಗಿ ಬಳಸಬೇಡಿ: ಕೃಷಿ ಇಲಾಖೆ ಯೂರಿಯಾ ಗೊಬ್ಬರವನ್ನು ಅತಿಯಾಗಿ ಸಿಂಪಡಿಸಿಬೇಡಿ. ಯೂರಿಯಾ ಜತೆ ಜತೆಗೆ ಪೋಷಕಾಂಶಗಳನ್ನು ಬಳಸಿ ಅಂದಾಗ ಮಾತ್ರ ಇಳುವರಿ ಹೆಚ್ಚಿಗೆ ಬರುತ್ತದೆ. ಇಲ್ಲದಿದ್ದಲ್ಲಿ ಗುಣಮಟ್ಟದ ಇಳುವರಿ ಬರಲ್ಲ ಎಂದು ತಿಳಿಸುತ್ತಿದೆ. ಆದರೂ ರೈತರು ಮಾತ್ರ ಹೆಚ್ಚುವರಿಯಾಗಿ ಬಳಕೆ ಮಾಡುತ್ತಿದ್ದಾರೆ. ರೈತರು ಎಷ್ಟು ಕೇಳುತ್ತಾರೆಯೋ ಅಷ್ಟು ಯೂರಿಯಾ ಕೊಡುತ್ತೇವೆ. ಸಿಗುವುದಿಲ್ಲ ಎಂಬ ಆತಂಕ ಬೇಡ. ಅಗತ್ಯಕ್ಕಿಂತ ಹೆಚ್ಚೇ ದಾಸ್ತಾನಿದೆ ಎಂದು ಕೃಷಿ ಇಲಾಖೆ ತಿಳಿಸುತ್ತಿದೆ.

ಕೃಷಿ ಇಲಾಖೆ ಎಷ್ಟೇ ದಾಸ್ತಾನು ಇದೆ ಎಂದು ಹೇಳಿಕೊಂಡರೂ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಮಾತ್ರ ಮುಂದುವರಿಯುತ್ತಿದೆ.

ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಲ್ಲ. ಜೂನ್‌ ಅಂತ್ಯದ ವರೆಗೆ 11900 ಮೆ.ಟನ್‌ ಬೇಡಿಕೆ. ಈವರೆಗೆ ಪೂರೈಕೆಯಾಗಿರುವುದೇ 15900 ಮೆ.ಟನ್‌. 13 ಸಾವಿರ ಮೆ.ಟನ್‌ಗೂ ಅಧಿಕ ರೈತರಿಗೆ ನೀಡಿದ್ದೇವೆ. ಸಿಗುವುದಿಲ್ಲ ಎಂಬ ಆತಂಕ ಪಡಬೇಡಿ. ಎಷ್ಟು ಕೇಳುತ್ತಾರೋ ಅಷ್ಟು ಕೊಡಲು ಇಲಾಖೆ ಸಿದ್ಧ ಎಂದು ಧಾರವಾಡದ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.

ಅಧಿಕಾರಿಗಳು ಹೇಳಿದಂತೆ ಹೆಚ್ಚು ಯೂರಿಯಾ ಬಳಕೆ ಮಾಡುತ್ತಿರುವುದು ನಿಜ. ಆದರೆ, ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ರೈತರಲ್ಲಿ ಇಳುವರಿ ಬಗ್ಗೆ ಆತಂಕ ಇದೆ. ಆದಕಾರಣ ಹೀಗಾಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಪ್ರಗತಿಪರ ರೈತ ಪರಶುರಾಮ ಎತ್ತಿನಗುಡ್ಡ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ