ಉತ್ಸವ ಹಬ್ಬ ಕನ್ನಡ ಜನಪರ ಸಂಸ್ಕೃತಿಯ ಮೂಲ ಹಿನ್ನೆಲೆ: ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ

KannadaprabhaNewsNetwork |  
Published : Jan 19, 2024, 01:50 AM IST
18ಕೆಪಿಎಲ್21 ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023-24ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ  ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ | Kannada Prabha

ಸಾರಾಂಶ

ಭಾರತವು ಒಂದು ಬಹು ಸಂಸ್ಕೃತಿಯ ದೇಶವಾಗಿದೆ. ಅದೇ ರೀತಿ ನಮ್ಮ ರಾಜ್ಯವು ಸಹ ಸಂಸ್ಕೃತಿಯ ನಾಡಾಗಿದೆ. ಕಲೆ, ಸಂಸ್ಕೃತಿ, ವಾಸ್ತುಶಿಲ್ಪಕ್ಕೆ ಕನ್ನಡ ನಾಡು ಅಪಾರ ಕೊಡುಗೆಗಳನ್ನು ನೀಡಿದೆ.

ಕೊಪ್ಪಳ: ಉತ್ಸವ, ಹಬ್ಬಗಳು ಕನ್ನಡ ಜನಪರ ಸಂಸ್ಕೃತಿಯ ಮೂಲ ಹಿನ್ನೆಲೆಯಾಗಿವೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2023-24ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಒಂದು ಬಹು ಸಂಸ್ಕೃತಿಯ ದೇಶವಾಗಿದೆ. ಅದೇ ರೀತಿ ನಮ್ಮ ರಾಜ್ಯವು ಸಹ ಸಂಸ್ಕೃತಿಯ ನಾಡಾಗಿದೆ. ಕಲೆ, ಸಂಸ್ಕೃತಿ, ವಾಸ್ತುಶಿಲ್ಪಕ್ಕೆ ಕನ್ನಡ ನಾಡು ಅಪಾರ ಕೊಡುಗೆಗಳನ್ನು ನೀಡಿದೆ. ವಿವಿಧ ನಾಡಹಬ್ಬಗಳು ಸಾಂಪ್ರದಾಯಿಕ ಹಬ್ಬಗಳು ಹಾಗೂ ಅವುಗಳ ಆಚರಣೆ, ಕನ್ನಡಪರ ಕಾರ್ಯಕ್ರಮಗಳು, ಸಮ್ಮೇಳನಗಳು ನಮ್ಮ ಸಂಸ್ಕೃತಿಯ ಮೂಲ ಹಿನ್ನೆಲೆಯನ್ನು ತಿಳಿಸುತ್ತವೆ. ಜನರಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಕಲೆ, ಜನಪದ, ಸಾಂಪ್ರದಾಯಿಕ ಪದ್ಧತಿಗಳ ಬಗ್ಗೆ ಅರಿವು ಮೂಡಿಸಲು ಜನಪರ ಉತ್ಸವದಂತಹ ಕಾರ್ಯಕ್ರಮಗಳು ಬಹುಮುಖ್ಯವಾಗಿವೆ ಎಂದರು.

ಕಲಾವಿದರು ಕಲೆಯನ್ನೇ ತಮ್ಮ ಬದುಕನ್ನಾಗಿಸಿಕೊಂಡಿದ್ದಾರೆ. ಶಿಕ್ಷಣದಿಂದ ಕಲೆಗೆ ಹೊಸ ರೂಪ ನೀಡಬಹುದು. ಇದಕ್ಕಾಗಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಹಲವಾರು ಅವಕಾಶಗಳು ಸಿಗಲಿವೆ. ಕಲಾವಿದರು ತಮ್ಮ ಪೂರ್ವಜರ ಕಲೆಯನ್ನು ಮುಂದುವರೆಸುವುದರ ಜೊತೆಗೆ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಮಾರೆಪ್ಪ ದಾಸರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಕೊಟ್ರೇಶ ಮರಬನಳ್ಳಿ ಉಪಸ್ಥಿತರಿದ್ದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ: ರಾಮ, ಲಕ್ಷ್ಮಣ ಮತ್ತು ಹನುಮನ ವೇಷದಲ್ಲಿ ಪಾಲ್ಗೊಂಡ ಹಗಲುವೇಷ ಕಲಾವಿದರು ಕಾರ್ಯಕ್ರಮದಲ್ಲಿ ಗಮನ ಸೆಳೆದರು. ಕಲಾವಿದರಾದ ಹನುಮಂತಪ್ಪ ಭಜಂತ್ರಿ ಷಹನಾಯಿ ವಾದನ, ಶಕುಂತಲಾ ಬೆನ್ನಾಳ ಶಾಸ್ತ್ರೀಯ ಸಂಗೀತ, ವೀರೇಶ ಭಜಂತ್ರಿ ಹಾಗೂ ಹನುಮಂತಪ್ಪ ಭಜಂತ್ರಿ, ರಂಜನಿ ಆರತಿ, ಸುಖಮುನಿಯಪ್ಪ ಗಡಗಿ ಸುಗಮ ಸಂಗೀತ, ಮುದುಕವ್ವ ಗಂಜಿಹಾಳ ಗೀಗೀ ಪದಗಳು, ಮಾರೆಪ್ಪ ಚನ್ನದಾಸರ ತತ್ವಪದಗಳು, ಸುಧಾ ಮುತ್ತಾಳ ಹಾಗೂ ತಂಡದವರು ಸುಗ್ಗಿ ಕುಣಿತ, ಕುಮಾರೇಶ್ ದೊಡ್ಮನಿ ತಬಲಾ ಸೋಲೊ, ಮರಿಯಪ್ಪ ಚಾಮಲಾಪುರ ಜಾನಪದ ಸಂಗೀತ, ಯಂಕಪ್ಪ ಶಿಳ್ಳಿಕ್ಯಾತರ ತೊಗಲುಗೊಂಬೆ, ಹುಲಿಗೆಮ್ಮ ಹಂದ್ರಾಳ ಸಂಪ್ರದಾಯದ ಪದಗಳು, ರಾಮಪ್ಪ ಹರಿಜನ ಬಯಲಾಟ, ಪರಸಪ್ಪ ಹಾಗೂ ತಂಡದವರು ಲಂಬಾಣಿ ನೃತ್ಯ, ಗುಂಡಪ್ಪ ವಿಭೂತಿ ಹಗಲುವೇಷ, ಬಸಪ್ಪ ಗುಡಗಲದಿನ್ನಿ ಅವರು ಕಣಿ ಹಲಗಿ ವಾದನ, ರಘು ಹಾಗೂ ತಂಡದವರು ನಗಾರಿ, ಚೇತನ ಹಾಗೂ ತಂಡದವರು ನಾಸಿಕ್ ಡೊಲ್, ಮಲ್ಲಾಸಿಂಗ್ ಹಾಗೂ ತಂಡದವರು ಗಾರುಡಿ ಗೊಂಬೆ ಮತ್ತು ರೋಹಿತ್ ಹಾಗೂ ತಂಡದವರು ಕೀಲುಕುದುರೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಸ್ತುತ ಪಡಿಸಿದರು.

ಮೆರವಣಿಗೆ: ಸಾಹಿತ್ಯ ಭವನದ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ತಾಲೂಕು ಕ್ರೀಡಾಂಗಣದಿಂದ ಸಾಹಿತ್ಯ ಭವನದವರೆಗೆ ಮೆರವಣಿಗೆ ನಡೆಯಿತು. ತಹಶೀಲ್ದಾರ ವಿಠ್ಠಲ್ ಚೌಗಲಾ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ