ಕನ್ನಡಪ್ರಭ ವಾರ್ತೆ ಬಂಗಾರಪೇಟೆ ತಾಲೂಕಿನ ಹೈನುಗಾರರ ಆರ್ಥಿಕ ಬೆನ್ನೆಲುಬಾಗಿರುವ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಪಶುಪಾಲನಾ ಇಲಾಖೆ ಹಾಗೂ ಕೋಮುಲ್ ವತಿಯಿಂದ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ರೈತರ ಆರ್ಥಿಕ ಪ್ರಗತಿಯಲ್ಲಿ ಜಾನುವಾರುಗಳ ಪಾತ್ರ ದೊಡ್ಡದಿದೆ. ಕಾಲು ಬಾಯಿ ರೋಗದಂತಹ ಸಾಂಕ್ರಾಮಿಕ ರೋಗಗಳು ಹರಡಿದರೆ ಹೈನುಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿರುವ ಸಾವಿರಾರು ರೈತ ಕುಟುಂಬಗಳಿಗೆ ಜಾನುವಾರುಗಳೇ ನಿಜವಾದ ಆಸ್ತಿ. ಅವುಗಳ ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಮಾತ್ರ ರೈತನ ಬದುಕು ಹಸನಾಗಿರುತ್ತದೆ, ರೋಗ ಬಂದ ಮೇಲೆ ಸಾವಿರಾರು ರುಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸುವುದಕ್ಕಿಂತ, ರೋಗ ಬರದಂತೆ ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸುವುದು ಅತ್ಯಂತ ಜಾಣತನದ ಕೆಲಸ. ಲಸಿಕೆ ಹಾಕಿಸುವುದರಿಂದ ಜಾನುವಾರುಗಳ ಜೀವ ರಕ್ಷಣೆಯ ಜೊತೆಗೆ ಆರ್ಥಿಕ ನಷ್ಟವನ್ನೂ ತಡೆಯಬಹುದು, ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಕೋಮುಲ್ ವತಿಯಿಂದ ಉಚಿತವಾಗಿ ನೀಡಲಾಗುತ್ತಿರುವ ಈ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಬಳಸಿಕೊಳ್ಳಬೇಕು. ಲಸಿಕೆ ಹಾಕಿಸುವಲ್ಲಿ ಯಾವುದೇ ರೀತಿಯ ಅಸಡ್ಡೆ ತೋರಬಾರದು ಎಂದು ಅವರು ಮನವಿ ಮಾಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುದರ್ಶನ್ ಅವರು ಲಸಿಕೆಯ ಅಗತ್ಯತೆ ಮತ್ತು ಹೈನುಗಾರರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾಲು ಬಾಯಿ ರೋಗವು ವೈರಾಣುಗಳಿಂದ ಹರಡುವುದರಿಂದ, ಇದಕ್ಕೆ ಮುನ್ನೆಚ್ಚರಿಕೆಯೇ ಮದ್ದು. ಲಸಿಕೆ ಹಾಕಿಸುವುದರಿಂದ ಜಾನುವಾರುಗಳಲ್ಲಿ ರೋಗದ ವಿರುದ್ಧ ಹೋರಾಡುವ ಶಕ್ತಿ ವೃದ್ಧಿಯಾಗುತ್ತದೆ, ಒಮ್ಮೆ ರೋಗ ಬಂದಲ್ಲಿ ಜಾನುವಾರುಗಳ ಹಾಲು ಉತ್ಪಾದನಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ, ಇದು ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದನ್ನು ಲಸಿಕೆಯ ಮೂಲಕ ತಡೆಯಬಹುದು ಎಂದು ತಿಳಿಸಿದರು.ಗ್ರಾಮಕ್ಕೆ ಲಸಿಕೆ ಹಾಕುವ ತಂಡ ಬಂದಾಗ ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ಬಿಡದೆ, ಲಸಿಕೆ ಹಾಕಿಸಬೇಕು. ಗರ್ಭಿಣಿ ಜಾನುವಾರುಗಳಿದ್ದಲ್ಲಿ ವೈದ್ಯರ ಸಲಹೆಯಂತೆ ಕ್ರಮ ಕೈಗೊಳ್ಳಬೇಕು. ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛವಾಗಿಡಬೇಕು. ರೋಗ ಹರಡುವಿಕೆಯನ್ನು ತಡೆಯಲು ಕೊಟ್ಟಿಗೆಗೆ ಸುಣ್ಣ ಅಥವಾ ಸೋಂಕು ನಿವಾರಕ ದ್ರಾವಣಗಳನ್ನು ಬಳಸಬೇಕು. ಸಂತೆಯಿಂದ ಅಥವಾ ಹೊರಗಿನಿಂದ ಹೊಸ ಜಾನುವಾರುಗಳನ್ನು ತಂದಾಗ, ಅವುಗಳನ್ನು ಕೆಲವು ದಿನಗಳ ಕಾಲ ಪ್ರತ್ಯೇಕವಾಗಿ ಇಟ್ಟು ಗಮನಿಸಬೇಕು, ಲಸಿಕೆ ಹಾಕಿದ ನಂತರ ಜಾನುವಾರುಗಳ ಕಿವಿಗೊಪ್ಪೆ ಹಾಕಿ ನೋಂದಣಿ ಮಾಡುವುದು ಕಡ್ಡಾಯ. ಇದು ಮುಂದಿನ ಹಂತದ ಚಿಕಿತ್ಸೆಗಳಿಗೆ ನೆರವಾಗುತ್ತದೆ ಎಂದು ತಿಳಿಸಿದರು.