ಶಿವಮೊಗ್ಗ: ದಾಸರು, ಮಹನೀಯರು ಒಂದೊಂದು ಶ್ರೇಷ್ಠ ಪರಂಪರೆಯನ್ನು ಉಳಿಸಿದ್ದಾರೆ. ಹಾಗಾಗಿ ಈ ದೇಶ ಸಾಂಸ್ಕೃತಿಕ ರಾಷ್ಟ್ರವಾಗಿದೆ ಎಂದು ವಿಧಾನಸಭಾ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅಂಬಿಗರ ಚೌಡಯ್ಯ ಅವರು ಶರಣರ ಪಂಕ್ತಿಯಲ್ಲಿ ಶ್ರೇಷ್ಠ ಸ್ಥಾನ ಗಳಿಸಿದ್ದಾರೆ. ಆ ಮೂಲಕ ದಿಗಂತಕ್ಕಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಅಂಬಿಗರ ಚೌಡಯ್ಯ ಅವರು ಜೀವನದಲ್ಲಿ ಸದಾ ನಿಜವನ್ನು ನುಡಿದರು. ಆ ರೀತಿಯಲ್ಲೆ ಬದುಕಿ ಬಾಳಿದರು. ಆ ಮೂಲಕವೇ ಅವರು ನಿಜಶರಣರಾದರು. ಅಂಬಿಗರ ಚೌಡಯ್ಯ ಅವರಿಗೆ ಯಾವುದೇ ಜಾತಿಯು ಅಡ್ಡಿ ಬರಲಿಲ್ಲ. ಅವರಲ್ಲಿದ್ದ ಜ್ಞಾನದ ಮಹಾ ಪಾರಂಗತಕ್ಕೆ ಬಸವಣ್ಣನವರ ಅನುಭವ ಮಂಟಪದಲ್ಲಿ ಜಾಗ ದೊರಕಿತ್ತು ಎಂದು ತಿಳಿಸಿದರು.ಅಂಬಿಗಡ ಚೌಡಯ್ಯ ಅವರು ಕಾಯಕದಿಂದ ಶ್ರೇಷ್ಠತೆ ಪಡೆದುಕೊಂಡಿದ್ದಾರೆ. ಕಾಯಕದ ಮೂಲಕ ಬದುಕಿನಲ್ಲಿ ಖುಷಿಯನ್ನು ಕಂಡುಕೊಂಡುವರು. ತಮ್ಮ ವಚನಗಳ ಮೂಲಕ ಜನಮಾನಸದಲ್ಲಿ ಅನೇಕ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸಿದರು. ಇಂತಹ ಮಹಾನೀಯರ ವಚನಗಳನ್ನು ಕೈಪಿಡಿ ಮಾಡಿ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಹಂಚಬೇಕು. ಆಗ ಇಂತಹ ಜಯಂತಿಯ ಆಚರಣೆಗೆ ಅರ್ಥ ದೊರಕುತ್ತದೆ ಎಂದರು.ಸಾಹಿತಿ ಪ್ರೊ.ಸತ್ಯನಾರಾಯಣ ಮಾತನಾಡಿ, ಈಗಿನ ಯುಗ, ಜ್ಞಾನ ಯುಗ. ಅದನ್ನು ವೃದ್ಧಿಸುವ ಅಗತ್ಯವಿದೆ, ಅದಕ್ಕೆ ಅಂಬಿಗರ ಚೌಡಯ್ಯನವರ ವಚನ ಸರಿಯಾದ ಮಾರ್ಗವಾಗಿದೆ. ನಮ್ಮ ಜೀವನದ ಮೌಲ್ಯ ಹೆಚ್ಚಾಗಬೇಕು. ಸಾರ್ಥಕ ಆಗಬೇಕು ಎಂದರೆ ಅದು ಅಂಬಿಗರ ವಚನದಿಂದ ಮಾತ್ರ. ಅದು ನಮ್ಮನ್ನು ಸದಾ ಎಚ್ಚರಿಸುತ್ತದೆ ಎಂದು ಹೇಳಿದರು. ಕರ್ನಾಟಕ ಚರಿತ್ರೆಯಲ್ಲಿ 12ನೇ ಶತಮಾನ ವಿಶೇಷವಾದದ್ದು. ಯಾಕೆಂದರೆ ಜಾತಿ, ಶೋಷಣ, ಅಸಮಾನತೆ ಎಲ್ಲವನ್ನೂ ತೊಡೆದು ಹಾಕಿದ ಕಾಲವದು. ಆಗಿನ ಕಾಲದಲ್ಲಿ ಅಂಬಿಗರ ಚೌಡಯ್ಯ ಕೂಡ ಇದ್ದರು. ಇಂತಹ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಸಹಕಾರಿಯಾದರು. ಮೂಢನಂಬಿಕೆಯನ್ನು ತನ್ನ ವಚನಗಳ ಮೂಲಕ ತೊಡೆದು ಹಾಕಿ ಅರಿವಿನ ಜ್ಞಾನವನ್ನು ಮೂಡಿಸಿದರು. ಅಂಬಿಗರ ಚೌಡಯ್ಯ ಕರ್ತವ್ಯ ನಿಷ್ಠರಾಗಿದ್ದರು. ವೈದ್ಯರು ಆಗಿದ್ದರು. ಕುಟುಂಬಕ್ಕೆ ಬಹಳ ಪ್ರಾಶಸ್ಥ್ಯ ನೀಡುತ್ತಿದ್ದರು. ಸಾಂಸಾರಿಕ ಜೀವನಕ್ಕೆ ವಚನಗಳ ಮೂಲಕ ಸಲಹೆ ನೀಡಿದ್ದರು ಎಂದು ತಿಳಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗಂಗಾ ಮತಸ್ಥರ ಸಮಾಜ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ತಾಲ್ಲೂಕು ಅಧ್ಯಕ್ಷ ಸತೀಶ್ ಗಾಂಧಿ ಬಸಪ್ಪ, ಜಿಲ್ಲಾ ಮೊಗವೀರರ ಸಂಘದ ಅಧ್ಯಕ್ಷ ಅಣ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.