ಕನ್ನಡಪ್ರಭ ವಾರ್ತೆ ರಾಯಚೂರು
ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕವ್ಯದ ಮೂಲಕ ಆದರ್ಶಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ಶಾಸಕ ಡಾ.ಶಿವರಾಜ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಆಶಾಪೂರು ರಸ್ತೆಯ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆದಿಕವಿ ಮಹರ್ಷಿ ವಾಲ್ಮೀಕಿಯವರು ಮಹಾಕಾವ್ಯ ರಾಮಾಯಣದ ಮೂಲಕ ಬದುಕಿನಲ್ಲಿ ಇರಬೇಕಾದ ಆದರ್ಶಗಳನ್ನು ವಿವರಿಸಿದ್ದಾರೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ, ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಗೆ ಹೋಗುವ ಪ್ರಯತ್ನ ಮಾಡಬೇಕು ಎಂದರು.
ಸಂಸದ ಕುಮಾರ ನಾಯಕ ಮಾತನಾಡಿ, ಸಾವಿರ ವರ್ಷಗಳ ಹಿಂದೆ ನಾವು ಹೇಗೆ ಬಾಳಬೇಕು ಎಂದು ಹೇಳಿ ಕೊಟ್ಟವರು ವಾಲ್ಮೀಕಿಯವರು, ಅವರು ರಚಿಸಿದ ರಾಮಾಯಣವು ಮಾನವ ಸಂಬಂಧ ಮತ್ತು ರಾಜ್ಯಾಳ್ವಿಕೆಯನ್ನು ತಿಳಿಸುವ ಕೃತಿಯಾಗಿದ್ದು, ಅಂದಿನ ಕಾಲದ ಸಂವಿಧಾನವಾಗಿತ್ತು ಎಂದು ತಿಳಿಸಿದರು.ಸಮಾರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ನಂತರ ಸಮಾಜದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ನಗರಸಭೆಯ ಅಧ್ಯಕ್ಷರಾದ ನರಸಮ್ಮ, ಜಿಲ್ಲಾಧಿಕಾರಿ ಕೆ.ನಿತೀಶ, ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀಶೈಲ ಸಿ.ಕಾಚಾಪುರ, ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಎಸ್ಟಿ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ, ಮೆರವಣಿಗೆ
ರಾಯಚೂರು ನಗರದ ಡಿಸಿ ನಿವಾಸದ ಮುಂಭಾಗದಲ್ಲಿರುವ ವಾಲ್ಮೀಕಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ, ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಜರುಗಿದ ಮಹರ್ಷಿಗಳ ಭಾವಚಿತ್ರದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ-ಕಳಸಗಳೊಂದಿಗೆ ಹೆಜ್ಜೆಹಾಕಿದರು. ಇದೇ ಶ್ರೀರಾಮಯಣದ ಪಾತ್ರಧಾರಿಗಳ ವೇಷಧರಿಸಿ ಕಲಾವಿದರು ತೋರಿದ ಪ್ರದರ್ಶನ ಗಮನ ಸೆಳೆಯಿತು.