ವಾಲ್ಮೀಕಿ ನಿಗಮದ ಹಣ ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗೆ ಬಳಕೆ ಎಂದು ಬಿಜೆಪಿ ಆರೋಪ : ಗದ್ದಲ

KannadaprabhaNewsNetwork | Updated : Jul 20 2024, 09:36 AM IST

ಸಾರಾಂಶ

ವಾಲ್ಮೀಕಿ ನಿಗಮದ ಹಗರಣದಲ್ಲಿ ಅಕ್ರಮವಾಗಿ ವರ್ಗಾವಣೆಯಾಗಿರುವ ಹಣವನ್ನು ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ ಎಂಬ ಪ್ರತಿಪಕ್ಷ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌ ಆರೋಪಿಸಿದರು.

 ವಿಧಾನ ಪರಿಷತ್ತು :  ವಾಲ್ಮೀಕಿ ನಿಗಮದ ಹಣ ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಎನ್ನುವ ಬಿಜೆಪಿ ಸದಸ್ಯರ ಆರೋಪ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಸೃಷ್ಟಿಸಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ವಾಲ್ಮೀಕಿ ನಿಗಮದ ಹಗರಣದಲ್ಲಿ ಅಕ್ರಮವಾಗಿ ವರ್ಗಾವಣೆಯಾಗಿರುವ ಹಣವನ್ನು ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ ಎಂಬ ಪ್ರತಿಪಕ್ಷ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌ ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಅವರು, ಈ ಆರೋಪದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇದ್ದರೆ ಪ್ರಸ್ತುತಿ ಪಡಿಸಬೇಕು. ಇಲ್ಲದಿದ್ದರೆ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು. ಸದಸ್ಯರಾದ ನಸೀರ್‌ ಅಹ್ಮದ್‌, ಪುಟ್ಟಣ್ಣ, ಐವನ್‌ ಡಿಸೋಜಾ, ನಾಗರಾಜ್‌ ಯಾದವ್‌ ಸೇರಿದಂತೆ ಇತರರು ಧ್ವನಿಗೂಡಿಸಿದರು.

ಇದಕ್ಕೆ ಕಿಡಿಕಾರಿದ ವಿರೋಧ ಪಕ್ಷದ ಉಪ ನಾಯಕ ಸುನೀಲ್ ವಲ್ಯಾಪುರೆ, ಭ್ರಷ್ಟಾಚಾರ ಮಾಡುವವರು ನೀವು, ನಾವು ಕ್ಷಮೆ ಕೇಳಬೇಕಾ? ಏನು ವ್ಯವಸ್ಥೆ ಇದು ಎಂದು ಕಿಡಿಕಾರಿದರು. ಸದಸ್ಯ ಸಿ.ಟಿ.ರವಿ ಮಾತನಾಡಿ, ಕ್ಷಮೆ ಯಾಕೆ, ಹಣ ಚುನಾವಣೆಗೆ ಹೋಗದಿದ್ದರೆ ಯಾವುದಕ್ಕೆ ಹೋಗಿದೆ ಹೇಳಲಿ. ಹೆಚ್ಚಿನ ಮಾಹಿತಿ ಆಡಳಿತ ಪಕ್ಷಕ್ಕೆ ಇರಬೇಕು, ಇದ್ದರೆ ಬೆಳಕು ಚೆಲ್ಲಲಿ. ನಿಮ್ಮ ಈ ವರ್ತನೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಗೌರವ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ತೆಲಂಗಾಣ ಚುನಾವಣೆಗೆ ಹಣ ಹೋಗಿದೆ ಎನ್ನುವ ಪ್ರಸ್ತಾಪವನ್ನು ಕಡತದಿಂದ ತೆಗೆಯುವಂತೆ ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು. ಅದಕ್ಕೆ ಸಿ.ಟಿ.ರವಿ ಮತ್ತು ಎನ್‌.ರವಿಕುಮಾರ್‌ ಅವರು ಎಲ್ಲಿ ಬೇಕಾದರೂ ಆಣೆ ಪ್ರಮಾಣ ಮಾಡುತ್ತೇವೆ. ತೆಲಂಗಾಣ ಚುನಾವಣೆಗೆ 20 ಕೋಟಿ ರು.ಹಣ ಖರ್ಚು ಮಾಡಿರುವುದು ನಿಜ ಎಂದರು. ಇದರಿಂದಾಗಿ ಆಡಳಿತ, ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಸಭಾಪತಿಯಿಂದ ಶಿಸ್ತಿನ ಪಾಠಸರ್ಕಾರದ ಬಗ್ಗೆ ಟೀಕಿಸಲು ಎಲ್ಲ‌ ಸದಸ್ಯರಿಗೂ ಹಕ್ಕಿದೆ, ಟೀಕೆ ಮಾಡಿದ ಸಂದರ್ಭದಲ್ಲಿ ಸರ್ಕಾರ ಟೀಕೆಗಳಿಗೆ ಸಮರ್ಥವಾಗಿ ಉತ್ತರ ಕೊಡಬೇಕು. ಅದಕ್ಕಾಗಿಯೇ ಸರ್ಕಾರದ ಉತ್ತರಕ್ಕೆ ಕೊನೆಗೆ ಅವಕಾಶ ಕೊಡುವುದು ಎಂದರು. ಆದರೆ ಸಭಾನಾಯಕ ಬೋಸರಾಜ್ ಇದನ್ನು ಒಪ್ಪದೆ, ಸರ್ಕಾರ ಉತ್ತರ ಕೊಡಲು ಅವಕಾಶ ಕೊಡಬಾರದು ಎಂದು ಪ್ಲಾನ್ ಮಾಡಿ ಹೀಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದೆಲ್ಲವನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಮಾತನಾಡಿ, ಯುಬಿಐ ಯಾರ ಅಂಡರ್ ಬರಲಿದೆ, ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡಲಿ ಎಂದಿದ್ದೇವಾ? ಕೇಂದ್ರದ ತುತ್ತೂರಿಯಂತೆ ಇಲ್ಲಿ ಸಿಎಂ, ರಾಜೀನಾಮೆ, ತೆಲಂಗಾಣ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಕಿಡಿಕಾರಿದ ಬಿಜೆಪಿ ಸದಸ್ಯರು ಪುಟ್ಟಣ್ಣ ಸರ್ಕಾರದ ಪರ ಉತ್ತರ ನೀಡುವ ಸ್ಥಾನದಲ್ಲಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಏರಿದ ದನಿಯಲ್ಲಿ ತಿರುಗೇಟು ನೀಡಿದ ಪುಟ್ಟಣ್ಣ ವರ್ತನೆಗೆ ಕೆರಳಿದ ಸಿಟಿ ರವಿ, ಗುಂಡಾಗಿರಿ ಮಾಡುತ್ತೀರಾ? ಎಂದು ಟೀಕಿಸಿದರು. ಸದನದಲ್ಲಿ ಗದ್ದಲ ಹೆಚ್ಚಾಗಿದ್ದರಿಂದ ಸದನ ಸಹಜ ಸ್ಥಿತಿಗೆ ಬಾರದ ಹಿನ್ನಲೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಯಿತು.

Share this article