ವೀರಶೈವ-ಲಿಂಗಾಯತ ಎರಡೂ ಒಂದೇ: ರಂಭಾಪುರಿ ಸ್ವಾಮೀಜಿ

KannadaprabhaNewsNetwork |  
Published : May 09, 2025, 12:30 AM IST
ಪೊಟೋ- ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಪಂಚಪೀಠಾಧೀಶ್ವರರ ಸಮಾವೇಷದಲ್ಲಿ ಜಾತಿ ಗಣತಿ ಕುರಿತ ಚಿಂತನ ಸಭೆಯಲ್ಲಿ ರಂಭಾಪುರಿ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ. ಇವೆರಡರಲ್ಲಿ ದ್ವಂದ್ವ ಹುಟ್ಟು ಹಾಕುವ ಕೆಲಸ ಯಾರೂ ಮಾಡಬಾರದು. ವೀರಶೈವ ಸೈದ್ಧಾಂತಿಕ ಪದವಾಗಿದ್ದು, ಲಿಂಗಾಯತ ರೂಢಿಯಿಂದ ಬಂದಿರುವುದಾಗಿದೆ. ಆದ್ದರಿಂದ ಜನಗಣತಿ, ಜಾತಿ ಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಎಂದು ಎಲ್ಲರೂ ಬರೆಸಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಲಕ್ಷ್ಮೇಶ್ವರ:ವೀರಶೈವ ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ. ಇವೆರಡರಲ್ಲಿ ದ್ವಂದ್ವ ಹುಟ್ಟು ಹಾಕುವ ಕೆಲಸ ಯಾರೂ ಮಾಡಬಾರದು. ವೀರಶೈವ ಸೈದ್ಧಾಂತಿಕ ಪದವಾಗಿದ್ದು, ಲಿಂಗಾಯತ ರೂಢಿಯಿಂದ ಬಂದಿರುವುದಾಗಿದೆ. ಆದ್ದರಿಂದ ಜನಗಣತಿ, ಜಾತಿ ಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಎಂದು ಎಲ್ಲರೂ ಬರೆಸಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಬುಧವಾರ ಸಂಜೆ ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಜಗದ್ಗುರು ಪಂಚಾಚಾರ್ಯರ ಸಮಾವೇಶ ಹಾಗೂ ಜನಗಣತಿ, ಜಾತಿ ಗಣತಿ ಚಿಂತನ ಮಂಥನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ವೀರಶೈವ ಧರ್ಮಕ್ಕೊಂದು ಇತಿಹಾಸ ಪರಂಪರೆ ಇದೆ. ರಾಷ್ಟ್ರಕ್ಕೆ ಒಂದು ಸಂವಿಧಾನ ಇರುವಂತೆ ಆಯಾ ಧರ್ಮಕ್ಕೂ ಕೂಡ ಒಂದು ಸಂವಿಧಾನ ಇದೆ. ಅದನ್ನು ಗೌರವಿಸಿ ಉಳಿಸಿ ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯ. ರೇಣುಕಾದಿ ಪಂಚಾಚಾರ್ಯರು ವೀರಶೈವ ಧರ್ಮ ವೃಕ್ಷದ ತಾಯಿ ಬೇರಾದರೆ ೧೨ನೇ ಶತಮಾನದ ಬಸವಾದಿ ಶರಣರು ಆ ವೃಕ್ಷದ ಹೂವು ಹಣ್ಣುಗಳಿದ್ದಂತೆ. ತಾಯಿ ಬೇರಿಗೆ ನೀರೆರೆದರೆ ರೆಂಬೆ ಕೊಂಬೆಗಳಲ್ಲಿ ಹೂ ಹಣ್ಣು ಕಾಣಬಹುದು. ಆದರೆ ನಮಗೆ ನೆರಳು ಕೊಡುವ ಮರವನ್ನೇ ಕತ್ತರಿಸುವ, ನಿಂತ ನೆಲವನ್ನು ಬಗೆಯುವ ಕೆಲಸ ಕೆಲವರಿಂದ ನಡೆಯುತ್ತಿದೆ ಎಂದು ವಿಷಾಧಿಸಿದರು.ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು, ಪರಸ್ಪರ ಸಮಾಲೋಚಿಸಿ ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಪಂಗಡದಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಸಬೇಕು. ಒಳಜಾತಿ ಯಾವುದು ಎಂದು ಬರೆಯುವಾಗ ಅವರವರ ಉಪಜಾತಿ ಬಳಸಬಹುದು ಎಂದರು.

ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯರು, ಡಾ. ಚನ್ನಸಿದ್ದರಾಮ ಪಂಡಿತರಾಧ್ಯರು, ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು.ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು, ವೀರಶೈವ ಲಿಂಗಾಯತ ಎರಡು ಒಂದೇ ಎಂದು ನಿರ್ಣಯಿಸಿರುವುದು ಸಮಾಜಕ್ಕೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ಮುಂಬರುವ ಜೂನ್ ತಿಂಗಳಲ್ಲಿ ದಾವಣಗೆರೆಯಲ್ಲಿ ಮತ್ತೊಮ್ಮೆ ಬೃಹತ್ ಸಮಾರಂಭ ಆಯೋಜಿಲಿದ್ದೇವೆ. ಒಟ್ಟಾರೆ ವೀರಶೈವ ಲಿಂಗಾಯಿತ ಸಮಾಜ ಜಾತಿ ಜಾತಿಗಳ ವಿಂಗಡಣೆಯಲ್ಲಿ ಹರಿದು ಹಂಚಿ ಹೋಗದೆ ಒಗ್ಗಟ್ಟಾಗಿ ಹೋಗಬೇಕೆಂದು ಮನವಿ ಮಾಡಿಕೊಂಡರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ, ಒಳಪಂಗಡಗಳ ಜನರು ಆಂತರಿಕ ಭಿನ್ನಾಭಿಪ್ರಾಯ ಮರೆತು ನಮ್ಮ ಮೂಲ ಧರ್ಮ ಬೆಳೆಸುವ ಅವಶ್ಯಕತೆ ಇದೆ. ಹಾವನೂರು ಆಯೋಗ ವೀರಶೈವ ಲಿಂಗಾಯತ ಸಮಾಜ ಒಡೆಯಲಿಕ್ಕೆ ಮೂಲ ಕಾರಣ. ತದನಂತರದಲ್ಲಿ ಚಿನ್ನಪ್ಪ ರೆಡ್ಡಿ ಆಯೋಗ ಮತ್ತು ಕಾಂತರಾಜ್ ಆಯೋಗದಿಂದಲೂ ಕೂಡ ವೀರಶೈವ ಲಿಂಗಾಯತ ಸಮುದಾಯದ ಕಡಗಣನೆ ಕಾಣುತ್ತಿದ್ದೇವೆ. ಈಗಿನ ಸರ್ಕಾರ ಕೂಡ ಮತ್ತಷ್ಟು ಈ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿರುವುದನ್ನು ನಾವೆಲ್ಲರೂ ಖಂಡಿಸುತ್ತೇವೆ. ಮಹಾ ಸಭೆಯಿಂದಲೇ ಜಾತಿ ಜನಗಣತಿ ಮಾಡಿಸುತ್ತೇವೆ ಎಂದು ಹೇಳಿದರು.

ಹಿರಿಯ ನ್ಯಾಯವಾದಿ ಗಂಗಾಧರ ಗುರುಮಠ ಮಾತನಾಡಿದರು.ಶಾಸಕ ಚಂದ್ರು ಲಮಾಣಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ಗಂಗಣ್ಣ ಮಹಾಂತಶೆಟ್ಟರ ಹಾಗೂ ಅಣಬೇರು ರಾಜಣ್ಣ, ಉಳವಯ್ಯ, ಅಕ್ಕಿ ರಾಜು, ಹರೀಶ್, ವಾಗೀಶ್ ಸ್ವಾಮಿ, ಚಂಬಣ್ಣ ಬಾಳಿಕಾಯಿ, ಆನಂದ ಮೆಕ್ಕಿ, ದುಗ್ಗತ್ತಿ ಮಠದ ಪ್ರಶಾಂತ್, ವೀರೇಶ ಕೂಗು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುಮಾರು ೫೦ಕ್ಕೂ ಮಿಕ್ಕಿ ನಾಡಿನ ನಾನಾ ಭಾಗಗಳಿಂದ ಪಟ್ಟಾಧ್ಯಕ್ಷರು ಪಾಲ್ಗೊಂಡಿದ್ದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಂಕಲ್ಪ ನುಡಿ ನುಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ