ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ

Published : Aug 07, 2025, 11:03 AM IST
rain alert on 4 august

ಸಾರಾಂಶ

ಕಳೆದ 24 ಗಂಟೆಗಳಲ್ಲಿ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ, ಗದಗ, ಕೊಪ್ಪಳ, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಹರಿದಿದ್ದು, ಬೆಳೆಗಳು ಹಾನಿಗೀಡಾಗಿದೆ.

 ಬೆಂಗಳೂರು :  ಕಳೆದ 24 ಗಂಟೆಗಳಲ್ಲಿ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ, ಗದಗ, ಕೊಪ್ಪಳ, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗಿದೆ. ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಹಳ್ಳ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಬೈಕ್‌ ಸವಾರ ಅದೃಷ್ಟವಶಾತ್‌ ಬದುಕುಳಿದಿದ್ದಾನೆ. ಶಾಲೆಗಳಿಗೆ ನೀರು ನುಗ್ಗಿದೆ. ದೇವಸ್ಥಾನವೊಂದು ನೀರಿನಲ್ಲಿ ಮುಳುಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಹರಿದಿದ್ದು, ಬೆಳೆಗಳು ಹಾನಿಗೀಡಾಗಿದೆ.

ವಿಜಯಪುರ ಜಿಲ್ಲೆ, ಗದಗ ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆಯ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ಯುವಕನ ಬೈಕ್ ಕೊಚ್ಚಿಕೊಂಡು ಹೋಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ಬೈಕ್‌ ಮೇಲೆ ಯುವಕನೊಬ್ಬ ಹಳ್ಳ ದಾಟುತ್ತಿದ್ದಾಗ ಹಳ್ಳದಲ್ಲಿ ಬೈಕ್ ಕೊಚ್ಚಿಕೊಂಡು ಹೋಗಿದೆ. ಅದೃಷ್ಟವಶಾತ್‌ ಬೈಕ್ ಸವಾರ ಪಾರಾಗಿದ್ದಾನೆ. ಇದೇ ಗ್ರಾಮದ ಸಂಗಮನಾಥ ದೇವಸ್ಥಾನವೂ ಸಂಪೂರ್ಣ ಜಲಾವೃತವಾಗಿದೆ.

ವಿಜಯಪುರ ನಗರದ ಬಡಿಕಮಾನ್ ಬಳಿ ಬೈಕ್ ಮೇಲೆ ಇಬ್ಬರು ಸವಾರರು ಹೊರಟಿದ್ದಾಗ ರಸ್ತೆಯಲ್ಲೇ ಬೈಕ್ ಮುಳುಗಿದೆ. ಜೊತೆಗೆ ಇದೇ ಸ್ಥಳದಲ್ಲಿದ್ದ ಟಂಟಂನಲ್ಲೂ ನೀರು ನುಗ್ಗಿ ಚಾಲಕ ತೀವ್ರ ಸಂಕಷ್ಟ ಅನುಭವಿಸುವಂತಾಯಿತು. ಇದರಿಂದಾಗಿ ಸುಮಾರು ಎರಡ್ಮೂರು ಗಂಟೆ ಈ ಮಾರ್ಗದಲ್ಲಿ ವಾಹನಗಳೇ ಸಂಚರಿಸದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಕೇಂದ್ರ ಬಸ್‌ ನಿಲ್ದಾಣದ ಬಳಿಯ ಕನ್ನಡ ಸಾಹಿತ್ಯ ಪರಿಷತ್ ಭವನ ಸಂಪೂರ್ಣ ಜಲಾವೃತವಾಗಿತ್ತು.

ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಚಟ್ನಿಹಾಳ ಗ್ರಾಮದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಮಲ್ಲಪ್ಪ ಅವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಇವರು ಬೆಳಗ್ಗೆ ಬಹಿರ್ದೆಸೆಗೆಂದು ತೆರಳಿದ್ದಾಗ ಏಕಾಏಕಿ ಹಳ್ಳದ ರಭಸಕ್ಕೆ ಸಿಲುಕಿದ್ದರು.

ಇನ್ನು ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರಭಸವಾಗಿ ಹರಿಯುವ ಹಳ್ಳದಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ. ತಾರೀಹಾಳ ಗ್ರಾಮದ ಸುರೇಶ್ ನಿಜಗುಣಿ (50) ನಾಪತ್ತೆಯಾಗಿದ್ದಾರೆ.

ಗದಗ, ಕೊಪ್ಪಳ, ಧಾರವಾಡ, ಬಳ್ಳಾರಿ ಜಿಲ್ಲೆಯ ಕೆಲ ಭಾಗದಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಉತ್ತಮ ಮಳೆ ಸುರಿದಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.

ಕೊಪ್ಪಳ ಜಿಲ್ಲೆಯ ಯಲುಬುರ್ಗಾ, ಕುಷ್ಟಗಿ, ತಾವರಗೇರಾ ಹಾಗೂ ಹನುಮಸಾಗರದಲ್ಲಿ ಮಂಗಳವಾರ ಮಧ್ಯರಾತ್ರಿ ಉತ್ತಮ ಮಳೆ ಸುರಿದಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳಿಗೆ ನೀರು ನುಗ್ಗಿದ್ದು ಜನ ತೊಂದರೆಗೀಡಾದರು. ಶಾಲಾ ಆವರಣ ಜಲಾವೃತವಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ.

ತಾವರಗೇರಾ ಪಟ್ಟಣದ ತಗ್ಗು ಪ್ರದೇಶದ ಮನೆ, ಬಟ್ಟೆ ಅಂಗಡಿಗಳಿಗೆ ನೀರು ನುಗ್ಗಿದ್ದು ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಮುಳುಗಿದ್ದವು. ಬಳ್ಳಾರಿ ಜಿಲ್ಲೆಯ ಸಂಡೂರು, ವಿಜಯನಗರ ಜಿಲ್ಲೆ ಕೂಡ್ಲಿಗಿ ಹೂವಿನ ಹಡಗಲಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಸೇರಿದಂತೆ ಹಲವೆಡೆ ಮುಂಜಾನೆ ಕೆಲ ಹೊತ್ತು ಮಳೆ ಸುರಿಯಿತು.

PREV
Read more Articles on

Recommended Stories

ಐತಿಹಾಸಿಕ ಬಸವೇಶ್ವರ ಜಾತ್ರೆಗೆ ಭರದ ಸಿದ್ಧತೆ
ಜಾನಪದ ಕಲೆಗಳು ನಮ್ಮ ಪರಂಪರೆಯ ಪ್ರತೀಕ