ಕನ್ನಡಪ್ರಭ ವಾರ್ತೆ ವಿಜಯಪುರ

ಹಂಚನಾಳ ಹತ್ತಿರದ ಕೆರೆಗೆ ನಗರದ ಒಳ ಚರಂಡಿಯಿಂದ ಜಮೆಯಾಗುತ್ತಿರುವ ಕಲುಷಿತ ನೀರಿನಿಂದಾಗಿ ಹಂಚನಾಳ ಸುತ್ತ-ಮುತ್ತಲಿನ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆ ಭಾಗದ ಸಾರ್ವಜನಿಕರಿಗೆ ಆದಷ್ಟು ಶೀಘ್ರ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ನಗರದ ನಗರಾಭಿವೃದ್ಧಿ ಪ್ರಾಧಿಕಾರ ಸಭಾಂಗಣದಲ್ಲಿ 2026-27ನೇ ಸಾಲಿನ ಅಂದಾಜು ಆಯವ್ಯಯ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಹಂಚನಾಳ ಸುತ್ತಮುತ್ತಲಿನ ಬೋರವೆಲ್‌ಗಳಲ್ಲಿ ಕಲುಷಿತ ಹಾಗೂ ವಾಸನೆಯಿಂದ ಕೂಡಿದ ನೀರು ಬರುತ್ತಿದ್ದು, ಈಗಾಗಲೇ ಈ ಕುರಿತು ಹಲವಾರು ಬಾರಿ ಗಮನಕ್ಕೆ ತರಲಾಗಿದೆ. ಆದರೂ ಈ ವರೆಗೆ ಕ್ರಮ ವಹಿಸಿಲ್ಲ ಹಾಗೂ ಹಂಚಿನಾಳ ಕೆರೆಯ ಪುನರುಜ್ಜೀವನ ಹಾಗೂ ಸೌಂದರೀಕರಣದ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ನಗರದ ಒಳಚರಂಡಿ ಸಂಸ್ಕರಣಾ ಘಟಕದಿಂದ ಕೊಳಚೆ ನೀರು ಕೆರೆ ಸೇರದಂತೆ ಹಾಲಿ ಇರುವ ಎಸ್‌ಟಿಪಿಯನ್ನು ಉನ್ನತೀಕರಿಸಿ ಸಂಸ್ಕರಿಸಿದ ಶುದ್ಧ ನೀರನ್ನು ಮಾತ್ರ ಹಂಚಿನಾಳ ಕೆರೆಗೆ ಬೀಡಬೇಕೆಂದು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಪ್ರಾಧಿಕಾರದ ಸನ್ 2026-27ನೇ ಸಾಲಿನ ಆಯವ್ಯಯ ಸನ್ 2026-27ನೇ ಸಾಲಿನ ಆಯ-ವ್ಯಯದಲ್ಲಿ ವಿವಿಧ ಬಾಬ್ತುಗಳಿಂದ ಸನ್ 2026ನೇ ಸಾಲಿಗೆ 5757.98 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಹಿಂದಿನ ಸಾಲಿನ ಉಳಿಕೆಯ ವೆಚ್ಚ ಸೇರಿ ಸುಮಾರು ₹8,714.50 ಲಕ್ಷಗಳನ್ನು ವೆಚ್ಚವಾಗಿ ನಿರೀಕ್ಷಿಸಲಾಗಿದೆ. ನಗರದಲ್ಲಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಬೇಗನೆ ಮುಕ್ತಾಯಗೊಳಿಸಲು ಸೂಚಿಸಿದ ಅವರು, ಈಗಾಗಲೇ ಹಲವಾರು ಬಡಾವಣೆಗಳು ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಪಡಿಸಲಾಗಿದ್ದು ಪ್ರಾಧಿಕಾರವು ಬಡಾವಣೆಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿರುವುದಿಲ್ಲ. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದಾಗ ಈಗಾಗಲೇ ಆಯಾ ಬಡಾವಣೆಗಳ ಹೆಸರನ್ನು ಅಲ್ಲಿಯ ಸಾರ್ವಜನಿಕರು ಹೆಸರಿಸಿದ್ದು ಈಗಿರುವ ಬಡಾವಣೆಗಳ ಹೆಸರನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದ ಕೋಟೆ ಗೋಡೆಯ ಸುತ್ತಲೂ ಇರುವ ಕಂದಕದ ರಾಜ ಕಾಲುವೆಗಳ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು ಕೆಲವು ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಿ ಹೂಳೆತ್ತುವ ಕಾಮಗಾರಿ ಬೇಸಿಗೆಯ ಸಮಯದಲ್ಲಿಯೇ ಮುಕ್ತಾಯಗೊಳಿಸಬೇಕು. ಕೋಟೆಗೋಡೆ ಹೊಂದಿಕೊಂಡ ಕಂದಕಗಳನ್ನು ಸ್ವಚ್ಚಗೊಳಿಸಿದಲ್ಲಿ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಬಹಳ ಅನುಕೂಲವಾಗಲಿದೆ ಎಂದರು.ಜಿಲ್ಲಾಧಿಕಾರಿ ಡಾ.ಆನಂದ.ಕೆ, ಮಾತನಾಡಿ, ಈ ಎಲ್ಲ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ತ್ವರಿತವಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಮಾತನಾಡಿದರು.ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಮಹಾದೇವ ರಾಠೋಡ, ಸಂತೋಷ ಪವಾರ, ಸಲೀಮ ಪೀರಜಾದೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿರಿದ್ದರು.