ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭವಿಷ್ಯದ ಸಿಎಂ : ಸಮಾವೇಶದಲ್ಲಿ ಬಹಿರಂಗ ಸಂದೇಶ

KannadaprabhaNewsNetwork | Updated : Mar 09 2025, 10:40 AM IST

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಂಘಟನಾ ಚತುರ, ಭವಿಷ್ಯದ ನಾಯಕ, ಮುಂದಿನ ಮುಖ್ಯಮಂತ್ರಿ ಎಂದು ವೀರಶೈವ-ಲಿಂಗಾಯತ ಮಹಾಸಂಗಮ ಸಮಾವೇಶದಲ್ಲಿ ಮಠಾಧೀಶರ ಸಮ್ಮುಖದಲ್ಲಿ ಸಮುದಾಯದ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಬಿಜೆಪಿ ವರಿಷ್ಠರಿಗೆ ಬಹಿರಂಗ ಸಂದೇಶ ರವಾನಿಸಿದರು.

 ಚಿಕ್ಕಮಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಂಘಟನಾ ಚತುರ, ಭವಿಷ್ಯದ ನಾಯಕ, ಮುಂದಿನ ಮುಖ್ಯಮಂತ್ರಿ ಎಂದು ವೀರಶೈವ-ಲಿಂಗಾಯತ ಮಹಾಸಂಗಮ ಸಮಾವೇಶದಲ್ಲಿ ಮಠಾಧೀಶರ ಸಮ್ಮುಖದಲ್ಲಿ ಸಮುದಾಯದ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಬಿಜೆಪಿ ವರಿಷ್ಠರಿಗೆ ಬಹಿರಂಗ ಸಂದೇಶ ರವಾನಿಸಿದರು.

ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ವೀರಶೈವ-ಲಿಂಗಾಯತ ಮಹಾಸಂಗಮದಲ್ಲಿ ಮಾತನಾಡಿದ ಬಹುತೇಕ ಮುಖಂಡರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿರುವುದಾಗಿ ತಿಳಿಸಿದರು.

ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ. ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಬೇಕಾದರೆ ವಿಜಯೇಂದ್ರರನ್ನು ಆ ಸ್ಥಾನದಲ್ಲಿ ಮುಂದುವರಿಸಬೇಕು. ಈ ಮಾತನ್ನು ಇಲ್ಲಿ ಮಾತ್ರವಲ್ಲ, ವಿಜಾಪುರದಲ್ಲೂ ಹೇಳಲು ಸಿದ್ಧರಿದ್ದೇವೆ. ನಾವು ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿದ್ದೇವೆ ಎಂದು ಸಮಾವೇಶದ ಆರಂಭದಿಂದ ಕೊನೆಯವರೆಗೆ ಹೇಳಿದರು.

ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಸಮಾಜ ಒಡೆಯುವ ದುಷ್ಟ ಶಕ್ತಿಗಳಿಗೆ ಉತ್ತರ ಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಒಳ ಪಂಗಡಗಳು ಒಂದಾಗಬೇಕು. ಯಡಿಯೂರಪ್ಪ ನಮ್ಮ ಸಮಾಜದ ಆಸ್ತಿ ಎಂದರು.

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ನಮ್ಮ ಸಮಾಜಕ್ಕೆ ಅನ್ಯಾಯವಾದಾಗ ನಮ್ಮ ಹಕ್ಕು ಪ್ರತಿಪಾದನೆ ಮಾಡಲು ಆಗುತ್ತಿಲ್ಲ. 2018ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದೆ. ನಮ್ಮ ಸಮುದಾಯಕ್ಕೆ ಒಳ್ಳೆಯದಾಗಬೇಕು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ನ್ನು ಬಿಟ್ಟು ಬಿಜೆಪಿಗೆ ಬಂದೆ ಎಂದರು. ವಿಜಯೇಂದ್ರರನ್ನು ಮುಂದುವರಿಸಿದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯ ಇದೆ. ಮುಂದಿನ ಚುನಾವಣೆ ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಸಬೇಕು. ಆಗ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಚನ್ನಗಿರಿ ತಾಲೂಕಿನ ಮಾಡಳ್‌ ಮಲ್ಲಿಕಾರ್ಜುನ ಮಾತನಾಡಿ, ನಮ್ಮ ಸಮಾಜದ ಮುಖಂಡರಿಗೆ ಅನ್ಯಾಯವಾದಾಗ, ಕೀಳಾಗಿ ನಡೆಸಿಕೊಂಡಾಗ ನಾವುಗಳು ಒಂದಾಗಬೇಕು. ಸಮಾಜ ಒಗ್ಗೂಡಿಸಲು ಹಾಗೂ ವಿಜಯೇಂದ್ರ ಅವರಿಗೆ ಬೆಂಬಲ ಸೂಚಿಸಲು ನಾವುಗಳು ಒಂದಾಗಬೇಕು ಎಂದು ಹೇಳಿದರು.

ಮಾಜಿ ಶಾಸಕ ಎಸ್‌.ಎಂ.ನಾಗರಾಜ್, ಮಾಜಿ ಶಾಸಕ ಡಿ.ಎಸ್‌. ಸುರೇಶ್‌, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಶಂಕರ್‌, ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಮಠದ ರೇಣುಕಾ ಮಹಾಂತ ಸ್ವಾಮೀಜಿ, ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಕೆ.ಬಿದರೆ ಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಮಠದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಅಣ್ಣೆಮಠದ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಬೀರೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

Share this article