ಕಾರಟಗಿ: ಗ್ರಾಪಂ ಅಧ್ಯಕ್ಷೆಯೊಬ್ಬರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಗ್ರಾಪಂ ಕಚೇರಿಯಲ್ಲಿ ಆಚರಿಸಿಕೊಂಡ ಹಿನ್ನೆಲೆ ತಾಪಂ ಇಓ ಕಾರಣ ಕೇಳಿ ನೋಟಿಸ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಂಚಾಯತಿ ಕಚೇರಿಯಲ್ಲಿ ವಾರ್ಷಿಕೋತ್ಸವ ಆಚರಿಸಿಕೊಂಡ ಫೋಟೋ ಸದಸ್ಯರ, ಸಿಬ್ಬಂದಿ, ಪಿಡಿಓಗಳ ವ್ಯಾಟ್ಸಾಪ್ ಗುಂಪುಗಳಲ್ಲಿ ವೈರಲ್ ಆದ ಕಾರಣಕ್ಕೆ ಇಷ್ಟೆಲ್ಲ ರಾದ್ಧಾಂತವಾಗಿದೆ.
ನಿಯಮಗಳ ಪ್ರಕಾರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಗ್ರಾಪಂ ಕಚೇರಿಯು ಸಾರ್ವಜನಿಕ ಸಂಸ್ಥೆ. ಈ ಕಟ್ಟಡ ಇಲ್ಲಿನ ಪೀಠೋಪಕರಣ ಹಾಗೂ ಸೌಲಭ್ಯ ಕೇವಲ ಸಾರ್ವಜನಿಕ ಆಡಳಿತ, ಪಂಚಾಯತಿ ಸಭೆ ಮತ್ತು ಅಭಿವೃದ್ಧಿ ಕೆಲಸ ಉದ್ದೇಶಕ್ಕೆ ಮಾತ್ರ ಬಳಕೆಯಾಗಬೇಕು. ಹೀಗಾಗಿ ಯಾರೆ ಎಷ್ಟೇ ಪ್ರಭಾವಿಯಾಗಿದ್ದರೂ ಸ್ವಂತ ಅಥವಾ ವೈಯಕ್ತಿಕ ಬಳಕೆಗೆ ಅವಕಾಶವಿಲ್ಲ. ಹೀಗಿದ್ದ ಮೇಲೆ ಪಂಚಾಯತಿ ಅಧ್ಯಕ್ಷೆ ತಮ್ಮ ವೈಯಕ್ತಿಕ ವಿವಾಹ ವಾರ್ಷಿಕೋತ್ಸವ ಕೆಲ ಸದಸ್ಯರು ಮತ್ತು ಗ್ರಾಪಂ ಸಿಬ್ಬಂದಿ ಜತೆ ಸೇರಿ ಆಚರಣೆ ಮಾಡಿದರೆ ಅಧಿಕಾರ ದುರ್ಬಳಕೆಯಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.ಈ ನಡುವೆ ಆಚರಣೆಯ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮೇಲಾಧಿಕಾರಿಗಳ ಗಮನಕ್ಕೆ ಹೋಗಿ ಪ್ರಕರಣ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಾಪಂ ಇಒ ಲಕ್ಷ್ಮೀ ದೇವಿ ಗ್ರಾಪಂ ಕಚೇರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಘಟನೆಯ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಗ್ರಾಪಂ ಪಿಡಿಒಗೆ ಸೂಚನೆ ನೀಡಿದ್ದಾರೆ. ನೋಟಿಸ್ ನೀಡಿದ ಪ್ರಕರಣ ಸಿದ್ದಾಪುರ ಗ್ರಾಮವಲ್ಲದೆ ಗ್ರಾಪಂ ಮಟ್ಟದಲ್ಲಿ ಪ್ರಕರಣ ಸಂಚಲನ ಮೂಡಿಸಿದೆ.