ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಲೋಕೋಪಯೋಗಿ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork | Published : Oct 23, 2024 12:55 AM

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ, ಮರಳಗಾಲ, ದೊಡ್ಡಪಾಳ್ಯ, ಮಂಡ್ಯಕೊಪ್ಪಲು ವೃತ್ತ ಸೇರಿದಂತೆ ಗೆಂಡೆಹೊಸಳ್ಳಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಗುಂಡಿ ಬಿದ್ದು, ಜೊತೆಗೆ ರಸ್ತೆಯ ಎರಡು ಬದಿಯಲ್ಲಿ ಗಿಡಗೆಂಟಿಗಳು ಬೆಳೆದು ತಿರುವುನಲ್ಲಿ ಬರುವ ವಾಹನಗಳು ಎದುರು ಬರುವ ವಾಹನ ಸವಾರರಿಗೆ ಕಾಣದೆ ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬಾಬುರಾಯನಕೊಪ್ಪಲು ಬಳಿಯ ಲೋಕಪಾವನಿ ವೃತ್ತದಿಂದ ಗೆಂಡೆಹೊಸಹಳ್ಳಿ ಗ್ರಾಮದವರಿಗೆ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಸ್ಥರು ಪಟ್ಟಣದ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿದ ಗ್ರಾಮಸ್ಥರು ತಾಲೂಕಿನ ಲೋಕಪಾವನಿ ನದಿ ಮೂಲಕ ಹಾದು ಹೋಗುವ ಮಂಡ್ಯ - ಬನ್ನೂರು ಮಾರ್ಗದ ರಸ್ತೆ ತುಂಬಾ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಶ್ರೀನಿವಾಸ ಅಗ್ರಹಾರ, ಮರಳಗಾಲ, ದೊಡ್ಡಪಾಳ್ಯ, ಮಂಡ್ಯಕೊಪ್ಪಲು ವೃತ್ತ ಸೇರಿದಂತೆ ಗೆಂಡೆಹೊಸಳ್ಳಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಗುಂಡಿ ಬಿದ್ದು, ಜೊತೆಗೆ ರಸ್ತೆಯ ಎರಡು ಬದಿಯಲ್ಲಿ ಗಿಡಗೆಂಟಿಗಳು ಬೆಳೆದು ತಿರುವುನಲ್ಲಿ ಬರುವ ವಾಹನಗಳು ಎದುರು ಬರುವ ವಾಹನ ಸವಾರರಿಗೆ ಕಾಣದೆ ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಸ್ತೆ ಬದಿಯಲ್ಲಿ ಹಾಳೆತ್ತರ ಬೆಳೆದಿರುವ ಗಿಡಗಂಟಿಗಳಿಂದ ಪಾದಚಾರಿಗಳು, ರಸ್ತೆಯಲ್ಲೆ ನಡೆದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ಭಯ ಒಂದೆಡೆಯಾದರೆ, ವಿಷಜಂತುಗಳಾದ ಹಾವು, ಚೇಳುಗಳು ಭೀತಿ ಎದುರಾಗಿದೆ ಎಂದು ಕಿಡಿಕಾರಿದರು.

ಕೂಡಲೇ ಈ ಮಾರ್ಗದ ರಸ್ತೆಯನ್ನು ಅಗಲೀಕರಣ ಜೊತೆಗೆ ಗಿಡಗಂಟೆಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿ ಪಿಡಬ್ಲ್ಯೂಡಿ ಇಲಾಖೆ ಎಇ ಯತೀಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಒಂದು ವೇಳೆ ನಮ್ಮ ಮನವಿಗೆ ಶೀಘ್ರ ಸ್ಪಂದಿಸದಿದ್ದಲ್ಲಿ ಈ ಭಾಗದ ಎಲ್ಲಾ ಗ್ರಾಮಗಳ ಗ್ರಾಮಸ್ಥರು ರಸ್ತೆ ತಡೆ ನಡೆಸುವುದಾಗಿ ಎಚ್ಚರಿಸಿದರು.

ಪಿಡಬ್ಲ್ಯೂಡಿ ಇಲಾಖೆ ಎಇ ಯತೀಶ್‌ಕುಮಾರ್ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ರಸ್ತೆ ಎರಡು ಬದಿ ಪಾದಚಾರಿ ಮಾರ್ಗದ ಗಿಡಗಂಟೆ ಹಾಗೂ ರಸ್ತೆಗೆ ಬಾಗಿಕೊಂಡಿರುವ ಮರಗಳ ರಂಬೆ ಕತ್ತರಿಸಲು ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಸದ್ಯ ಮಳೆ ನಿಂತ ಒಂದೆರಡು ದಿನಗಳಲ್ಲಿ ಗುತ್ತಿಗೆದಾರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಭರವಸೆ ನೀಡಿದರು.

ಈ ವೇಳೆ ಉದ್ಯೋಗದಾತ ಸಂಸ್ಥೆ ಡಿ.ಬಿ ರುಕ್ಮಾಂಗ, ನಾರಾಯಣಗೌಡ, ದೊಡ್ಡಪಾಳ್ಯ ಮಲ್ಲೇಶ್, ಮಂಜೇಶ್. ಪವನ್. ಚಂದ್ರು. ಛಾಯಾಸುತ. ವಕೀಲರಾದ ಅಭಿಷೇಕ್, ದರಗುಪ್ಪೆ ಲೋಕೇಶ್, ಗೌಡಳ್ಳಿ ದೇವರಾಜ್, ಮಾದೇವಪುರ ಸುರೇಶ್. ಚನ್ನಗಿರಿ ಕೊಪ್ಪಲು ತಮ್ಮಣ್ಣ, ಗೋಪಾಲ್ ಗೌಡ, ಕಾಂತರಾಜ್ ಸೇರಿದಂತೆ ಇತರರು ಇತರರಿದ್ದರು.

Share this article