ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಬ್ರಾಹ್ಮಣರ ಅವಹೇಳನ ಹೆಚ್ಚಾಗುತ್ತಿದ್ದು, ಇದನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರವಾಗಿ ಖಂಡಿಸುತ್ತದೆ. ಈ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ತಿಳಿಸಿದರು.ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತಕ್ಕೆ ಬ್ರಾಹ್ಮಣರ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯಹೋರಾಟದಲ್ಲಿ ಮಂಗಲ ಪಾಂಡೆ ಅವರಿಂದ ವಿನಾಯಕ ದಾಮೋದರ ಸಾವರಕರ್ ಅವರವರೆಗೆ ಅನೇಕ ಬ್ರಾಹ್ಮಣರು ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಸನಾತನ ಧರ್ಮಕ್ಕೆ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಭದ್ರ ತಳಪಾಯ ಹಾಕಿದ್ದಾರೆ. ಅವರ ಮಾರ್ಗದಲ್ಲಿ ನಡೆದರೆ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಮಾತನಾಡಿ, ಭಾರತದ ಎಲ್ಲ ಕ್ಷೇತ್ರಗಳಲ್ಲೂ ಬ್ರಾಹ್ಮಣ ಸಮಾಜದವರಿದ್ದಾರೆ. ದೇವಾಲಯಗಳ ದುಡ್ಡಿನಿಂದ ಸರಕಾರ ನಡೆಯುತ್ತಿದೆ. ನಾವು ಮಾಡುವ ದೇವರ ಅರ್ಚನೆಯಿಂದ ಸರಕಾರ ನಡೆಯುತ್ತಿದೆ. ಆದರೂ ಬ್ರಾಹ್ಮಣರನ್ನು ಸರಕಾರ ಕೀಳಾಗಿ ನೋಡುತ್ತಿರುವುದು ವಿಷಾದನೀಯ. ಯಾವುದೇ ಕಾರಣಕ್ಕೂ ಬ್ರಾಹ್ಮಣರ ಮೇಲೆ ದಬ್ಬಾಳಿಕೆ ಆಗಬಾರದು ಎಂದರು.
ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ, ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಆಲಗೂರು, ಬ್ರಾಹ್ಮಣ ಸಮಾಜದ ಮುಖಂಡರಾದ ಶ್ರೀಹರಿ ಪಾಟೀಲ, ಜಿಲ್ಲಾಧ್ಯಕ್ಷ ನವೀನ ದೇಶಪಾಂಡೆ ವೇದಿಕೆಯಲ್ಲಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರಿಗೆ ವಿಶೇಷ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದೇವಾಲಯಗಳ ಅರ್ಚಕರು, ಮಹಿಳಾ ಭಜನಾ ಮಂಡಳಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಭಾರತ ಆರ್ಥಿಕವಾಗಿ ಮುನ್ನುಗ್ಗುತ್ತಿದ್ದು, ಇದರಲ್ಲಿ ವಿಪ್ರ ಸಮಾಜ ಬಂಧುಗಳ ಪಾತ್ರ ಮಹತ್ವದ್ದಾಗಿದೆ. ಬ್ರಾಹ್ಮಣರು ಸ್ವಂತ ಉದ್ಯಮ ಹಾಗೂ ಐಟಿ ಕ್ಷೇತ್ರದಲ್ಲಿ ಮುಂದೆ ಇದ್ದಾರೆ. ಸರಕಾರಕ್ಕೆ ಪ್ರಾಮಾಣಿಕವಾಗಿ ಅತಿ ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಬ್ರಾಹ್ಮಣರ ಕೊಡುಗೆ ಮಹತ್ವದ್ದಾಗಿದೆ. ಬಡ ಬ್ರಾಹ್ಮಣರ ಏಳಿಗೆಗೆ ವಿವಿಧ ಯೋಜನೆ ರೂಪಿಸಲಾಗುತ್ತಿದ್ದು, ಉದ್ಯೋಗ ಸೃಷ್ಟಿಸುವ ಜತೆಗೆ ಸ್ವಂತ ಉದ್ಯಮ ಆರಂಭಿಸಲು ಸಹಕಾರ ನೀಡಲಾಗುತ್ತಿದೆ. ಬ್ರಾಹ್ಮಣರು ಯಾವುದೇ ಕ್ಷೇತ್ರದಲ್ಲಿದ್ದರೂ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಸದಾ ಜತೆಯಾಗಿರುತ್ತದೆ.