ಕನ್ನಡಪ್ರಭ ವಾರ್ತೆ ಮಂಡ್ಯ
ಕಾರ್ಯಕ್ರಮವನ್ನು ಎಬಿಬಿಎಂಎಸ್ ರಾಜ್ಯಾಧ್ಯಕ್ಷ ಜಿ.ಆರ್.ಪ್ರದೀಪ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಬಳಿಕ ಮಾತನಾಡಿ, ಬ್ರಾಹ್ಮಣ ಸಮಾಜವು ಸಂಘಟಿತವಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಬಲಿಷ್ಠವಾಗಬೇಕಾಗಿದೆ ಎಂದರು.
ಯುವಪೀಳಿಗೆಯಲ್ಲಿ ಸಂಸ್ಕಾರ, ವೇದಪಾರಂಪರ್ಯ ಹಾಗೂ ಭಾರತೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಮಾಜದ ಏಕತೆ, ಸಹಕಾರ ಮತ್ತು ಸೇವಾಭಾವದ ಮೂಲಕ ಸಂಘಟನೆಯನ್ನು ಇನ್ನಷ್ಟು ವಿಸ್ತರಿಸುವ ಗುರಿಯನ್ನು ಎಬಿಬಿಎಂಎಸ್ ಹೊಂದಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಬಿಬಿಎಂಎಸ್ ಮಂಡ್ಯ ಜಿಲ್ಲಾಧ್ಯಕ್ಷ ಶ್ರೀಪತಿ ಭಾರಧ್ವಾಜ್ ವಹಿಸಿದ್ದರು. ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಸಂಘದ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಬ್ರಾಹ್ಮಣ ಸಮಾಜದ ಏಕತೆ, ಯುವಕರ ಭಾಗವಹಿಸಿದ್ದರು. ಮಹಿಳಾ ಸಬಲೀಕರಣ ಹಾಗೂ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಸಂಘವು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಮಾಜದ ಹಿತ ಮತ್ತು ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಿ ಕೈಜೋಡಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಎಬಿಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ ಅವರು ಸಂಘದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ದೇಶದ ೨೨ ರಾಜ್ಯಗಳಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸಮಾಜದ ಏಕತೆ ಮತ್ತು ಅಭಿವೃದ್ಧಿಗೆ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
‘ಬ್ರಾಹ್ಮಣರಿಂದ-ಬ್ರಾಹ್ಮಣರಿಗಾಗಿ-ಬ್ರಾಹ್ಮಣರಿಗೋಸ್ಕರ’ ಎಂಬ ಧ್ಯೇಯದೊಂದಿಗೆ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ವೇ.ಬ್ರ.ಶ್ರೀ ಅನಂತನಾರಾಯಣ ಶಾಸ್ತ್ರಿ ಹಾಗೂ ಪ್ರೇಮ ರಾಮಚಂದ್ರ ಹಂದೆ ಅವರಿಗೆ ‘ಭಾರ್ಗವ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಧಾರ್ಮಿಕ, ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಸಭಿಕರು ಭಾರೀ ಕರತಾಡನದ ಮೂಲಕ ಗೌರವ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶ್ರಮವಹಿಸಿದ್ದರು.