ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮನೆಗಳು ಹಾನಿಗೊಳಗಾದವರಿಗೆ ವೈಯಕ್ತಿಕ ಪರಿಹಾರ ನೀಡಿದ್ದಲ್ಲದೆ, ಸ್ಲಂ ಬೋರ್ಡ್‌ನಿಂದ ಶೀಘ್ರ ಪ್ರತಿಯೊಬ್ಬರಿಗೂ ಮನೆಗಳನ್ನು ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ವಾರ್ಡ್ 21ರಲ್ಲಿನ ಇಬ್ರಾಹಿಂಪುರದ ನೀಲವ್ವ ಭಜಂತ್ರಿ, ಲಲಿತಾ ಮುತ್ತಗಿ ಹಾಗೂ ಶಶಿಕಾಂತ ಹೊಸಮನಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಈ ಪ್ರದೇಶದಲ್ಲಿ ಒಟ್ಟು 12 ಮನೆಗಳು ಬಿದ್ದಿವೆ. ಈಗಾಗಲೇ ಈ ಪ್ರದೇಶ ಸ್ಲಂ ಘೋಷಣೆಯಾಗಿದ್ದು, ತಾವು ಪಾವತಿಸಬೇಕಾದ ವಂತಿಗೆ ಹಣದ ಪೈಕಿ ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ ತಲಾ ₹ 10 ಸಾವಿರ ಪಾವತಿಸುವುದಾಗಿ ಭರವಸೆ ನೀಡಿದರು.
ವಾರ್ಡ್ 32ರ ಜೋರಾಪುರಪೇಟ ರಾಘವೇಂದ್ರ ಮಠದ ಹತ್ತಿರ ಹಾಗೂ ಶಾಪೇಟಿ ಓಣಿಯಲ್ಲಿ ಚಿದಂಬರ ಜೋಶಿ, ಮಾರುತಿ ಶಂಕರ ಶಿಂಧೆ, ಸುಶೀಲಾಬಾಯಿ ಬಸಪ್ಪ ಶಾಪೇಟಿ ಅವರ ಮನೆಗಳಿಗೆ ಹಾಗೂ ಭಜಂತ್ರಿ ಗಲ್ಲಿಯ ಮೋಸೋಬಾ ದೇವಸ್ಥಾನಕ್ಕೆ ಭೇಟಿ ನೀಡಿದರು.ವಾರ್ಡ್ 31ರ ಅಡಕಿ ಗಲ್ಲಿಯಲ್ಲಿ ಶೇಖರ ಬಾಗೇವಾಡಿ ಅವರ ಮನೆಗೆ ಭೇಟಿ ನೀಡಿ, ವೈಯಕ್ತಿವಾಗಿ ₹10 ಸಾವಿರ ಸಹಾಯ ಧನ ನೀಡಿದರು. ವಾರ್ಡ್ 3ರ ಗ್ಯಾಂಗಬಾವಡಿ, ಕಕ್ಕಯ್ಯ ಕಾಲೊನಿಗೆ ಭೇಟಿ ನೀಡಿದ ಅವರು, ರಾಜಶೇಖರ ಭಜಂತ್ರಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ವಾರ್ಡ್ 14ರ ಸುಣಗಾರ ಗಲ್ಲಿಗೆ ಭೇಟಿ ನೀಡಿ, ಚರಂಡಿಗಳನ್ನು ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗಡಗಿ, ಶಿವರುದ್ರ ಬಾಗಲಕೋಟ, ಜವಾಹರ ಗೋಸಾವಿ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಮಳುಗೌಡ ಪಾಟೀಲ, ಕಿರಣ ಪಾಟೀಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಪಾಂಡು ಸಾಹುಕಾರ ದೊಡಮನಿ, ಮಹೇಶ ಒಡೆಯರ, ಮಲ್ಲಮ್ಮ ಜೋಗೂರ, ಸಂತೋಷ ತಳಕೇರಿ, ಮಡಿವಾಳ ಯಾಳವಾರ, ರಾಜಶೇಖರ ಭಜಂತ್ರಿ, ಪ್ರವೀಣ ನಾಟೀಕಾರ, ಶರಣು ಕಾಖಂಡಕಿ, ಪಾಪುಸಿಂಗ್ ರಜಪೂತ, ವಿಕ್ರಮ ಗಾಯಕವಾಡ, ಚಂದ್ರು ಚೌದರಿ, ಮಲ್ಲಿಕಾರ್ಜನ ಗುಂದಗಿ, ರಾಮು ಭಜಂತ್ರಿ, ಭೀಮು ಮಾಶ್ಯಾಳ, ಸಂತೋಷ ಮುಂಜಾನೆ, ಮಹೇಶ ಹೆರಲಗಿ ಸೇರಿದಂತೆ ಮತ್ತಿತರರು ಇದ್ದರು.