ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಒಕ್ಕಲಿಗ ಸಮುದಾಯದ ಯಾರೂ ತಪ್ಪಿ ಹೋಗದ ಹಾಗೆ, ಸತ್ಯವಾದ ಮತ್ತು ಸರಿಯಾದ ಮಾಹಿತಿ ನೀಡಿ, ತಪ್ಪು ಮಾಹಿತಿ ದಾಖಲಾಗದಂತೆ ಎಚ್ಚರ ವಹಿಸಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರ ಹೊರವಲಯದ ಎಸ್ ಜೆಸಿ ತಾಂತ್ರಿಕ ಕಾಲೇಜು ಆವರಣದಲ್ಲಿನ ಬಿಜಿಎಸ್ ಸಭಾಂಗಣದಲ್ಲಿ ಆದಿ ಚುಂಚನಗಿರಿ ಮಠ ಮತ್ತು ಒಕ್ಕಲಿಗರ ಸಂಘದಿಂದ ಸೋಮವಾರ ನಡೆದ ಜನಾಂಗದ ಜಾತಿ ಗಣತಿ ಮತ್ತು ಸಾಮಾಜಿಕ- ಆರ್ಥಿಕ ಸಮೀಕ್ಷೆ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, 1931ರಲ್ಲಿ ನಡೆದಿದ್ದ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯು ಈಗ ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.
ಒಕ್ಕಲಿಗ ಒಕ್ಕಿದರೆ ನಕ್ಕು ನಲಿಯುವುದು ಜಗವೆಲ್ಲ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ. ಇದು ಕೇವಲ ಗಾದೆ ಮಾತಲ್ಲ. ನಿತ್ಯ ಸತ್ಯವಾದ ಮಾತಾಗಿದೆ. ಒಕ್ಕಲಿಗ ಸಮಾಜ ಎಂದರೆ ಅದು ನಾಡಿಗೆ ಅನ್ನ ನೀಡುವ ನೇಗಿಲ ಯೋಗಿಗಳ ಸಮುದಾಯ. ಒಕ್ಕಲಿಗ ಸಮುದಾಯ ಎಂದರೆ ಅದು ಈ ನಾಡಿನ ಮಣ್ಣಿನ ಜೊತೆ ಕರುಳಬಳ್ಳಿಯ ಸಂಬಂಧ ಹೊಂದಿರುವ ಮಣ್ಣಿನ ಮಕ್ಕಳ ಸಮುದಾಯ. ನಾಡಪ್ರಭು ಕೆಂಪೇಗೌಡರಂತಹ ನಾಡು ಕಟ್ಟಿದ ಮಹನೀಯರನ್ನು ಮತ್ತು ರಾಷ್ಟ್ರಕವಿ ಕುವೆಂಪುರಂತಹ ವಿಶ್ವಮಾನವ ಚೇತನವನ್ನು ನೀಡಿದ ಪ್ರಬುದ್ಧರ ಸಮುದಾಯವಾಗಿದೆ. ನಾವು ಮತ್ತು ನಮ್ಮ ಸಮಾಜ ಉಳಿಯ ಬೇಕಾದರೆ ಒಕ್ಕಲಿಗರು ಒಗ್ಗಟ್ಟಾಗಿರಬೇಕು. ಸಮುದಾಯಕ್ಕೆ ಮೀಸಲಾತಿ ಸಿಗಬೇಕು. ಆಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಈಗ ಆ ಕಾಲ ಕೂಡಿ ಬಂದಿದೆ ಎಂದರು.ಸರ್ಕಾರವು ಹೊಸ ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ ಅಂದರೆ 15 ದಿನಗಳ ಕಾಲ ನಡೆಸಲು ನಿರ್ಧರಿಸಿದೆ. ಆದರೆ, ಸಮುದಾಯದ ಜನಸಂಖ್ಯೆಯನ್ನು ನಿಖರವಾಗಿ ಲೆಕ್ಕ ಹಾಕಲು ಯಾವುದೇ ಗಣತಿದಾರರು ಬಂದಾಗ ನೀವು ಸಮುದಾಯದ ಯಾವುದೇ ಉಪ ಪಂಗಡಕ್ಕೆ ಸೇರಿದ್ದರೂ ಒಕ್ಕಲಿಗ ಎಂದೇ ನಮೂದಿಸಿ, ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ಬರೆಸಬೇಕು. ಉಪ ಪಂಗಡಗಳನ್ನು ಉಪ ಜಾತಿ ಕಲಂನಲ್ಲಿ ದಾಖಲಿಸಬೇಕು. ಜಾತಿ ಕಲಂನಲ್ಲಿ ಯಾರೂ ಉಪ ಜಾತಿ ನಮೂದಿಸದಂತೆ ಎಚ್ಚರಿಕೆ ವಹಿಸಬೇಕು. ಹಾಗೆಯೇ ನಿಮ್ಮ ಸರಿಯಾದ ವಿದ್ಯಾಬ್ಯಾಸ, ಜಮೀನು, ಆರ್ಥಿಕ ಸ್ಥಿತಿಗಳ ಬಗ್ಗೆ ಸತ್ಯವಾದ ಮಾಹಿತಿ ನೀಡಬೇಕು. ಉದಾಹರಣೆಗೆ ನೀವು ಪದವಿ ಅಥವಾ ಪಿಯುಸಿಗೆ ಸೇರಿ ವಿದ್ಯಾಬ್ಯಾಸ ಪೂರ್ಣಗೊಳಿಸದೆ ಅರ್ಧಕ್ಕೇ ನಿಲ್ಲಿಸಿರುತ್ತೀರಿ, ಆಗ ನಿಮ್ಮ ವಿದ್ಯಾಬ್ಯಾಸದ ಮಟ್ಟ ಪದವಿ ಅಥವಾ ಪಿಯುಸಿ ಆಗಿರುವುದಿಲ್ಲಾ. ಆಗ ನೀವು ವಿದ್ಯಾಬ್ಯಾಸ ಪೂರ್ಣಗೊಳಿಸಿರುವುದನ್ನು ಮಾತ್ರ ನೀಡಬೇಕು. ನಿಮ್ಮ ಮನೇಲಿ ಒಟ್ಟು 10 ಜನರಿದ್ದು ಕುಟುಂಬದಲ್ಲಿ 20 ಎಕರೆ ಜಮೀನಿದ್ದರೆ ಕುಟುಂಬದ 10 ಮಂದಿಗೆ ತಲಾ ಎರಡು ಎಕರೆ ಜಮೀನು ಬರುತ್ತದೆ. ಅದನ್ನು ಬರೆಸಬೇಕು. ಮುಂದೆ ಸರ್ಕಾರಿ ಸೌಲಭ್ಯ ಸಿಗಬೇಕಿದ್ದರೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ನೆರೆದಿದ್ದ ಸಮುದಾಯದ ಜನಾಂಗಕ್ಕೆ ಸಮೀಕ್ಷೆಯ ಬಗ್ಗೆ ಪಿಪಿಟಿ ನೀಡಿದರಲ್ಲದೇ, ಸಮುದಾಯದವರಿಗಿದ್ದ ಅನುಮಾನಗಳನ್ನು ಪರಿಹರಿಸಿದರು.ಆದಿಚುಂಚನ ಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ಗೌರವಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ನಿರ್ದೇಶಕ ಡಾ.ರಮೇಶ್, ಜಿಲ್ಲಾಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರ ಸಭೆ ಮಾಜಿ ಅಧ್ಯಕ್ಷ ಎಂ.ಪ್ರಕಾಶ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಚುಂಚಶ್ರೀ ಮಹಿಳಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷೆ ಉಷಾ ಆಂಜನೇಯರೆಡ್ಡಿ, ಮುಖಂಡರಾದ ಸಂದೀಪ್.ಬಿ.ರೆಡ್ಡಿ, ಚಿಕ್ಕಗರಿಗಿರೆಡ್ಡಿ, ಚದಲಪುರ ನಾರಾಯಣಸ್ವಾಮಿ, ರಾಜೀವ್ ಗೌಡ, ಜಿಲ್ಲೆಯ ಎಲ್ಲಾ ಎಂಟು ತಾಲೂಕುಗಳ ಸಮುದಾಯದ ಎಲ್ಲ ಮುಖಂಡರು ಇದ್ದರು.