ಚನ್ನಪಟ್ಟಣ: ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಹಾಗೂ ಕರ್ತವ್ಯ, ಸಂವಿಧಾನ ನೀಡಿರುವ ಈ ಪವಿತ್ರ ಮತದಾನದ ಹಕ್ಕನ್ನು ದುರುಪಯೋಗಪಡಿಸದೆ, ಆಸೆ, ಆಮಿಷಗಳಿಗೆ ಒಳಗಾಗದೇ ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡಬೇಕು ಎಂದು ತಹಸೀಲ್ದಾರ್ ಬಿ.ಎನ್. ಗಿರೀಶ್ ಹೇಳಿದರು.
೧೮ ವರ್ಷ ತುಂಬಿದ ಯುವಕ ಹಾಗೂ ಯುವತಿಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಮತದಾನ ಮಾಡಿದಾಗ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗುತ್ತದೆ. ಮತದಾನದಿಂದ ದೂರ ಉಳಿದರೆ ಅದು ದೇಶದ ಪ್ರಗತಿಗೆ ದ್ರೋಹ ಮಾಡಿದಂತಾಗುತ್ತದೆ. ಆದ್ದರಿಂದ ಜಾತಿ, ಧರ್ಮ, ಜನಾಂಗವನ್ನು ಪರಿಗಣಿಸದೇ ಮತ ಚಲಾಯಿಸಿ ಸೂಕ್ತ ಹಾಗೂ ಸಮರ್ಥ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಬಿಇಒ ರಾಮಲಿಂಗಯ್ಯ ಮಾತನಾಡಿ, ೧೮ ವರ್ಷ ಪೂರೈಸಿದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾನದ ಹಕ್ಕು ಅಮೂಲ್ಯವಾದದ್ದು, ಯಾವುದೇ ಕಾರಣಕ್ಕೂ ಅದನ್ನು ಮಾರಿಕೊಳ್ಳಬಾರದು. ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಇದೇ ವೇಳೆ ಹೊಸದಾಗಿ ನೋಂದಣಿಯಾದ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಇಒ ಸಂದೀಪ್, ಭೂ ದಾಖಲೆಗಳ ತಾಲೂಕು ಸಹಾಯಕ ನಿರ್ದೇಶಕ ಪ್ರಖ್ಯಾತ್, ಪಿಡಬ್ಲ್ಯೂಡಿ ಎಇಇ ಮಲ್ಲಿಕಾರ್ಜುನ್, ಪ್ರಧಾನಮಂತ್ರಿ ಪೋಷಣ ಅಭಿಯಾನ ಸಹಾಯಕ ನಿರ್ದೇಶಕ ಸಿದ್ದರಾಜು, ಸಮಾಜ ಕಲ್ಯಾಣ ಇಲಾಖೆಯ ರಮೇಶ್, ಮುಖ್ಯ ಶಿಕ್ಷಕ ಯೋಗೇಶ್, ಉಪತಹಸಿಲ್ದಾರ್ ಹರೀಶ್ ಕುಮಾರ್ ಇತರರಿದ್ದರು.ಪೊಟೋ೨೬ಸಿಪಿಟಿ೩: ಚನ್ನಪಟ್ಟಣದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಯುವ ಮತದಾರರಿಗೆ ತಹಸೀಲ್ದಾರ್ ಗಿರೀಶ್ ಮತದಾರರ ಗುರುತಿನ ಚೀಟಿ ವಿತರಿಸಿದರು.