ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಗರದ ಸಾಗರ ರಸ್ತೆಯ ನಂಜಪ್ಪ ಲೈಫ್‍ಕೇರ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಾಕಥಾನ್ ಹಾಗೂ ಸೈಕ್ಲೋಥಾನ್‌ನಲ್ಲಿ ನೂರಾರು ಜನರು ಹೃದಯದ ಆರೋಗ್ಯಕ್ಕಾಗಿ ಹೆಜ್ಜೆ ಹಾಕಿದರು. ಬೆಳಗ್ಗೆ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಎದುರು ಆರಂಭಗೊಂಡ ವಾಕಥಾನ್ ಮತ್ತು ಸೈಕ್ಲೋಥಾನ್‍ಗೆ ಆಸ್ಪತ್ರೆಯ ಸಿಇಒ ಡಾ.ಅವಿನಾಶ್ ಚಾಲನೆ ನೀಡಿ, ಹೃದಯ ಮನುಷ್ಯನ ಜೀವಂತಿಕೆ ಸಂಕೇತ, ಹೃದಯದ ಬಡಿತದೊಂದಿಗೆ ಶುರುವಾಗುವ ಜೀವನ ಹೃದಯದ ಸದ್ದು ನಿಲ್ಲುವುದರೊಂದಿಗೆ ಕೊನೆಯಾಗುತ್ತದೆ. ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಬದಲಾವಣೆ ಹೃದಯ, ಬದುಕನ್ನು ಜೋಪಾನವಾಗಿ ಇಡುತ್ತದೆ. ಬೇರೆಯವರಿಗೆ ಮಿಡಿಯುವ ಹೃದಯ ತನ್ನ ಆರೋಗ್ಯಕ್ಕೆ ಮಿಡಿಯುವಂತಾಗಲಿ ಎಂದು ಆಶಿಸಿದರು. ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಯಿಂದ ಆರಂಭವಾದ ವಾಕಥಾನ್ ಹಾಗೂ ಸೈಕ್ಲೋಥಾನ್ ಮಹಾವೀರ ವೃತ್ತ, ಬಾಲರಾಜ್ ಅರಸ್ ರಸ್ತೆ, ಕೆಇಬಿ ವೃತ್ತ, ಶೇಷಾದ್ರಿಪುರಂ ವೃತ್ತ, ಶಂಕರ ಮಠ ರಸ್ತೆ, ಬಿ.ಎಚ್. ರಸ್ತೆ, ಮೀನಾಕ್ಷಿ ಭವನ, ಕರ್ನಾಟಕ ಸಂಘ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಅಶೋಕ ವೃತ್ತದ ಮಾರ್ಗವಾಗಿ ಸಾಗರ ರಸ್ತೆಯಲ್ಲಿ ಸಾಗಿ ನಂಜಪ್ಪ ಲೈಫ್ ಕೇರ್ ತಲುಪಿತು. ನೂರಾರು ಮಂದಿ ವಾಕಥಾನ್ ಮತ್ತು ಸೈಕ್ಲೋಥಾನ್‍ಗೆ ಕೈ ಜೋಡಿಸಿದ್ದು, ವಿಶೇಷವಾಗಿತ್ತು. ಸ್ವಸ್ಥ ಹೃದಯ ಸುಂದರ ನಾಳೆಗಳು ಸೇರಿ ಹೃದಯ ಸುರಕ್ಷತೆಗೆ ಸಂಬಂಧಿಸಿದಂತೆ ವಿವಿಧ ಘೋಷಣೆಗಳೊಂದಿಗೆ ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಿದರು. ಹೃದಯ ಆರೋಗ್ಯ ರಕ್ಷಣೆ ಕುರಿತು ದಾರಿಯುದ್ದಕ್ಕೂ ಘೋಷಣೆ ಮೊಳಗಿದವು. ಶಿವಮೊಗ್ಗದ ನಂಜಪ್ಪ ಲೈಫ್‍ಕೇರ್‌ಗೆ 12 ವರ್ಷ ಮತ್ತು ದಾವಣಗೆರೆಯ ನಂಜಪ್ಪ ಲೈಫ್ ಕೇರ್‌ಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೃದಯಗಳ ಬಗ್ಗೆ ಅರಿವು ಮೂಡಿಸಲು ನಂಜಪ್ಪ ಸಂಸ್ಥೆಯ ಮಕ್ಕಳು ಜಾಗೃತಿ ಮೂಡಿಸುವ ಭಿತ್ತಿಫಲಕ, ಚಿತ್ರಗಳ ಪ್ರದರ್ಶನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಬಳಿಕ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಿಪಿಆರ್ ಕಾರ್ಯಾಗಾರ ಕೂಡ ನಡೆಯಿತು. ಕಾರ್ಡಿಯಾಲಜಿಸ್ಟ್ ಡಾ. ಜಿ.ನರೇಂದ್ರ , ತಜ್ಞ ವೈದ್ಯರಾದ ಡಾ. ಮಂಟಪ ರತ್ನಾಕರ್ ಮತ್ತಿತರರು ಹಾಜರಿದ್ದರು. - - - -7ಎಸ್ಎಂಜಿಕೆಪಿ03, 04: ಶಿವಮೊಗ್ಗದ ನಂಜಪ್ಪ ಲೈಫ್‍ಕೇರ್ ವತಿಯಿಂದ ಶನಿವಾರ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಾಕಥಾನ್ ಹಾಗೂ ಸೈಕ್ಲೋಥಾನ್‌ಗೆ ಆಸ್ಪತ್ರೆಯ ಸಿಇಒ ಡಾ.ಅವಿನಾಶ್ ಚಾಲನೆ ನೀಡಿದರು.