ಚಿತ್ರದುರ್ಗ: ಹಿರಿಯೂರು ವಾಣಿವಿಲಾಸ ಸಾಗರ ಜಲಾಶಯದ ಅಚ್ಚು ಕಟ್ಟು ಪ್ರದೇಶದ ರೈತರಿಗೆ ಬೇಸಿಗೆ ಹಂಗಾಮಿಗೆ ಒಂದು ತಿಂಗಳು ನೀರು ನೀಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಫೆ.20ರ ಮಂಗಳವಾರದಿಂದಲೇ ಕಾಲುವೆಗೆ ನೀರು ಹರಿಯಬಿಡಲಾಗುತ್ತದೆ.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಲ್ಲಿ ಸೋಮವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ವಾಣಿ ವಿಲಾಸ ಸಾಗರ ಜಲಾಶಯದ ಮೇಲ್ಮಟ್ಟ, ಬಲನಾಲ, ಎಡನಾಲ ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ಸುಮಾರು 12 ಸಾವಿರ ಹೆಕ್ಟೇರ್ ಕೃಷಿಭೂಮಿಗೆ ಒಂದು ತಿಂಗಳ ಕಾಲ ನೀರು ಹರಿಸಲಾಗುತ್ತದೆ.ಜಿಲ್ಲಾ ನೀರಾವರಿ ಸಲಹಾ ಸಮಿತಿ ಹಿರಿಯೂರು ಭಾಗದ ಅಧಿಕಾರೇತರ ಸದಸ್ಯರು, ಈ ಬಾರಿ ಭೀಕರ ಬರಗಾಲ ಎದುರಾಗಿದೆ. ವಿ.ವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ತೋಟಗಳು, ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಬೊರವೆಲ್‌ಗಳು ಬತ್ತಿ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ತಕ್ಷಣವೇ ವಿವಿ ಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹದಲ್ಲಿ ಬೇಸಿಗೆ ಹಂಗಾಮಿಗೆ ಕನಿಷ್ಠ 40 ದಿನಗಳ ನಾಲೆಗಳ ಮೂಲಕ ಹರಿಸುವಂತೆ ಸಭೆಯಲ್ಲಿ ಬೇಡಿಕೆಯನ್ನಿಟ್ಟರು.
ಅಚ್ಚುಕಟ್ಟು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು,ಬಾಳೆಗಳ ಜೊತೆಗೆ ರೈತರು ಕೃಷಿ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ರಾಗಿ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಫಸಲು ಬೆಳವಣಿಗೆ ಹಂತದಲ್ಲಿ ಇದ್ದು ಬೇಸಿಗೆ ತಾಪಮಾನಕ್ಕೆ ಸಿಲುಕಿ ನಷ್ಟ ಹೊಂದಬಹುದು. ಆದ್ದರಿಂದ ಕೂಡಲೇ ವಿವಿ ಸಾಗರ ಜಲಾಶಯದಿಂದ ನೀರು ಹರಿಸುವಂತೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.ಜಲಾಶಯದ ಸಂಗ್ರಹಣಾ ಸಾಮರ್ಥ್ಯ 30.42 ಟಿಎಂಸಿ ಗಳಾಗಿದೆ. ಇದರಲ್ಲಿ 1.87 ಟಿಎಂಸಿ ನೀರು ಬಳಕೆಗೆ ಬರುವುದಿಲ್ಲ. 28.55 ಟಿಎಂಸಿ ನೀರು ಮಾತ್ರ ಬಳಸಬಹುದು. ಪ್ರಸ್ತುತ ಜಲಾಶಯದಲ್ಲಿ 117.50 ಅಡಿ ನೀರಿನ ಎತ್ತರದ ಮಟ್ಟವಿದ್ದು, 18.59 ಟಿಎಂಸಿ ಸಂಗ್ರಹಣೆಯಿದೆ. ಹಿರಿಯೂರು, ಚಿತ್ರದುರ್ಗ ನಗರದ ಪ್ರದೇಶಗಳು, ಚಳ್ಳಕೆರೆ ಪಟ್ಟಣ ಹಾಗೂ ಚಳ್ಳಕೆರೆ ತಾಲೂಕಿನಲ್ಲಿರುವ ವಿವಿಧ ಸಂಶೋಧನಾ ಕೇಂದ್ರಗಳು ಹಾಗೂ 18 ಹಳ್ಳಿಗಳಿಗೆ ನಿತ್ಯ 40 ಎಂಎಲ್.ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಬೇಸಿಗೆ ಬೆಳೆಗಳಿಗೆ 30 ದಿನಗಳ ಕಾಲ ನೀರು ಹರಿಸಿದರೆ 1.40 ಟಿಎಂಸಿ ನೀರು ಬೇಕಾಗುತ್ತದೆ. ಸೂರ್ಯನ ಶಾಖಕ್ಕೆ ಬೇಸಿಗೆ ಅಂತ್ಯದ ವೇಳೆಗೆ 0.354 ಟಿಎಂಸಿ ನೀರು ಆವಿಯಾಗುವ ಸಂಭವಿದೆ. ಒಟ್ಟು 1.965 ಟಿಎಂಸಿ ನೀರಿನ ಬಳಕೆಯ ನಂತರ, ಜಲಾಶಯದಲ್ಲಿ 16.625 ಟಿಎಂಸಿ ನೀರು ಉಳಿಯಲಿದೆ. ನೀರಿನ ಮಟ್ಟ 114.40 ಅಡಿಗೆ ತಲುಪಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಾರಿಕೇರ ಚಂದ್ರಪ್ಪ ಸಭೆಯಲ್ಲಿ ಮಾಹಿತಿ ನೀಡಿದರು.
ವಾಸ್ತವಾಂಶವ ಪರಿಗಣನೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಫೆ.20ರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರ ಜೊತೆಯಲ್ಲಿ ಈಗಾಗಲೇ ಬರಗಾಲಕ್ಕೆ ತುತ್ತಾದ ಹಿರಿಯೂರು ತಾಲೂಕಿನ 38 ಹಳ್ಳಿಗಳಲ್ಲಿ ಜಲಾಶಯದ ನೀರು ಹರಿಸುವುದರಿಂದ ಅಂತರ್ಜಲ ಅಭಿವೃದ್ಧಿಯಾಗಲಿದೆ. ಜನಮೀನುಗಳಿಗೆ ನೀರು ಹಾಯಿಸುವುದರಿಂದ ಜಾನುವಾರುಗಳಿಗೂ ಕುಡಿಯುವ ನೀರು ದೊರಕಲಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಟಿ.ರಘುಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನೂತನ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ, ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ವಿಶ್ವೇಶ್ವರಯ್ಯ ಜಲ ನಿಗಮದ ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್, ಸಲಹಾ ಸಮಿತಿ ಸದಸ್ಯರುಗಳಾದ ಸಿ.ಎನ್.ಸುಂದರಂ, ಪಿ.ಕೆ.ಸುಂದರೇಶ್, ವೈ.ನಾಗರಾಜು, ಆಸಿಫ್ ಅಲಿ, ಎನ್.ಅನಿಲ್‌ಕುಮಾರ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.