ಕನ್ನಡಪ್ರಭವಾರ್ತೆ ಬೇಲೂರುತಾಲೂಕಿನ ಅರೇಹಳ್ಳಿ ಪಟ್ಟಣದ ತೊಳಲು ರಸ್ತೆಯ ಅಗಲೀಕರಣ ಕಾಮಗಾರಿಯಿಂದ ಜೆಜೆಎಂ ಯೋಜನೆಯ ನೀರಿನ ಪೈಪುಗಳಿಗೆ ಸಾಕಷ್ಟು ಹಾನಿಯಾಗಿದ್ದು ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ಸ್ಥಳೀಯರು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ರಸ್ತೆ ಅಭಿವೃದ್ಧಿಯಾದರೆ ಪಟ್ಟಣಕ್ಕ ಒಳ್ಳೆಯದು ಎಂಬ ಆಶಯದೊಂದಿಗೆ ಮನೆಯನ್ನು ಕೆಡವಲು ಯಾವುದೇ ಚಕಾರವೆತ್ತದೆ ಸಹಕಾರ ನೀಡಿದ್ದೇವೆ. ಆದರೆ ಕಳೆದ ಐದಾರು ತಿಂಗಳಿನಿಂದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ನಮಗೆ ಕುಡಿಯುವ ನೀರಿನ ಸಮಸ್ಯೆ, ಮನೆಯೊಳಗೆ ಧೂಳಿನ ಸಮಸ್ಯೆ, ರಸ್ತೆಯಲ್ಲಿ ತಿರುಗಾಡಲು ಸಮಸ್ಯೆಗಳು ಎದುರಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರೇಹಳ್ಳಿ ಪಟ್ಟಣದ ತೊಳಲು ರಸ್ತೆಯು ಈ ಹಿಂದೆ ತೀವ್ರ ಹದಗೆಟ್ಟಿದ್ದು, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಕೆಲ ತಿಂಗಳ ಹಿಂದೆ ಸ್ಥಳೀಯ ಶಾಸಕರು ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ್ದರು. ನಂತರ ರಸ್ತೆ ಅಭಿವೃದ್ಧಿ ಕಾಮಗಾರಿ ಮುಂದುವರಿಯುತ್ತಿದ್ದಂತೆ ನೂತನ ರಸ್ತೆ ನಿರ್ಮಾಣಕ್ಕೆ ವಿದ್ಯುತ್ ಕಂಬಗಳು ಅಡ್ಡಿಯಾಗತೊಡಗಿತು. ವಿದ್ಯುತ್ ಕಂಬಗಳು ಸ್ಥಳಾಂತರವಾಗದೇ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಅಲ್ಲದೆ ಈ ಹಿಂದೆ ಅಳವಡಿಸಿದ್ದ ಜೆ.ಜೆ.ಎಂ ಪೈಪುಗಳು ಸಹ ಸಾಕಷ್ಟು ಹಾನಿಯಾಗಿದ್ದು ಪೂರ್ಣಗೊಳಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ . ಇವರ ತಪ್ಪಿನಿಂದ ರಸ್ತೆಯಲ್ಲಿ ಧೂಳು ಹೆಚ್ಚಾಗುತ್ತಿದೆ. ಇವರ ತಪ್ಪಿನಿಂದ ರಸ್ತೆಯಲ್ಲಿರುವ ಧೂಳು ಅಶುದ್ಧ ಕುಡಿಯುವ ನೀರು ನಮ್ಮ ಆರೋಗ್ಯದ ಮೇಲೆ ಅತಿರೇಕದ ಪರಿಣಾಮ ಬೀರುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಕುಡಿಯಲು ಆರೋಗ್ಯಕರ ನೀರಿನ ವ್ಯವಸ್ಥೆ ಹಾಗೂ ತಿರುಗಾಡಲು ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಈ ಹಿಂದೆ ಇದ್ದ ಹಳೆಯ ನೀರಿನ ಪೈಪುಗಳು ಆಗಿಂದಾಗ್ಗೆ ಹಾನಿಯಾಗುತ್ತಲೇ ಇದೆ. ಆದರೂ ಸಾಕಷ್ಟು ಪ್ರಯತ್ನಗಳಿಂದ ಸರಿದೂಗಿಸುತ್ತ ನೀರಿನ ಸರಬರಾಜು ಮಾಡಲಾಗುತ್ತಿದೆ. ಮನೆಯ ಶೌಚಾಲಯಕ್ಕೆ, ಬಟ್ಟೆ ಒಗೆಯಲು ಹಾಗೂ ಇತರೆ ಅನ್ಯ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ ಕೊಳವೆಬಾವಿಯಿಂದ ನೀರನ್ನು ಒದಗಿಸಲಾಗುತ್ತಿದೆ. ಈಗಾಗಲೇ ಜೆ.ಜೆ.ಎಂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ತ್ವರಿತವಾಗಿ ಎಲ್ಲ ಮನೆಗಳಿಗೂ ಸಮರ್ಪಕ ನೀರನ್ನು ಪೂರೈಸಲಾಗುವುದು.
-ಚಂದ್ರಯ್ಯ, ಪಿಡಿಒ