ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನೈದು ದಿನಗಳ ಹಿಂದೆ ಉಜನಿ ಜಲಾಶಯದಿಂದ 4 ಟಿಎಂಸಿ ನೀರು ಬಿಡುಗಡೆ ಮಾಡಲಾಗಿತ್ತು. ಆದರೆ, ಮಹಾರಾಷ್ಟ್ರದ ಅರಳಿ ಬ್ಯಾರೇಜ್ ಬಳಿ ನೀರು ತಡೆಹಿಡಿಯಲಾಯಿತು. ಕರ್ನಾಟಕದ ಕೆಲವು ಭಾಗಗಳಿಗೆ ನೀರು ಹರಿದುಹೋಗುತ್ತದೆ ಎಂಬ ಕಾರಣಕ್ಕೆ ತಮ್ಮದೇ ರಾಜ್ಯದ ಎರಡು ಕ್ಷೇತ್ರಗಳಿಗೆ ನೀರು ಬಿಡಲಿಲ್ಲ. ಮಹಾರಾಷ್ಟ್ರದ ಇಷ್ಟೊಂದು ಸ್ವಾರ್ಥದ ನಡೆ ನಮಗೆ ನೋವು ತಂದಿದೆ. ಈ ಬಗ್ಗೆ ನಮ್ಮ ಪ್ರಿನ್ಸಿಪಲ್ ಸೆಕ್ರೆಟರಿ ಮೂಲಕ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದಾಗ ಡಿಸೆಂಬರ್ ಹಾಗೂ ಮಾರ್ಚ್‌ನಲ್ಲಿ ಕುಡಿಯುವ ನೀರು ಬಿಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು. ಇಂಡಿ ಕ್ಷೇತ್ರ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಿಂದ ಬಂದಿದ್ದು, ಹಿಂದೆ 100ಕ್ಕೂ ಅಧಿಕ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಇತ್ತು. ಆದರೆ, ಇದೀಗ ಒಂದೇ ಒಂದು ಟ್ಯಾಂಕರ್ ಅಗತ್ಯವಿಲ್ಲದಂತೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿಂದೆ ನಾನು ₹100 ಕೋಟಿ ವೆಚ್ಚದಲ್ಲಿ ಧೂಳಖೇಡದಿಂದ ಕೈಗೊಂಡ 24X7 ಕುಡಿಯುವ ನೀರಿನ ಯೋಜನೆಯಿಂದ ಇಂಡಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿತ್ತು, ಇದೀಗ ಅಲ್ಲಿಯೇ ನೀರಿಲ್ಲದಂತಾಗಿದ್ದು ಸಮಸ್ಯೆ ತಲೆದೂರುವ ಲಕ್ಷಣಗಳಿವೆ. ಹಾಗಾಗಿ ಮುಂದಿನ ದಿನಗಳಲ್ಲಿಯೂ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ ಎಂದರು.ಅಂತಾರಾಜ್ಯ ಜಲವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಗಡಿ ರಾಜ್ಯಗಳೊಂದಿಗೆ ನೆರೆ ಮತ್ತು ಬರ ಸಮನ್ವಯ ಸಮಿತಿ ರಚಿಸಿ ನೀರು ಹಂಚಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕೃಷ್ಣಾ ನದಿ ಭಾಗದಲ್ಲಿಯೂ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಕೇಂದ್ರ ಸರ್ಕಾರ ರಾಜ್ಯಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಡಚಣ, ಇಂಡಿ, ಆಲಮೇಲ, ಅಫಜಲಪುರ ಹಾಗೂ ಗಾಣಗಾಪುರ ವ್ಯಾಪ್ತಿಯಲ್ಲಿ ₹490 ಕೋಟಿ ವೆಚ್ಚದಲ್ಲಿ 150 ಕಿ.ಮೀ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಭೀಮಾ ನದಿಗೆ ₹76 ಕೋಟಿ ವೆಚ್ಚದಲ್ಲಿ ಪಡನೂರ-ಅಂಕಲಗಿ ಬ್ಯಾರೇಜ್ ನಿರ್ಮಾಣಕ್ಕೂ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.ಕಬ್ಬು ಬೆಳೆಗಾರರ ಸಂಕಷ್ಟ ಅರಿತು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಟನ್ ಕಬ್ಬಿಗೆ ₹3,700 ದರ ನೀಡುವುದಾಗಿ ಘೋಷಿಸಲಾಗಿದೆ. ರೈತರು ಕೇಳಿದ್ದ ₹3,600ಕ್ಕಿಂತ ಹೆಚ್ಚಿನ ದರ ನೀಡಲಾಗಿದೆ. ಕೇಂದ್ರ ಸರ್ಕಾರ ಎಂಎಸ್‌ಪಿ ಹಾಗೂ ರಾಜ್ಯ ಸರ್ಕಾರ ಎಸ್‌ಎಪಿ ದರ ನಿಗದಿಪಡಿಸುವಾಗ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸಕ್ಕರೆ ಮಾರಾಟದಿಂದ ಹೆಚ್ಚಿನ ಲಾಭ ಬಂದರೆ ಅದನ್ನೂ ರೈತರಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.ಸಿಂದಗಿಯಲ್ಲಿ 371ನೇ ವಿಧಿಯಡಿ ಸೌಲಭ್ಯ ಕಲ್ಪಿಸುವಂತೆ ಹೋರಾಟ ನಡೆಯುತ್ತಿದೆ. ಅಫಜಲಪುರ ಭಾಗದ ಜನರಿಗೆ ದೊರೆಯುವ ಸೌಲಭ್ಯಗಳು ನಮ್ಮ ಭಾಗದ ಜನರಿಗೂ ದೊರೆಯಬೇಕು ಎಂದರು. ಪ್ರಜಾಸೇವಾ ಆಂದೋಲನದ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ನಮ್ಮ ಭಾಗದಲ್ಲಿ ಹೈನುಗಾರಿಕೆ ಹೆಚ್ಚಾಗಿರುವುದರಿಂದ ಸರ್ಕಾರ ನೀಡುತ್ತಿರುವ ಉತ್ತೇಜನ ರೈತರಿಗೆ ಅನುಕೂಲವಾಗಿದೆ. ಅಂದಿನ ಸಿಎಂ ಸಿದ್ದರಾಮಯ್ಯನರು ರಾಜ್ಯದಲ್ಲಿಯೇ ಅತೀ ಹೆಚ್ಚಿನ ಅನುದಾನ ನೀಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಅಂದಿನ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
-ಯಶವಂತರಾಯಗೌಡ ಪಾಟೀಲ, ಶಾಸಕರು.