ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ
ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆರ್.ವಿ. ಕೆಂಚಳ್ಳೇರ ಮಾತನಾಡಿ, ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರಗಳ ಅಗತ್ಯ ನಮಗಿಲ್ಲ. ಸರ್ಕಾರಗಳು ರೈತರ ಪರ ಕಣ್ಣೀರು ಸುರಿಸುವುದರಿಂದ ಏನೂ ಪ್ರಯೋಜನವಿಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ. ದೆಹಲಿಯಲ್ಲಿ ನಡೆದಿರುವ ಹೋರಾಟವನ್ನು ಇಡೀ ರೈತ ಸಮುದಾಯ ಬೆಂಬಲಿಸುತ್ತದೆ ಎಂದು ತಿಳಿಸಿದರು.ರೈತ ಸಂಘಟನೆಗಳು ನಿರಂತರ ರೈತರ ಸಮಸ್ಯೆಗಾಗಿ ಹೋರಾಟ ಮಾಡುತ್ತಲೇ ಇದ್ದರೂ ಅಧಿಕಾರಿಗಳು ಕಣ್ತೆರೆಯುತ್ತಿಲ್ಲ. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ರೈತರ ಪ್ರಕರಣಗಳು ಧೂಳು ತಿನ್ನುತ್ತಿವೆ. ಹೇಳುವವರು ಕೇಳುವವರು ಇಲ್ಲದ ಈ ಆಡಳಿತದಿಂದಾಗಿ ಜನತೆ ಬೇಸತ್ತಿದ್ದಾರೆ. ರೈತರನ್ನು ಕಂಗೆಡಿಸಿದ ಬರಕ್ಕೆ ರಾಜ್ಯ ಸರ್ಕಾರ ₹೨ ಸಾವಿರ ಪರಿಹಾರ ನೀಡಿರುವುದು ಹಾಸ್ಯಾಸ್ಪದ. ಅದನ್ನು ರೈತ ಮುಖಂಡರು ಸರ್ಕಾರಕ್ಕೆ ಮರಳಿ ನೀಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರೈತರ ನೋವು ಅರ್ಥವಾಗುತ್ತಿಲ್ಲ. ಈ ಸರ್ಕಾರ ಯಾರಿಗಾಗಿ ಇದೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರು ಬಂಡೆದ್ದರೆ ಕ್ರಾಂತಿಯೇ ಆದೀತು ಎಂದು ಎಚ್ಚರಿಸಿದ ಅವರು, ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟವನ್ನು ಬೆಂಬಲಿಸಿ ಮಾ. ೫ರಂದು ಹಾವೇರಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದರು.
ರೈತ ಸಂಘದ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮಹೇಶ ವಿರುಪಣ್ಣನವರ, ಮರಿಗೌಡ ಪಾಟೀಲ, ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ಶ್ರೀಕಾಂತ ದುಂಡಣ್ಣನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ರಾಜೀವ ದಾನಪ್ಪನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಶ್ರೀಧರ ಮಲಗುಂದ ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.