ರಾಮನಗರ: ಕಳೆದ ಬಜೆಟ್ ನಲ್ಲಿ ನೀಡಿದ ಭರವಸೆಗಳಲ್ಲಿ ಶೇಕಡ 80ರಷ್ಟನ್ನು ಅನುಷ್ಠಾನಗೊಳಿಸಿದ್ದೇವೆ. ಈ ಬಾರಿ ಬಜೆಟ್ ತಯಾರಿಸುವ ಸಂಬಂಧ ಅನೇಕರು ಉಪಯುಕ್ತವಾದ ಸಲಹೆಗಳನ್ನು ನೀಡಿದ್ದೀರಿ. ಅದೆಲ್ಲವನ್ನು ಪರಿಗಣಿಸಿ ಜನಸ್ನೇಹಿ ಬಜೆಟ್ ಮಂಡನೆ ಮಾಡುತ್ತೇವೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭರವಸೆ ನೀಡಿದರು.
ನಗರಸಭೆಯು ಆರ್ಥಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ. ನಗರಸಭೆಯ ಆದಾಯದ ಮಿತಿಯಲ್ಲಿ ಜನಪದ ಆಡಳಿತವನ್ನೂ ನೀಡಬೇಕಿದೆ. ನಿಮ್ಮೆಲ್ಲರ ಸಲಹೆಗಳನ್ನು ಪರಿಗಣಿಸಿ ನಗರಸಭೆ ಮಾರ್ಗಸೂಚಿಯಡಿ ಅನುದಾನ ಮೀಸಲಿಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಅಧಿಕಾರಿಗಳು ಮತ್ತು ಸದಸ್ಯರ ಸಹಕಾರದಲ್ಲಿ ಜನಸ್ನೇಹಿ ಬಜೆಟ್ ತಯಾರಿಸುತ್ತೇವೆ ಎಂದು ಹೇಳಿದರು.
ನಗರವು 1.5 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ರೇಷ್ಮೆ ನೂಲು ಬಿಚ್ಚಾಣಿಕೆ ಪ್ರಧಾನವಾಗಿದೆ. ಹಾಗಾಗಿ ಅಭಿವೃದ್ದಿ ಜೊತೆಗೆ ಸವಾಲುಗಳನ್ನು ಎದುರಿಸಬೇಕಿದೆ. ಪ್ರತಿ ವರ್ಷ 6 ಕೋಟಿ ಕಂದಾಯ ಸಂಗ್ರಹವಾಗುತಿತ್ತು. ಕಳೆದ ವರ್ಷ 9 ಕೋಟಿ ರು. ಗುರಿಗೂ ಮೀರಿ ಕಂದಾಯ ವಸೂಲಿ ಮಾಡಲಾಗಿದೆ. ನಾಗರೀಕರು ಬಾಕಿ ಉಳಿಸಿಕೊಂಡಿರುವ ಕಂದಾಯ ಪಾವತಿಸಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಬಜೆಟ್ ನಲ್ಲಿ ಪಕ್ಷಾತೀತ, ಜಾತ್ಯತೀತ ಹಾಗೂ ಧರ್ಮತೀತಾವಾಗಿ ಬಡವ-ಶ್ರೀಮಂತ ಎನ್ನದೆ ಎಲ್ಲ ವರ್ಗದ ಜನರಿಗೂ ಹಲವು ಕಾರ್ಯಕ್ರಮಗಳನ್ನು ಕೊಡಬೇಕಿದೆ. ಅದರಲ್ಲೂ ಕಡು ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕಿದೆ. ಇದಕ್ಕೆ ಪೂರಕವಾಗಿ ಬಜೆಟ್ ತಯಾರಿಸಲಾಗುವುದು ಎಂದು ಕೆ.ಶೇಷಾದ್ರಿ ಭರವಸೆ ನೀಡಿದರು.
ಸಭೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಕೆಂಗಲ್ ಹನುಮಂತಯ್ಯ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ವಿಶೇಷ ಅನುದಾನ ಮೀಸಲಿಡುವುದು. ರಾಮದೇವರ ರಥಕ್ಕೆ ವಿಶೇಷ ಅನುದಾನ, ಬಂಜಾರ ಭವನ ನಿರ್ಮಾಣಕ್ಕೆ ಹಣ ಮೀಸಲು, ಫ್ಲೆಕ್ಸ್ ಅಳವಡಿಕೆ, ನಾಯಿ, ಕೋತಿಗಳಿಗೆ ಕಡಿವಾಣ ಹಾಕುವುದು, ವಿಸ್ತರಣಾ ಬಡಾವಣೆಗಳಿಗೆ ಮೂಲ ಸೌಕರ್ಯ, ಮಡಿಕಟ್ಟೆ(ಡೋಬಿ ಘಾಟ್) ನಿರ್ಮಾಣ ಮಾಡುವಂತೆ ಮುಖಂಡರು ಸಲಹೆ ನೀಡಿದರು.ನಗರದ ವೃತ್ತಗಳಿಗೆ ಟಿಪ್ಪುಸುಲ್ತಾನ್, ಡಾ.ಬಿ.ಆರ್.ಅಂಬೇಡ್ಕರ್, ಕೆಂಗಲ್ ಹನುಮಂತಯ್ಯ, ಡಿ.ದೇವರಾಜ ಅರಸು ಹೆಸರುಗಳ ನಾಮಕರಣ ಮಾಡಬೇಕು. ಫುಡ್ ಸ್ಟ್ರೀಟ್, ಮೇಲ್ಸೇತುವೆ ನಿರ್ಮಾಣ, ಬಂಜಾರ ಸಮುದಾಯಕ್ಕೆ 5 ಲಕ್ಷ ಬಂಜಾರ ಭವನ ನಿರ್ಮಾಣ ಮತ್ತು ಕಸೂತಿ ಕೆಲಸಕ್ಕೆ ಉತ್ತೇಜನ ನೀಡಬೇಕು. ಪಟ್ಟಣ ವ್ಯಾಪ್ತಿಯಲ್ಲಿ ಕೇಬಲ್ ಅಳವಡಿಕೆ, ಹೋಟೆಲ್‌ಗಳು, ಕಲ್ಯಾಣ ಮಂಟಪಗಳು, ಕಟ್ಟಡ ಲೈಸೆನ್ಸ್, ಸೆಸ್, ಸಿಎ ಸೈಟ್ ಗಳನ್ನು ಲೀಸ್ ಕೊಡುವ ಮೂಲಕ ವಿವಿಧ ಮೂಲಗಳಿಂದ ನಗರಸಭೆಗೆ ಬರುವ ಆದಾಯ ಹೆಚ್ಚಳದ ಬಗ್ಗೆ ನಗರಸಭೆ ಚಿಂತನೆ ಮಾಡಬೇಕೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖಂಡರಾದ ಶಿವಕುಮಾರಸ್ವಾಮಿ, ದೊಡ್ಡಿ ಸುರೇಶ್, ಜಿ.ಟಿ.ಕೃಷ್ಣ, ಸ್ವಾಮಿ, ಡಾ.ಎ.ಆರ್. ಗೋವಿಂದಸ್ವಾಮಿ, ಮಂಜುನಾಥ್, ರೈಡ್ ನಾಗರಾಜು, ಕೃಷ್ಣಮೂರ್ತಿ, ವೆಂಕಟೇಶ್, ರಶ್ಮಿ, ಚಿಕ್ಕತಾಯಮ್ಮ, ಉಮೇಶ್, ನಂಜುಂಡಯ್ಯ, ಪ್ರಸಾದ್ ಸೇರಿದಂತೆ ಅನೇಕರು ಸಲಹೆ ನೀಡಿದರು. ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಪೌರಾಯುಕ್ತ ಡಾ.ಜಯಣ್ಣ ಹಾಗೂ ಸದಸ್ಯರು ಭಾಗವಹಿಸಿದ್ದರು.9ಕೆಆರ್ ಎಂಎನ್ 2.ಜೆಪಿಜಿ
ರಾಮನಗರ ನಗರಸಭೆ ಸಭಾಂಗಣದಲ್ಲಿ ನಡೆದ 2026-27ನೇ ಸಾಲಿನ ಆಯವ್ಯಯ (ಬಜೆಟ್) ತಯಾರಿಕೆ ಸಂಬಂಧ ಎರಡನೇ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ನಾಡಪ್ರಭು ಕೆಂಪೇಗೌಡ ಮತ್ತು ಕೆಂಗಲ್ ಹನುಮಂತಯ್ಯ ಜಯಂತಿಗೆ ಅನುದಾನ ಮೀಸಲಿಡುವಂತೆ ಮುಖಂಡರು ಮನವಿ ಸಲ್ಲಿಸಿದರು.