2028ರಲ್ಲಿ 150ಕ್ಕೂ ಹೆಚ್ಚಿನ ಸ್ಥಾನ ಗೆಲ್ತೀವಿ: ಯಡಿಯೂರಪ್ಪ

KannadaprabhaNewsNetwork |  
Published : Mar 01, 2026, 01:30 AM IST
28ಎಚ್.ಎಲ್.ಐ3 ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅಭಿಮಾನಿ ಬಳಗದವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಹುಟ್ಟು ಹಬ್ಬ ಆಚರಣೆ ಸಮಾರಂಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರಿಗೆ ಕೇಕ್ ತಿನ್ನಿಸಿ ಶುಭ ಕೋರಿದರು,ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಅನೇಕ ಮಾಜಿ ಸಾಸಕರು, ಮುಖಂಡರು ಇದ್ದರು.      | Kannada Prabha

ಸಾರಾಂಶ

ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 140 ರಿಂದ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಸೂರ್ಯ- ಚಂದ್ರರಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಬಿಎಸ್‌ವೈ, ರೇಣುಕಾಚಾರ್ಯ ಜನ್ಮದಿನ ಸಮಾರಂಭ । ಬೃಹತ್‌ ಕೇಕ್‌ ಕತ್ತರಿಸಿ ತಿನ್ನಿಸಿದ ಮಾಜಿ ಸಿಎಂ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 140 ರಿಂದ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಸೂರ್ಯ- ಚಂದ್ರರಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ಹೊನ್ನಾಳಿ ಪಟ್ಟಣದ ಎಲ್‌ಐಸಿ ಕಚೇರಿ ಪಕ್ಕದ ಮೈದಾನದಲ್ಲಿ ಎಂ.ಪಿ.ರೇಣುಕಾಚಾರ್ಯ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಬೃಹತ್ ಕೇಕ್ ಕತ್ತರಿಸಿ, ರೇಣುಕಾಚಾರ್ಯ ಅವರಿಗೆ ತಿನ್ನಿಸಿ ಜನ್ಮದಿನ ಶುಭಾಶಯ ಕೋರಿ ಅವರು ಮಾತನಾಡಿದರು.

ಕೇವಲ ಮಾತಿನಿಂದ ಏನೂ ಸಾಧನೆ ಮಾಡಲಾಗುವುದಿಲ್ಲ. ಕಳೆದ ಬಾರಿ ಬಿಜೆಪಿ ಸೋಲಿಗೆ ಏನು ಕಾರಣ, ಎಲ್ಲೆಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. 2028ರ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸಿ ಗೆಲ್ಲಬೇಕು. ಪರಿಶಿಷ್ಟ ಜಾತಿ, ಪಂಗಡ, ಹಾಗೂ ಹಿಂದುಳಿದ ವರ್ಗದವರ ಬಗ್ಗೆ ಹೆಚ್ಚಿನ ಗಮನಹರಿಸುವ ಮೂಲಕ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಚುನಾವಣೆಗೆ ಹೋಗಬೇಕು. ಎಂ.ಪಿ.ರೇಣುಕಾಚಾರ್ಯ ಮಾಡಾಳ್ ವಿರೂಪಾಕ್ಷಪ್ಪ, ರಾಮಚಂದ್ರಪ್ಪ ಸೇರಿದಂತೆ ದಾವಣಗೆರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಶ್ರಮಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹುಟ್ಟುಹಬ್ಬದ ನಿಮಿತ್ತ ಸನ್ಮಾನಿಸಿ ಮಾತನಾಡಿ, ಯಡಿಯೂರಪ್ಪಾಜಿ ಅವರು ತನ್ನ ರಾಜಕೀಯ ಜೀವನಕ್ಕೆ ಜನ್ಮ ನೀಡಿದ ತಂದೆಯಾಗಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕಾಗಿ ಕೇಳಿದಾಗಲೆಲ್ಲಾ ಅನುದಾನ ನೀಡಿದ್ದಾರೆ. ಕ್ಷೇತ್ರದಲ್ಲಿ ಚತುಷ್ಪಥ ರಸ್ತೆ, ಕೆರೆ ತುಂಬಿಸುವುದು ಸೇರಿದಂತೆ ಅನೇಕ ಜನಪರ ಕೆಲಸಗಳು ಆಗಿವೆ. ಇದಕ್ಕೆ ಬಿ.ಎಸ್.ವೈ. ಅವರೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ, ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ, ಕೆಜಿಎಫ್ ಮಾಜಿ ಶಾಸಕ ಸಂಪಂಗಿ, ಹರಿಹರ ಮುಖಂಡ ಚಂದ್ರಶೇಖರ ಪೂಜಾರ್, ,ದಾವಣಗೆರೆ ಲೋಕಿಕೆರೆ ನಾಗರಾಜ್, ಡಾ. ರವಿಕುಮಾರ್ ಮಾತನಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾಚಾರ್ಯ ಅವರ ಧರ್ಮಪತ್ನಿ ಸುಮಿತ್ರ ರೇಣುಕಾಚಾರ್ಯ, ನಿಕಟಪೂರ್ವ ಅಧ್ಯಕ್ಷ ಜೆ.ಕೆ. ಸುರೇಶ್, ಒಬಿಸಿ ಉಪಾಧ್ಯಕ್ಷ ಕುಬೇಂದ್ರಪ್ಪ, ಸಿ.ಆರ್. ಶಿವಾನಂದಪ್ಪ, ಡಿ.ಜಿ.ರಾಜಪ್ಪ, ನ್ಯಾಮತಿ ರವಿಕುಮಾರ್, ನಾಗರಾಜ್ ಕೆ.ಇ. ಸೇರಿದಂತೆ ದಾವಣಗೆರೆ, ಹೊನ್ನಾಳಿ, ನ್ಯಾಮತಿ ಬಿಜೆಪಿ ಅನೇಕ ಮುಖಂಡರು ಇದ್ದರು. ಸಮಾರಂಭದಲ್ಲಿ ಶಿವು ಹುಡೇದ್ ಸ್ವಾಗತಿಸಿ, ಮಾರುತಿ ನಾಯ್ಕ ನಿರೂಪಿಸಿದರು.

- - -

(ಬಾಕ್ಸ್‌) * ಯಡಿಯೂರಪ್ಪ ಎಂದರೆ ಕಾಮಧೇನು: ಸಂಸದ ರಾಘವೇಂದ್ರ

ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, 1970ರಲ್ಲಿ ಶಿಕಾರಿಪುರದಲ್ಲಿ ಪುರಸಭೆ ಸದಸ್ಯ, ಅಧ್ಯಕ್ಷರಾಗುವ ಮೂಲಕ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಜೀವನ ಅರಂಭಿಸಿದ್ದರು. ಇದೀಗ ಅವರು ರಾಜಕೀಯ ಸೇವೆಯಲ್ಲಿ 50 ವರ್ಷ ಪೂರೈಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ರೈತರ ಹೆಸರಿನಲ್ಲಿ ಪ್ರತ್ಯೇಕ ಕೃಷಿ ಬಜೆಟ್ ನೀಡಿದ ಮೊದಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಾಗಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಹೊನ್ನಾಳಿ ಸೇರಿದಂತೆ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಒಂದು ರೀತಿಯಲ್ಲಿ ಕಾಮಧೇನು ಇದ್ದಂತೆ. ಭಾಗ್ಯಲಕ್ಷ್ಮೀ ಯೋಜನೆ, ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ, ಹಾಲಿಗೆ ಪ್ರೋತ್ಸಾಹಧನ, ರಸ್ತೆಗಳ ಅಭಿವೃದ್ಧಿ, ಏತನೀರಾವರಿ, ಹೀಗೆ ಹತ್ತುಹಲವು ಯೋಜನೆಗಳನ್ನು ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೆ ತಂದಿದ್ದರು ಎಂದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ದೂರಿದರು.

- - -

-28ಎಚ್.ಎಲ್.ಐ3.ಜೆಪಿಜಿ:

ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹುಟ್ಟುಹಬ್ಬ ಸಮಾರಂಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರಿಗೆ ಕೇಕ್ ತಿನ್ನಿಸಿ, ಶುಭ ಕೋರಿದರು. ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಮಾಜಿ ಶಾಸಕರು, ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಸಾನ್‌ ಸನ್ಮಾನ್‌ ಇ - ಕೆವೈಸಿಗೆ ಸರ್ವರ್‌ ಅಡ್ಡಿ!
ವರ್ಷಕ್ಕೆ ಲಕ್ಷ ಮಂದಿಗೆ ರೋಗ- 40 ಸಾವಿರ ಸಾವು : ಆತಂಕಕಾರಿ ಮಾಹಿತಿ ನೀಡಿದ ಡಾ.ಸಿಎನ್ ಮಂಜುನಾಥ್