ತುಮಕೂರಿಗೆ ಬೆಂಗಳೂರು ಉತ್ತರ ನಾಮಕರಣ ?

KannadaprabhaNewsNetwork |  
Published : Jun 12, 2025, 03:05 AM ISTUpdated : Jun 12, 2025, 11:29 AM IST
 ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ | Kannada Prabha

ಸಾರಾಂಶ

ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರ ಆದೇಶಿಸಿದ ಬೆನ್ನಲ್ಲೇ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಪರಿವರ್ತಿಸಲು ಚಿಂತನೆ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಉಗಮ ಶ್ರೀನಿವಾಸ್

 ತುಮಕೂರು : ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರ ಆದೇಶಿಸಿದ ಬೆನ್ನಲ್ಲೇ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಪರಿವರ್ತಿಸಲು ಚಿಂತನೆ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ ಬಳಿಕ ಅತಿ ಹೆಚ್ಚು ಜಿಲ್ಲಾ ಪಂಚಾಯತಿ ಕ್ಷೇತ್ರಗಳಿರುವ ತುಮಕೂರನ್ನು ವಿಭಜಿಸಿ ತಿಪಟೂರು ಅಥವಾ ಮಧುಗಿರಿಯನ್ನು ಮತ್ತೊಂದು‌ ಜಿಲ್ಲೆಯನ್ನಾಗಿ ಘೋಷಿಸಲು ತಯಾರಿ ನಡೆಸುತ್ತಿರುವ ಹೊತ್ತಲ್ಲಿ ಬೆಂಗಳೂರಿನ ಉತ್ತರ ಜಿಲ್ಲೆಯನ್ನಾಗಿ ತುಮಕೂರನ್ನು ಪರಿವರ್ತಿಸುವ ಚಿಂತನೆಯಿದೆ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆ ಪರ ವಿರೋಧಕ್ಕೆ ಕಾರಣವಾಗಿದೆ.

ಈಗಾಗಲೇ ಬೆಂಗಳೂರು ನೆಲಮಂಗಲದವರೆಗೂ ಬೆಳೆದಿದೆ. ತುಮಕೂರಿನಿಂದ ದಾಬಸ್ ಪೇಟೆವರೆಗೂ ತುಮಕೂರು ಬೆಳೆದಿದೆ. ‌ಅಲ್ಲದೇ ತುಮಕೂರಿಗೆ ಮೆಟ್ರೋ ರೈಲು ತರುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಹೀಗಾಗಿ ಇಂತದ್ದೊಂದು ಚರ್ಚೆ ಯನ್ನು ಸರ್ಕಾರದ ಮಟ್ಟದಲ್ಲಿ ಹುಟ್ಟು ಹಾಕಲಾಗಿದೆ. ಬೆಂಗಳೂರಿನ ಭವಿಷ್ಯದ ಉಪನಗರಿಯಾಗಿ ತುಮಕೂರು ಬೆಳೆಯುತ್ತಿದೆ.‌ ಪಾವಗಡದಂತಹ ಬರಪೀಡಿತ ತಾಲೂಕಿನಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಸೋಲಾರ್ ಪಾರ್ಕ್ ಇದೆ. ಇನ್ನು ತಿಪಟೂರಿನಲ್ಲಿ ಏಷ್ಯಾದ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆಯಿದೆ. ಮಧುಗಿರಿಯಲ್ಲಿ ವಿಶಿಷ್ಟ ಏಕಶಿಲಾ ಬೆಟ್ಟವಿದೆ. ತುಮಕೂರು ನಗರದಲ್ಲಿ ಭರ್ತಿ 500 ಎಕರೆ ವಿಸ್ತೀರ್ಣದಲ್ಲಿ ಅಮಾನಿಕೆರೆ ಇದೆ.

ಸ್ಮಾರ್ಟ್ ಸಿಟಿಯ ತುಮಕೂರಿನಲ್ಲಿ ಮಹಾನಗರಪಾಲಿಕೆಯೂ ಇದೆ. ನಾಲ್ಕು ಹೆದ್ದಾರಿಗಳು ಜಿಲ್ಲೆಯನ್ನು ಹಾದು ಹೋಗಿವೆ. ರೈಲು ಸಂಪರ್ಕವಿದ್ದು ದಶಕಗಳಿಂದ ನೆ‌ನೆಗುದಿಗೆ ಬಿದ್ದಿರುವ ತುಮಕೂರು- ದಾವಣಗೆರೆ ಹಾಗೂ ತುಮಕೂರು ರಾಯದುರ್ಗ ರೈಲು ಮಾರ್ಗಗಳು ಸಂಸದ ಸೋಮಣ್ಣ ಕೇಂದ್ರ ರೈಲ್ವೆ ಸಚಿವರಾದ ಬಳಿಕ ವೇಗ ಪಡೆದುಕೊಂಡಿದೆ. ರಾಜ್ಯದ 18 ಜಿಲ್ಲೆಗಳನ್ನು ಬೆಂಗಳೂರಿಗೆ ಸಂಪರ್ಕ‌ ಕಲ್ಪಿಸುವ ಹೆಬ್ಬಾಗಿಲು ಎಂಬ ಖ್ಯಾತಿಯನ್ನು ತುಮಕೂರು ಪಡೆದಿದೆ. ಇಷ್ಟೆಲ್ಲ ಅಭಿವೃದ್ಧಿಯಾಗಿರುವ ತುಮಕೂರು 10 ತಾಲೂಕು 11 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆಯನ್ನು ವಿಭಜಿಸಿ‌ ಮತ್ತೊಂದು ಜಿಲ್ಲೆ ಎಂಬ ನಿರೀಕ್ಷೆ ಇತ್ತು. ಆದರೆ ಈಗ ತುಮಕೂರನ್ನು ಬೆಂಗಳೂರಿನ ಉತ್ತರ ಜಿಲ್ಲೆಯನ್ನಾಗಿ ಪರಿವರ್ತಿಸುವ ಚಿಂತನೆ ವ್ಯಾಪಕ‌ ಚರ್ಚೆಗೆ ಗ್ರಾಸವಾಗಿದೆ.

ತುಮಕೂರನ್ನು ಬೆಂಗಳೂರಿನ ಉತ್ತರ ಜಿಲ್ಲೆ ಎಂದು ಘೋಷಿಸಿದರೆ ತುಮಕೂರಿನ ಅಸ್ಮಿತೆಗೆ ಪೆಟ್ಟು ಎಂಬ ಕೂಗು ದೊಡ್ಡ ಮಟ್ಟದಲ್ಲಿ ಎದ್ದಿದೆ. ತುಮಕೂರನ್ನು ತುಮಕೂರಾಗಿಯೇ ಉಳಿಸಿಕೊಳ್ಳಬೇಕೆಂಬ ಆಗ್ರಹ ಕೂಡ ಇದೆ.

ಇನ್ನು ಪಕ್ಷದ ವಲಯದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಪರಿವರ್ತಿಸಿದರೆ ಬೆಂಗಳೂರಿಗೆ ಸರಿಸಮನಾಗಿ ಬೆಳೆಯುವ ಅವಕಾಶವಿದೆ.‌ ಈಗಾಗಲೇ ಬೆಂಗಳೂರು ಬೆಳೆಯಲು ಅವಕಾಶವಿರುವುದು ತುಮಕೂರಿನ ಕಡೆಗೆ. ಹಾಗಾಗಿ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿಸಿದರೆ ಸರ್ವ ರೀತಿಯಲ್ಲೂ ತುಮಕೂರು ಬೆಳೆಯುತ್ತದೆ ಎಂಬ ಆಶಯವಿದೆ.

ಒಟ್ಟಾರೆಯಾಗಿ ತುಮಕೂರನ್ನು ಬೆಂಗಳೂರಿನ ಉತ್ತರ ಜಿಲ್ಲೆಯನ್ನಾಗಿ ಪರಿವರ್ತಿಸುವ ಚಿಂತನೆ ಇದೆ ಎಂಬ ಪರಮೇಶ್ವರ್ ಹೇಳಿಕೆ ಸಂಚಲನ ಮೂಡಿಸಿದೆ.

PREV
Read more Articles on

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ