ಅರಣ್ಯ ಸಂಪತ್ತಿನ ಸಮತೋಲಕ್ಕೆ ತೋಳ ಸಂರಕ್ಷಣೆ ಅತ್ಯವಶ್ಯ

KannadaprabhaNewsNetwork | Published : Sep 7, 2024 1:33 AM

ಸಾರಾಂಶ

ಮನುಷ್ಯ ತನ್ನ ತನಕ್ಕಾಗಿ ಕಾಡು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ವಿನಾಶಕಾರಿ ಜೀವನ ಇಂದಿಗೂ ನಡೆಯುತ್ತಿರುವುದು ವಿಪರ್ಯಾಸ. ಆದರೆ ಇದು ಹೀಗೆ ಮುಂದುವರಿದರೆ ತೋಳದ ಸಂತತಿಯೇ ಇರುವುದಿಲ್ಲ.

ಕನಕಗಿರಿ:

ಮನುಷ್ಯ ಹಾಗೂ ಅರಣ್ಯ ಸಂಪತ್ತಿನ ಸಮತೋಲನಕ್ಕೆ ತೋಳಗಳ ಸಂರಕ್ಷಣೆ ಅನಿವಾರ್ಯವಾಗಿದೆ ಎಂದು ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಹೇಳಿದರು.

ಪಟ್ಟಣದ ಪರಿಶಿಷ್ಟ ಜಾತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ತೋಳ ದಿನ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ತನ್ನ ತನಕ್ಕಾಗಿ ಕಾಡು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ವಿನಾಶಕಾರಿ ಜೀವನ ಇಂದಿಗೂ ನಡೆಯುತ್ತಿರುವುದು ವಿಪರ್ಯಾಸ. ಆದರೆ ಇದು ಹೀಗೆ ಮುಂದುವರಿದರೆ ತೋಳದ ಸಂತತಿಯೇ ಇರುವುದಿಲ್ಲ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ನಿಂತಾಗ ಮಾತ್ರ ಅರಣ್ಯದ ಜತೆಗೆ ವನ್ಯ ಜೀವಿಗಳ ಸಮತೋಲನತೆ ಸೃಷ್ಟಿಯಾಗಲಿದೆ. ರಾಜ್ಯದ ಮೊದಲ ಬಾರಿಗೆ ಕನಕಗಿರಿ ತಾಲೂಕಿನ ಬಂಕಾಪುರ ಅರಣ್ಯ ಪ್ರದೇಶವನ್ನು ೨೦೨೨ರಲ್ಲಿ ತೋಳ ಧಾಮವನ್ನಾಗಿ ಘೋಷಿಸಲಾಗಿದೆ. ಈಗಾಗಲೇ ಇಲ್ಲಿ ತೋಳಗಳಿಗೆ ಬೇಕಾದ ಸೌಲಭ್ಯ ಕಲ್ಪಿಸಲಾಗಿದೆ. ಈ ಪ್ರಾಣಿಗಳ ಸಂತತಿ ಹೆಚ್ಚಳಕ್ಕೆ ಅರಣ್ಯ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ವನ್ಯಜೀವಿ ಸಂಶೋಧಕ ಡಾ. ಸಮದ್ ಕೊಟ್ಟೂರು ಮಾತನಾಡಿ, ಬೆಳಗಾವಿ ಜಿಲ್ಲೆಯ ಕುರಿಗಾಯಿಗಳು ತೋಳವನ್ನು ದೇವರೆಂದು ಪೂಜಿಸುತ್ತಾರೆ. ವನ್ಯಜೀವಿಗಳಿಂದ ಅರಣ್ಯ ಸಂಪತ್ತು ಬೆಳೆಯಲಿದೆ. ಸದ್ಯ ಜಗತ್ತಿನಲ್ಲಿ ೪೩ ಪ್ರಬೇಧದ ತೋಳಗಳಿವೆ. ಕೆಲ ಪ್ರದೇಶಗಳಲ್ಲಿ ಕೆಂಪು, ಕಪ್ಪು ತೋಳ ಕಾಣಬಹುದಾಗಿದೆ. ವನ್ಯಜೀವಿಗಳ ಸಂರಕ್ಷಣೆಗಾಗಿ ಪ್ರತಿ ಹಳ್ಳಿ-ಹಳ್ಳಿಯಲ್ಲೂ ಸರ್ಕಾರ ಸಮಿತಿ ರಚಿಸಬೇಕಾಗಿದೆ. ಕಿಷ್ಕಿಂದೆ, ಹೇಮಗುಡ್ಡ, ಹಿರೇ ಬೆಣಕಲ್, ಕುಮಾರರಾಮನ ಬೆಟ್ಟದ ಪ್ರದೇಶವನ್ನು ವನ್ಯಧಾನ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗಂಗಾವರಿ ತಾಲೂಕು ಅರಣ್ಯಾಧಿಕಾರಿ ಸುಭಾಶ್ಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಅಂತಾರಾಷ್ಟ್ರೀಯ ತೋಳ ದಿನಾಚರಣೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಇಲಾಖೆಯಿಂದ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಗೌರವಿಸಲಾಯಿತು.

ಪ್ರಾಂಶುಪಾಲ ರಾಜು ಮಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಲಯ ಅರಣ್ಯಾಧಿಕಾರಿ ಸ್ವಾತಿ, ಪಪಂ ಸದಸ್ಯರಾದ ಅಭಿಷೇಕ ಕಲುಬಾಗಿಲಮಠ, ರಾಕೇಶ ಕಂಪ್ಲಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಸಂಪನ್ಮೂಲ ವ್ಯಕ್ತಿ ಶರಣೇಗೌಡ, ಉಪ ವಲಯ ಅರಣ್ಯಾಧಿಕಾರಿ ಹನುಮಂತಪ್ಪ ಸೇರಿದಂತೆ ಅರಣ್ಯ ಗಸ್ತು ಪಾಲಕರಾದ ಶಿವಕುಮಾರ, ದವಲಸಾಬ್‌, ಗುಂಡಪ್ಪ, ಬಸವರಾಜ, ರೈತ ಮುಖಂಡ ಶರಣಪ್ಪ ಗದ್ದಿ ಸೇರಿದಂತೆ ಶಾಲೆ ಶಿಕ್ಷಕರು, ಮಕ್ಕಳು ಇದ್ದರು.

Share this article